Advertisement
ಕರ್ನಾಟಕದಲ್ಲಿ ಪಟಾಕಿ ಉತ್ಪಾದನಾ ಕೇಂದ್ರವಿಲ್ಲ. ತಮಿಳುನಾಡಿನ ವಿವಿಧ ಭಾಗಗಳಿಂದ ಕರ್ನಾಟಕಕ್ಕೆ ಪಟಾಕಿಗಳು ಪೂರೈಕೆಯಾಗುತ್ತಿವೆ. ಆದರೆ, ಪಟಾಕಿ ಖರೀದಿಸಿ ಸಿಡಿಸಿದಾಗ ಅದರಿಂದ ಉತ್ಪತ್ತಿಯಾಗುವ ಹೊಗೆಯಿಂದ ಇದು ಹಸಿರು ಪಟಾಕಿ ಎಂಬುದನ್ನು ನಿರ್ಧರಿಸುವುದು ಕಷ್ಟಸಾಧ್ಯ. ಕೆಂಪು ಪಟಾಕಿಗೆ ಹೋಲಿಸಿದರೆ ಬೆಳಕು, ಶಬ್ಧಗಳಲ್ಲಿ ಹಸಿರು ಪಟಾಕಿಗೆ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ, ಸಾರ್ವಜನಿಕರು ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ.
Related Articles
Advertisement
ಜೊತೆಗೆ ಹಸಿರು ಪಟಾಕಿಗೂ ಅಪಾಯಕಾರಿ ರಾಸಾಯನಿಕ ಬಳಸಲೇಬೇಕು. ಹೀಗಾಗಿ ಹಸಿರು ಪಟಾಕಿಗಳಿಂದ ಮಾಲಿನ್ಯ ನಿಯಂತ್ರಿಸುವುದು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ ಎನ್ನುತ್ತಾರೆ ಪರಿಸರ ತಜ್ಞ ಡಾ.ಎ.ಎನ್.ಯಲ್ಲಪ್ಪ ರೆಡ್ಡಿ.
ಹಸಿರು ಪಟಾಕಿ ಪತ್ತೆಹಚ್ಚುವುದು ಹೇಗೆ?:
ಹಸಿರು ಪಟಾಕಿ ಪ್ಯಾಕ್‌ಗಳ ಮೇಲೆ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಸಮಿತಿ, ರಾಷ್ಟ್ರೀಯ ಪರಿಸರ ಹಾಗೂ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ಹಸಿರು ಲೋಗೋ ಇರುತ್ತದೆ.
ಅದರ ಕ್ಯೂಆರ್ ಕೋಡ್ ಸ್ಕ್ಯಾನ್ ಕೂಡ ಇರಲಿದೆ. ಗ್ರಾಹಕರು ಆ್ಯಂಡ್ರಾಯ್ಡ್ ಮೊಬೈಲ್‌ಗಳ ಪ್ಲೇಸ್ಟೋರ್ ನಿಂದ ಸಿಎಸ್‌ಐಆರ್, ನೀಲಿ ಗ್ರೀನ್ ಕ್ಯೂಆರ್ ಕೋಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ. ಪಟಾಕಿ ಪ್ಯಾಕ್‌ಗಳ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಅದರಲ್ಲಿ ಹಸಿರು ಪಟಾಕಿ ಎಂದು ಬರುತ್ತದೆ. ಪಟಾಕಿ ಪ್ಯಾಕ್‌ಗಳ ಮೇಲೆ ಈ ಲೋಗೋಗಳು, ಕ್ಯೂಆರ್ ಕೋಡ್ ಇಲ್ಲದಿದ್ದರೆ ಇವುಗಳನ್ನು ಹಸಿರು ಪಟಾಕಿ ಎಂದು ದೃಢಪಡಿಸುವುದು ಕಷ್ಟ.
ಪರವಾನಗಿದಾರರಿಂದ ಪಟಾಕಿ ಖರೀದಿಸಿ:
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಹಾಗೂ ಎನ್‌ಇಇಆರ್‌ಐನ ವಿಜ್ಞಾನಿಗಳು ಹಸಿರು ಪಟಾಕಿ ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ಲೀಥಿಯಂ, ಆರ್ಸೆನಿಕ್, ಬೇರಿಯಂ ಮತ್ತು ಸತು, ನೈಟ್ರೇಟ್‌ನಂತಹ ಅಪಾಯಕಾರಿ ರಾಸಾಯನಿಕ ಬಳಸುವಂತಿಲ್ಲ. ಇದರ ಉತ್ಪಾದನೆಗೆ ದೇಶದ 230 ಕಂಪನಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಬೀದಿ ಬದಿ ವ್ಯಾಪಾರಿಗಳಿಂದ ಹಸಿರು ಪಟಾಕಿ ಗಳನ್ನು ಖರೀದಿಸುವ ಬದಲು ಪರವಾನಗಿ ಹೊಂದಿರುವ ಮಾರಾಟಗಾರರಿಂದ ಖರೀದಿಸಿದರೆ ಉತ್ತಮ.
ಕಾನೂನು ಸಮರ್ಪಕ ಅನುಷ್ಠಾನ ಇಲ್ಲ
ಸಾರ್ವಜನಿಕರಿಗೆ ಪಟಾಕಿ ಹೊಗೆಯಿಂದ ಉಂಟಾಗುವ ಅನಾನುಕೂಲತೆ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಸಂವಿಧಾನದ 48 “ಎ’ ಪ್ರಕಾರ ನಾಡಿನ ನೆಲ, ಜಲ, ಗಾಳಿ, ಪರಿಸರ ಸಂರಕ್ಷಣೆ ಮಾಡುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಹೇಳಲಾಗಿದೆ. ಜೊತೆಗೆ 51 “ಜಿ’ನಲ್ಲಿ ಪ್ರತಿಯೊಬ್ಬ ನಾಗರಿಕರೂ ಪ್ರಾಣವಾಯು, ಜೀವಜಲ, ಮಣ್ಣು ಮಾಲಿನ್ಯ ಮಾಡಬಾರದು ಎಂಬ ನಿಯಮಗಳಿವೆ. ಕಾನೂನು ಸ್ಪಷ್ಟವಾಗಿದ್ದರೂ ಇದನ್ನು ಸಮರ್ಪಕ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದ್ದೇವೆ ಎನ್ನುತ್ತಾರೆ ಪರಿಸರ ತಜ್ಞರು.
ಕೆಂಪು ಪಟಾಕಿ ಮಾರಾಟ ಪತ್ತೆಯಾದರೆ ಕೆಎಸ್‌ಪಿಸಿಬಿಯ ಪರಿಸರ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಕೆಂಪು ಪಟಾಕಿಯಿಂದ ಪರಿಸರಕ್ಕೆ ಬಹಳಷ್ಟು ಹಾನಿ ಇದೆ. ನಾಗರಿಕರೆಲ್ಲರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಪರಿಸರ ಸ್ನೇಹಿ ದೀಪಾವಳಿ ಆಚರಿಸಬೇಕು. ●ಎಂ.ಜಿ.ಯತೀಶ್, ಹಿರಿಯ ಪರಿಸರ ಅಧಿಕಾರಿ, ಕೆಎಸ್‌ಪಿಸಿಬಿ.
-ಅವಿನಾಶ ಮೂಡಂಬಿಕಾನ