ನವದೆಹಲಿ: ಸಿಬಿಎಸ್ ಇಯ ಹತ್ತನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಬುಧವಾರ ಪ್ರಕಟವಾಗಿತ್ತು. ಅದೇ ರೀತಿ ಸಿಬಿಎಸ್ ಇಯ ದ್ವಿತೀಯ ಪಿಯುಸಿ ಫಲಿತಾಂಶ ಜುಲೈ 14ರಂದು ಪ್ರಕಟವಾಗಿದ್ದು, ಇದರಲ್ಲಿ ಅವಳಿ ಸಹೋದರಿಯರು ಎಲ್ಲರ ಹುಬ್ಬೇರುವಂತೆ ಮಾಡಿರುವುದು ಕುತೂಹಲಕಾರಿ ಸಂಗತಿಯಾಗಿದೆ.
ಸಿಬಿಎಸ್ ಇಯ ದ್ವಿತೀಯ ಪಿಯುಸಿ ಕಲಿಯುತ್ತಿರುವ ಇಬ್ಬರು ಅವಳಿ ಸಹೋದರಿಯರು ಮುಖಚಹರೆ, ರೂಪದಲ್ಲಿ ಒಂದೇ ತೆರನಾಗಿದ್ದಾರೆ, ಆದರೆ ವಿಶೇಷವೆಂದರೆ ಇಬ್ಬರು ಅಂತಿಮ ಪರೀಕ್ಷೆಯಲ್ಲಿ ಒಂದೇ ರೀತಿ ಅಂಕ ಪಡೆದಿರುವುದು ವಿಶೇಷತೆಯಾಗಿದೆ.
ದೆಹಲಿ ಸಮೀಪದ ನೋಯ್ಡಾ ನಿವಾಸಿಗಳಾಗಿರುವ ಮಾನಸಿ ಮತ್ತು ಮಾನ್ಯ ಅವಳಿ ಸಹೋದರಿಯರು. ಇಬ್ಬರೂ ಗ್ರೇಟರ್ ನೋಯ್ಡಾದ ಆ್ಯಸ್ಟರ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳಾಗಿದ್ದು, ಇಬ್ಬರೂ ಸಿಬಿಎಸ್ ಇ ದ್ವಿತೀಯ ಪಿಯುಸಿಯಲ್ಲಿ ಶೇ.95.8ರಷ್ಟು ಅಂಕ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಇಂಗ್ಲಿಷ್ ಹಾಗೂ ಕಂಪ್ಯೂಟರ್ ಸೈನ್ಸ್ ನಲ್ಲಿ 98ಅಂಕ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ದೈಹಿಕ ಶಿಕ್ಷಣದಲ್ಲಿ 95 ಅಂಕ ಪಡೆದಿರುವುದಾಗಿ ವರದಿ ತಿಳಿಸಿದೆ. ಅವಳಿ ಸಹೋದರಿಯರಾದ ನಮ್ಮನ್ನು ಎಲ್ಲರೂ ಗುರುತಿಸುತ್ತಾರೆ. ನಮ್ಮ ಇಬ್ಬರ ಹೆಸರು ಮಾತ್ರ ಬೇರೆ, ಬೇರೆ ಅಷ್ಟೇ. ಪರೀಕ್ಷೆಯಲ್ಲಿ ಉತ್ತಮ ಅಂಕ ಬರುವ ಬಗ್ಗೆ ನಿರೀಕ್ಷೆ ಇತ್ತು. ಆದರೆ ನಮ್ಮಿಬ್ಬರಿಗೂ ಒಂದೇ ತೆರನಾದ ಅಂಕ ಬರುತ್ತದೆ ಎಂದು ಊಹಿಸಿರಲಿಲ್ಲ. ಪರೀಕ್ಷೆ ನಂತರ ನಾವಿಬ್ಬರೂ ನಮ್ಮ ಅಧ್ಯಯನದ ಬಗ್ಗೆ ವಿಶ್ಲೇಷಣೆ ನಡೆಸಿದಾಗ ಮಾನ್ಯಾಗೆ ಹೆಚ್ಚಿನ ಅಂಕ ಸಿಗುವ ನಿರೀಕ್ಷೆಯಲ್ಲಿದ್ದೇವು ಎಂದು ಮಾನಸಿ ಪಿಟಿಐಗೆ ತಿಳಿಸಿದ್ದಾಳೆ.
ಅವಳಿ ಸಹೋದರಿಯರು ಎಂಜಿನಿಯರಿಂಗ್ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅವಳಿಯಾದವರು ಒಂದೇ ರೀತಿ ಅಂಕ ಪಡೆಯುತ್ತಾರೆ ಎಂಬುದಾಗಿ ಎರಡು ವರ್ಷಗಳ ಹಿಂದೆ ಓದಿದ್ದ ನೆನಪು. ಆದರೆ ನಾನಾಗ ಆಲೋಚಿಸಿದೆ ಇದೊಂದು ಅತಿರೇಕದ ಸಂಭಾವ್ಯತೆ ಎಂದು ಹೇಳಿದ್ದೆ. ಈಗಲೂ ನಮಗೆ ನಂಬಲೂ ಆಗುತ್ತಿಲ್ಲ, ನಾವಿಬ್ಬರೂ ಒಂದೇ ರೀತಿ ಅಂಕ ಪಡೆದಿದ್ದೇವೆ ಎಂಬುದಾಗಿ ಎಂದು ಮಾನ್ಯ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.