Advertisement

ಭಾರತ-ಪಾಕ್ ಕಾದಾಡದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಅರ್ಥವಿಲ್ಲ: ವಕಾರ್

09:55 AM Mar 18, 2020 | Hari Prasad |

ಕರಾಚಿ: ಒಂದು ಕಾಲದ ವಿಶ್ವ ವಿಖ್ಯಾತ ವೇಗಿ ವಕಾರ್ ಯೂನಸ್ ಅವರು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕೂಟದ ವೇಳಾಪಟ್ಟಿ ಕುರಿತಾಗಿ ಅಪಸ್ವರ ತೆಗೆದಿದ್ದಾರೆ.

Advertisement

ಕ್ರಿಕೆಟ್ ಜಗತ್ತಿನ ಎರಡು ಪ್ರಮುಖ ರಾಷ್ಟ್ರಗಳಾಗಿರುವ ಮತ್ತು ಸಾಂಪ್ರದಾಯಿಕ ಎದುರಾಳಿಗಳಾಗಿರುವ ಭಾರತ ಮತ್ತು ಪಾಕಿಸ್ಥಾನದ ನಡುವೆ ಟೆಸ್ಟ್ ಪಂದ್ಯಗಳು ನಡೆಯದ ಹೊರತಾಗಿ ಐಸಿಸಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಎಂಬ ಈ ಹೊಸ ಪರಿಕಲ್ಪನೆ ಪರಿಪೂರ್ಣವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಕೂಟದಲ್ಲಿ ವಿಶ್ವದ ಒಂಭತ್ತು ಟೆಸ್ಟ್ ರ್ಯಾಂಕಿಂಗ್ ದೇಶಗಳು ತಾವು ಆಯ್ದುಕೊಂಡಿರುವ ತಂಡಗಳ ವಿರುದ್ಧ ಒಟ್ಟು ಆರು ದ್ವಿಪಕ್ಷೀಯ ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿರುತ್ತದೆ. ಇವುಗಳಲ್ಲಿ ಅತೀ ಹೆಚ್ಚಿನ ಅಂಕಗಳನ್ನು ಪಡೆಯುವ ಎರಡು ತಂಡಗಳು 2021ರ ಜೂನ್ ತಿಂಗಳಿನಲ್ಲಿ ಇಂಗ್ಲಂಡ್ ನಲ್ಲಿ ನಡೆಯಲಿರುವ ಫೈನಲ್ ಟೆಸ್ಟ್ ಪಂದ್ಯಾಟದಲ್ಲಿ ಪರಸ್ಪರ ಪ್ರಶಸ್ತಿಗಾಗಿ ಸೆಣೆಸಲಿವೆ.

ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಭಾರತ್ ಮತ್ತು ಪಾಕಿಸ್ಥಾನ ನಡುವೆ ಕ್ರಿಕೆಟ್ ಪಂದ್ಯಾಟ ನಡೆಯುವುದು ಅಸಾಧ್ಯವಾಗಿದ್ದರೂ ಐಸಿಸಿ ಪ್ರಯತ್ನಪಟ್ಟಲ್ಲಿ ಇದೇನೂ ಅಸಾಧ್ಯವಲ್ಲ ಎಂದು ಪಾಕಿಸ್ಥಾನದ ಮಾಜೀ ವೇಗಿ ಅಭಿಪ್ರಾಯಪಟ್ಟಿದ್ದಾರೆ.

2008ರ ಮುಂಬಯಿ ದಾಳಿಯ ಬಳಿಕ ಭಾರತ ಪಾಕಿಸ್ಥಾನ ಪ್ರವಾಸವನ್ನು ಕೈಗೊಂಡಿಲ್ಲ ಮತ್ತು ಎರಡೂ ದೇಶಗಳ ನಡುವೆ ಹಳಸಿದ ರಾಜಕೀಯ ಸನ್ನಿವೇಶಗಳ ಕಾರಣದಿಂದ 2007ರಿಂದ ಇಲ್ಲಿಯವರೆಗೆ ಈ ಎರಡು ದೇಶಗಳ ನಡುವೆ ಯಾವುದೇ ಟೆಸ್ಟ್ ಸರಣಿ ನಡೆದಿಲ್ಲ.

Advertisement

ಈ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಇದೀಗ ಅತ್ಯಧಿಕ 9  ಪಂದ್ಯಗಳನ್ನು (4 ಟೆಸ್ಟ್ ಸರಣಿ) ಆಡಿರುವ ಭಾರತವೇ 360 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. 10  ಪಂದ್ಯಗಳಿಂದ (3 ಟೆಸ್ಟ್ ಸರಣಿ) 296 ಅಂಕಗಳನ್ನು ಸಂಪಾದಿಸಿರುವ ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ಹಾಗೂ ಮೊನ್ನೆ ತಾನೆ ಮುಕ್ತಾಯಗೊಂಡ ಭಾರತದೆದುರಿನ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ನ್ಯೂಝಿಲ್ಯಾಂಡ್ 7  ಪಂದ್ಯಗಳಿಂದ (3 ಟೆಸ್ಟ್ ಸರಣಿ) 180 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನು 2 ಸರಣಿಗಳಲ್ಲಿ 5 ಟೆಸ್ಟ್ ಪಂದ್ಯಗಳನ್ನು ಆಡಿ 140 ಅಂಕಗಳನ್ನು ಪಡೆದುಕೊಂಡಿರುವ ಪಾಕಿಸ್ಥಾನ ಸದ್ಯ 5ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next