ಔರಾದ: ಔರಾದ ತಾಲೂಕಿನಲ್ಲಿ ಅನೇಕ ಜಾನಪದ ಕಲಾವಿದರು ಇದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಾಲೂಕಿನಲ್ಲಿ ಕಲಾವಿದರನ್ನು ಗುರುತಿಸುವ ಕೆಲಸ ನಡೆಯುತ್ತಿಲ್ಲ ಎಂದು ಶಾಸಕ ಪ್ರಭು ಚವ್ಹಾಣ ಕಳವಳ ವ್ಯಕ್ತಪಡಿಸಿದರು.
ಜೋಜನಾ ಗ್ರಾಮದಲ್ಲಿ ರವಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿದ್ದ ಜನಪರ ಉತ್ಸವ
ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾಡಿದರು. ತಾಲೂಕಿನ ಕಲಾವಿದರಿಗೆ ಹಾಗೂ ನಮ್ಮ ಪಾಲಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂಟು ವರ್ಷಗಳಿಂದ ನಿರುಪಯುಕ್ತವಾಗಿದೆ. ಮಾಸಾಶನಕ್ಕಾಗಿ ತಾಲೂಕಿನ ಕಲಾವಿದರು ಬೀದರ ಕೇಂದ್ರದ ಕಚೇರಿಗೆ ತೆರಳಿದರೆ ಅಧಿಕಾರಿಗಳು ಹಣ ಕೇಳಿ ಪಡೆಯುತ್ತಿದ್ದಾರೆ. ಕಚೇರಿಯಲ್ಲಿನ ಅಕ್ರಮವನ್ನು ಬೇರು ಸಮೇತ ಅಳಿಸಿ ಹಾಕಿ ತಾಲೂಕಿನ ಕಲಾವಿದರನ್ನು ನಿಸ್ವಾರ್ಥವಾಗಿ ಗುರುತಿಸುವ ಕೆಲಸ ಇಲಾಖೆಯ ಅಧಿಕಾರಿಗಳಿಂದ ನಡೆಯಬೇಕು ಎಂದು ತಾಕೀತು ಮಾಡಿದರು.
ಕಂಪ್ಯೂಟರ್ ಯುಗದಲ್ಲಿ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಗಳು ನಮ್ಮಿಂದ ದೂರವಾಗುತ್ತಿವೆ. ಜೋಜನಾ ಸೇರಿದಂತೆ ಇನ್ನುಳಿದ ಗ್ರಾಮದಲ್ಲಿರುವ ಹಿರಿಯರು ತಮ್ಮ ಮಕ್ಕಳಿಗೆ ಹಾಗೂ ಗ್ರಾಮದ ಯುವ ಸಮೂಹಕ್ಕೆ ಕಲೆ ಸಾಹಿತ್ಯದ ಅಭಿರುಚಿ ಬೆಳೆಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಮಾತನಾಡಿ, ಮೂರು ತಿಂಗಳ ಹಿಂದೆ
ಕಚೇಗೆ ಬಂದು ಕೆಲಸ ಮಾಡುತ್ತಿದ್ದೇನೆ. ನಮ್ಮ ಅವಧಿಗೂ ಮುನ್ನ ಮಾಸಾಶನಕ್ಕಾಗಿ ಹಣ ಪಡೆದುಕೊಳ್ಳುವ ಪದ್ಧತಿ
ಇದ್ದಿರಬಹುದು. ನಾವು ಬಂದ ಮೇಲೆ ಅವುಗಳಿಗೆ ತಡೆ ಹಿಡಿಯಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜನಪದ ಕಲಾವಿದರಿಂದ ನಡೆದ ವಿವಿಧ ನೃತ್ಯಗಳು ನೋಡುಗರ ಗಮನ ಸೆಳೆದವು. ಜೋಜನಾ ಗ್ರಾಪಂ ಅಧ್ಯಕ್ಷ ಘಾಳಾರೆಡ್ಡಿ, ಜಿಪಂ ಸದಸ್ಯ ಅನೀಲ ಗುಂಡಪ್ಪ, ತಾಪಂ ಸದಸ್ಯೆ ಧೋಂಡಬಾಯಿ ರಘುನಾಥ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ, ಶಿವಾನಂದ ಔರಾದೆ, ಕಸಾಪ ತಾಲೂಕು ಅಧ್ಯಕ್ಷ ಜಗನಾಥ ಮೂಲಗೆ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಸಂಜುಕುಮಾರ ಜುಮ್ಮಾ, ಗ್ರಾಪಂ ಉಪಾಧ್ಯಕ್ಷ ಕಸ್ತೂರಿಬಾಯಿ ಸುಭಾಷ ಹಾಗೂ ಜಾನಪದ ಕಲಾವಿದರು, ಗ್ರಾಮದ ಮುಖಂಡರು ಇದ್ದರು.