Advertisement
ಮಾರುಕಟ್ಟೆಗೆಂದು ವಾಣಿಜ್ಯನಗರಿಗೆ ಆಗಮಿಸುವ ಜನರ ವಾಹನಗಳಿಗೆ ಈದ್ಗಾ ಮೈದಾನವೇ ಉಚಿತ ಪಾರ್ಕಿಂಗ್ ಸ್ಥಳ. ಕೆಲ ಹಬ್ಬಗಳಲ್ಲಿ ಮಾರುಕಟ್ಟೆ ಸ್ಥಳ. ಟ್ಯಾಕ್ಸಿ ವಾಹನಗಳಿಗೆ ಇದೊಂದು ನಿಲ್ದಾಣವೂ ಹೌದು. ಹೆಚ್ಚಾಗಿ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳ ಮಾಲೀಕರ ಕಾರುಗಳಿಗೆ ಪಾರ್ಕಿಂಗ್ ತಾಣ. ಆದರೆ ಇದೀಗ ಇವೆಲ್ಲದಕ್ಕೂ ಬ್ರೇಕ್ ಬಿದ್ದ ಕಾರಣ ಸುತ್ತಲಿನ ಕಿರಿದಾದ ರಸ್ತೆಗಳು ಪಾರ್ಕಿಂಗ್ ಸ್ಥಳವಾಗಿ ಮಾರ್ಪಡುತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ.
Related Articles
Advertisement
ಗಣೇಶ ಉತ್ಸವ ಮುಗಿದು ಇಷ್ಟು ಕಳೆದರೂ ಈದ್ಗಾ ಮೈದಾನ ಬಳಕೆ ಯಥಾ ಸ್ಥಿತಿಗೆ ಬಾರದಿರುವುದು ಹಿಂದಿನ ರಹಸ್ಯ ಸಾರ್ವಜನಿಕರಿಗೆ ತಿಳಿಯದಾಗಿದೆ. ಸಾರ್ವಜನಿಕರ ಸದ್ಬಳಕೆಗೆ ಅವಕಾಶ ನೀಡುವಂತೆ ಮಹಾಪೌರ ಸೇರಿದಂತೆ ಕೆಲ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅವರಿಂದ ಬಂದ ಉತ್ತರ ಮಾತ್ರ ಆಶ್ಚರ್ಯ ಮೂಡಿಸುತ್ತಿದೆ. ಈದ್ಗಾ ಮೈದಾನಕ್ಕೆ ಬೀಗ ಹಾಕಿದ್ದು ನಾವಲ್ಲ ಪೊಲೀಸರು ಹಾಕಿದ್ದಾರೆ ಎನ್ನುತ್ತಿದೆ ಪಾಲಿಕೆ. ಆದರೆ ಮೈದಾನದ ಮಾಲೀಕರು ಪಾಲಿಕೆಯಾಗಿರುವ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ಅವರ ನಿರ್ಧಾರಕ್ಕೆ ಪೂರಕವಾಗಿ ಪೊಲೀಸ್ ಇಲಾಖೆ ನಡೆದುಕೊಳ್ಳುವುದಾಗಿ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕಕುಮಾರ, ಮಹಾನಗರ ಪೊಲೀಸ್ ಆಯುಕ್ತ ಲಾಭೂರಾಮ ಅವರು ತಮ್ಮ ಜವಾಬ್ದಾರಿ ವ್ಯಕ್ತಪಡಿಸಿದ್ದರು. ಹೀಗಿರುವಾಗ ಇನ್ನೊಬ್ಬರ ಮಾಲೀಕತ್ವದ ಮೈದಾನಕ್ಕೆ ಅದೇಗೆ ಪೊಲೀಸರು ಬೀಗ ಹಾಕುತ್ತಾರೆ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಹೀಗಾಗಿ ಬೀಗ ಹಾಕಿದ್ದು ಪಾಲಿಕೆಯೋ ಅಥವಾ ಪೊಲೀಸರೋ ಎಂಬುದು ಸ್ಪಷ್ಟವಾಗಬೇಕಿದೆ.
ಮಹಾನಗರ ಪಾಲಿಕೆ ಆಸ್ತಿಗೆ ಪೊಲೀಸರು ಆದ್ಯಾಕೆ ಬೀಗ ಹಾಕಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಮಹಾನಗರ ಪಾಲಿಕೆಯಿಂದ ಯಾವುದೇ ನಿರ್ಬಂಧ ಹೇರಿಲ್ಲ. ಬೀಗ ಹಾಕಿರುವ ಬಗ್ಗೆ ಮಹಾನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ಅವರು ಬೀಗ ತೆಗೆದರೆ ಸರಿ. ಇಲ್ಲದಿದ್ದರೆ ನಾನೇ ಬೀಗ ಒಡೆದು ಸಾರ್ವಜನಿಕ ಬಳಕೆಗೆ ಕಲ್ಪಿಸುತ್ತೇನೆ. –ಈರೇಶ ಅಂಚಟಗೇರಿ, ಮಹಾಪೌರ
ಮಹಾನಗರ ಪಾಲಿಕೆಯಿಂದ ಟ್ಯಾಕ್ಸಿಗಳಿಗೆ ನಿಲ್ದಾಣ ಗುರುತಿಸದ ಕಾರಣ ಕಳೆದ 20 ವರ್ಷಗಳಿಂದ ಈದ್ಗಾ ಮೈದಾನವನ್ನೇ ಅವಲಂಭಿಸಿದ್ದೆವು. ಸುಮಾರು 200 ಕ್ಕೂ ಹೆಚ್ಚು ಟ್ಯಾಕ್ಸಿ ವಾಹನಗಳಿಗೆ ಇದೇ ಆಶ್ರಯ ತಾಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ದಿನ ಪ್ರವೇಶಕ್ಕೆ ನಿರ್ಬಂಧ ಹೇರಿರಲಿಲ್ಲ. ಮಹಾನಗರ ಪಾಲಿಕೆ ನಮ್ಮ ಸಮಸ್ಯೆ ಅರಿತು ಆದಷ್ಟು ಬೇಗ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡಬೇಕು. –ರಾಜು ತಡಸ, ಅಧ್ಯಕ್ಷ, ಶ್ರೀ ಸತ್ಯಸಾಯಿ ಟ್ಯಾಕ್ಸಿ ಸಂಘ
-ಹೇಮರಡ್ಡಿ ಸೈದಾಪುರ