ಕುಂಬಳೆ: ಭಗವಂತನಿಲ್ಲದೆ ಬದುಕಿಲ್ಲ. ಭಗವಂತನ ಸ್ಮರಣೆಯೇ ಜೀವನದ ಆಧಾರ. ಅದಿಲ್ಲದೆ ಆದರ್ಶ ಬದುಕು ನಡೆಸಲು ಅಸಾಧ್ಯ ಎಂದು ಹಿರಿಯ ವಿಶ್ರಾಂತ ಪತ್ರಕರ್ತ ಶಿರಿಯ ಶ್ರೀ ಸತ್ಯಸಾಯಿ ಸಮಿತಿಯ ಮಾಜಿ ಸಂಚಾಲಕ ಮಲಾರ್ ಜಯರಾಮ ರೈ ಅವರು ಅಭಿಪ್ರಾಯಪಟ್ಟರು.
ಕಾಸರಗೋಡು ಶ್ರೀ ಸತ್ಯಸಾಯಿ ಸಮಿತಿಗಳ ಆಶ್ರಯದಲ್ಲಿ ಯೂತ್‌ವಿಂಗ್‌ನ ನೇತೃತ್ವದಲ್ಲಿ ಭಗವಾನ್ ಸತ್ಯಸಾಯಿಬಾಬಾ ಅವರ ಅವತಾರ ಘೋಷಣಾ ದಿನಾಚರಣೆಯಂಗವಾಗಿ ಕುಂಟಗೇರಡ್ಕ ಜಿಡಬ್ಲ್ಯುಎಲ್‌ಪಿ ಶಾಲೆಯಲ್ಲಿ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಗವಂತನ ಸ್ಮರಣೆ ಕಂಬದಂತೆ ಭದ್ರವಾಗಿರಬೇಕು. ಕಂಬವನ್ನು ಹಿಡಿದು ಎಷ್ಟೇ ವೇಗದಲ್ಲಿ ತಿರುಗಿದರೂ ಏನೂ ಸಂಭವಿಸಿದು. ಆದರೆ ಕಂಬವನ್ನು ಹಿಡಿಯದೆ ತಿರುಗಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.ಬದುಕಿನಲ್ಲಿ ಭಗವಂತನ ಧ್ಯಾನವನ್ನು ಮಾಡಿದಲ್ಲಿ ಮಾನಸಿಕ ನೆಮ್ಮದಿ ಲಭ್ಯ ಎಂದರು.
ಜಿಲ್ಲಾ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಉಪಾಧ್ಯಕ್ಷ ರಾಮಚಂದ್ರ ಸಿ. ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿಧನ ಹೊಂದಿದ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಯುವ ಸಂಚಾಲಕ ಕೃಷ್ಣಪ್ರಸಾದ್ ಕಾಟುಕುಕ್ಕೆ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿಗಳಾದ ಕಾಸರಗೋಡು, ಮಧೂರು, ಕಾಟುಕುಕ್ಕೆ, ಉಪ್ಪಳ. ಶಿರಿಯ ಹಾಗೂ ಬಾಯಾರುಗಳಿಂದ ಪ್ರತಿನಿಧಿಗಳು ಭಾಗವಹಿಸಿದರು. ಶಾಲಾ ಮುಖ್ಯ ಶಿಕ್ಷಕ ರಾಮಚಂದ್ರ ಭಟ್, ಶಾಲಾ ಶಿಕ್ಷಕರು ಸಹಕರಿಸಿದರು.
ಆರಂಭದಲ್ಲಿ ಕುಂಟಗೇರಡ್ಕ ಮಥುರಾನಗರದ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಲಾಯಿತು. ಬಳಿಕ ಶ್ರೀ ಸತ್ಯಸಾಯಿ ವಿದ್ಯಾಜ್ಯೋತಿ ಯೋಜನೆಯಡಿಯಲ್ಲಿ ಜಿಲ್ಲಾ ಸಾಯಿ ಸಂಸ್ಥೆಗಳು ದತ್ತು ತೆಗೆದುಕೊಂಡ ಕುಂಟಗೇರಡ್ಕ ಜಿ.ಡಬ್ಲ್ಯೂ .ಎಲ್.ಪಿ. ಶಾಲಾ ಪರಿಸರದವರೆಗೆ ಸಾಯಿ ನಾಮಸ್ಮರಣೆಯೊಂದಿಗೆ ಸಾಯಿಬಾಬಾರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿ ತರಲಾಯಿತು.
ಭಜನೆ, ಸತ್ಸಂಗ ಬಳಿಕ ಮಂಗಳಾರತಿ ನೆರವೇರಿತು. ಸ್ವತ್ಛತಾ ಸೆ ದಿವ್ಯತಾ ಸಂದೇಶದೊಂದಿಗೆ ಶಾಲಾ ವಠಾರವನ್ನು ಶುಚಿಗೊಳಿಸಲಾಯಿತು. ಕೊನೆಯಲ್ಲಿ ನಾರಾಯಣ ಸೇವೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಭಕ್ತರು ಭಾವಹಿಸಿದರು.