ಮುಂಬಯಿ : ಖಾಸಗಿ ರಂಗದ ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್ ತನ ಆಯ್ದ ಮಾಸಿಕ ವೇತನದ ಗ್ರಾಹಕರಿಗೆ 15 ಲಕ್ಷ ರೂ. ವರೆಗಿನ ವೈಯಕ್ತಿಕ ಸಾಲವನ್ನು ಎಟಿಎಂ ಮೂಲಕ ಒದಗಿಸಲು ಮುಂದಾಗಿದೆ. ಈ ವರ್ಗದ ಗ್ರಾಹಕರು ಈ ಮೊದಲು ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಹಾಕಿರದಿದ್ದರೂ ಅವರಿಗೆ ಎಟಿಎಂ ಮೂಲಕ ಸಾಲ ಪಡೆಯುವ ಅವಕಾಶ ಇರುತ್ತದೆ.
ಖಾಸಗಿ ಸಾಲ ಪಡೆಯಬಯಸುವವರು ಸಾಲ ಮಾಹಿತಿ ಕಂಪೆನಿಗಳ ಅಂಕಿ ಅಂಶಗಳನ್ನು ಬಳಸಿಕೊಂಡು “ಆಯ್ದ ಗ್ರಾಹಕರ’ ಅರ್ಹತೆಯನ್ನು ಪಡೆಯಬಹುದಾಗಿದೆ. ಅಂತಹ ಗ್ರಾಹಕರು ವ್ಯವಹಾರವೊಂದನ್ನು ಪೂರ್ಣಗೊಳಿಸಿದಾಗ ಅವರಿಗೆ ಎಟಿಎಂ ಪರದೆಯಲ್ಲಿ “ನೀವು ಖಾಸಗಿ ಸಾಲದ ಅರ್ಹತೆಯನ್ನು ಪಡೆದವರಾಗಿರುತ್ತೀರಿ’ ಎಂಬ ಸಂದೇಶವೊಂದು ಕಾಣಿಸಿಕೊಳ್ಳುತ್ತದೆ.
ಒಂದೊಮ್ಮೆ ಆ ಗ್ರಾಹಕನು ಆಗ ಸಾಲ ಪಡೆಯಲು ಬಯಸಿದಲ್ಲಿ ಐದು ವರ್ಷಗಳ ಅವಧಿಗೆ 15 ಲಕ್ಷ ರೂ.ಗಳ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ ಮತ್ತು ತತ್‌ಕ್ಷಣವೇ ಆ ಮೊತ್ತ ಆ ಗ್ರಾಹಕನ ಉಳಿತಾಯ ಖಾತೆಗೆ ಜಮೆಯಾಗುತ್ತದೆ ಎಂದು ಬ್ಯಾಂಕ್ ಪ್ರಕಟನೆ ತಿಳಿಸಿದೆ. ಈ ಸಾಲ ಸೌಲಭ್ಯದ ಸೇವೆಯು ಈಗಾಗಲೇ ಆಯ್ದ ಮಾಸಿಕ ವೇತನ ಪಡೆಯುತ್ತಿರುವ ಗ್ರಾಹಕರಿಗೆ ಸಿಗುವಂತೆ ಮಾಡಲಾಗಿದೆ.
ಸಾಲ ಮೊತ್ತ ಗ್ರಾಹಕನ ಖಾತೆಗೆ ಜಮೆಯಾಗುವ ಮುನ್ನ ಗ್ರಾಹಕನಿಗೆ ಆತನಿಗೆ ವಿವಿಧ ಸಾಲ ಮೊತ್ತಗಳ ಆಯ್ಕೆಗೆ ಅವಕಾಶ ಮಾಡಿಕೊಡಲಾಗುತ್ತದೆ ಮತ್ತು ಆತನಿಗೆ ಸಾಲದ ಬಡ್ಡಿ ದರ, ಸಂಸ್ಕರಣ ಶುಲ್ಕ ಮತ್ತು ತಿಂಗಳ ಕಂತು ಇತ್ಯಾದಿ ವಿವರಗಳನ್ನು ತಿಳಿಸಲಾಗುತ್ತದೆ.
ಗ್ರಾಹಕರು ವೈಯಕ್ತಿಕ ಸಾಲವನ್ನು ಆಯ್ಕೆಮಾಡಿದಾಗ ಸುಲಭದಲ್ಲಿ ಅವರಿಗೆ ಹಣ ಸಿಗುವುದಕ್ಕೆ ಅವಕಾಶ ಉಂಟಾಗುತ್ತದೆ ಎಂದು ಐಸಿಐಸಿಐ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಅನೂಪ್ ಬಾಗ್‌ಚಿ ಹೇಳಿದರು.
ಎಟಿಎಂ ಮೂಲಕ 15 ಲಕ್ಷ ರೂ. ಸಾಲ ಪಡೆಯುವ ಈ ಪ್ರಕ್ರಿಯೆ ಸಂಪೂರ್ಣವಾಗಿ ಕಾಗದ ರಹಿತವಾಗಿದ್ದು ತತ್‌ಕ್ಷಣದ ಸೌಕರ್ಯವಾಗಿರುತ್ತದೆ ಮತ್ತು ಇದರಿಂದ ಗ್ರಾಹಕರಿಗೆ ಬಹಳ ಸುಲಭದಲ್ಲಿ ಸಾಲ ಸೌಲಭ್ಯ ಸಿಗುವಂತಾಗುತ್ತದೆ ಎಂದವರು ಹೇಳಿದರು.