ಮುಂಬೈ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಇನ್ನು ಕೇವಲ ಎರಡು ದಿನಗಳಲ್ಲಿ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವೆ ಆರಂಭಿಕ ಪಂದ್ಯ ನಡೆಯಲಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಉದ್ಘಾಟನಾ ಪಂದ್ಯ ನಡೆಯಲಿದೆ. ಆದರೆ ಬಿಸಿಸಿಐ ನಿರ್ಧರಿಸಿದಂತೆ ಯಾವುದೇ ಉದ್ಘಟನಾ ಸಮಾರಂಭ ನಡೆಯುವುದಿಲ್ಲ ಎಂದು ವರದಿಯಾಗಿದೆ.
ಏಕದಿನ ವಿಶ್ವಕಪ್ ನ ಇತ್ತೀಚಿನ ಹಲವು ಆವೃತ್ತಿಗಳಲ್ಲಿ ಆರಂಭಿಕ ಪಂದ್ಯಕ್ಕೂ ಮುನ್ನ ಯಾವುದೇ ಅಧಿಕೃತ ಉದ್ಘಾಟನಾ ಸಮಾರಂಭ ನಡೆಯದಿರುವುದು ಇದೇ ಮೊದಲು.
ಆರಂಭದಲ್ಲಿ ಮೊದಲ ಪಂದ್ಯಕ್ಕೆ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 4ರಂದು ಅಹಮದಾಬಾದ್ ನಲ್ಲಿ ಅದ್ದೂರಿ ಓಪನಿಂಗ್ ಸೆರಮನಿ ನಡೆಯಲಿದೆ ಎಂದು ಬಿಸಿಸಿಐ ಯೋಜಿಸಿತ್ತು. ಆದರೆ ಇದೀಗ ಕ್ರಿಕೆಟ್ ನ ಮೆಗಾಕೂಟ ಆರಂಭಕ್ಕೆ ಯಾವುದೇ ಅದ್ದೂರಿ ಕಾರ್ಯಕ್ರಮ ಇರುವುದಿಲ್ಲ ಎಂದು ರೇವ್ ಸ್ಪೋರ್ಟ್ಸ್ ವೆಬ್ ಸೈಟ್ ವರದಿ ಮಾಡಿದೆ.
ರಣವೀರ್ ಸಿಂಗ್, ಅರ್ಜಿತ್ ಸಿಂಗ್, ತಮನ್ನಾ ಭಾಟಿಯಾ, ಶ್ರೇಯಾ ಘೋಷಾಲ್ ಮತ್ತು ಆಶಾ ಭೋಂಸ್ಲೆಯಂತಹ ಪ್ರಸಿದ್ಧ ಬಾಲಿವುಡ್ ಸ್ಟಾರ್ ಗಳನ್ನು ಒಳಗೊಂಡಿರುವ ಈ ಸಮಾರಂಭದಲ್ಲಿ ಪಟಾಕಿ ಮತ್ತು ಲೇಸರ್ ಪ್ರದರ್ಶನವನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ಯಾಪ್ಟನ್ಸ್ ಡೇ ಕಾರ್ಯಕ್ರಮದ ನಂತರ ಈ ಕಾರ್ಯಕ್ರಮ ಯೋಜಸಿಲಾಗಿತ್ತು. ಕ್ಯಾಪ್ಟನ್ಸ್ ಡೇ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದ್ದರೂ, ಉದ್ಘಾಟನಾ ಸಮಾರಂಭದ ರದ್ದತಿಗೆ ಸಂಬಂಧಿಸಿದಂತೆ ಯಾವುದೇ ಔಪಚಾರಿಕ ಘೋಷಣೆಯಾಗಿಲ್ಲ. ಆದರೆ ಕ್ಯಾಪ್ಟನ್ಸ್ ಡೇ ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ. ಇಲ್ಲಿ ಎಲ್ಲಾ ಹತ್ತು ತಂಡಗಳ ನಾಯಕರು ಭಾಗವಹಿಸಲಿದ್ದಾರೆ.
ಟೂರ್ನಿಯ ಪ್ರಮುಖ ಅಂಶವಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಅಕ್ಟೋಬರ್ 14 ರಂದು ಅಹಮದಾಬಾದ್ ಮೈದಾನದಲ್ಲಿ ನಿಗದಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಹೈವೋಲ್ಟೇಜ್ ಪಂದ್ಯಕ್ಕೆ ಮುಂಚಿತವಾಗಿ ಅಹಮದಾಬಾದ್ ನಲ್ಲಿ ಸಮಾರಂಭವನ್ನು ಆಯೋಜಿಸಲು ಬಿಸಿಸಿಐ ಯೋಚಿಸುತ್ತಿದೆ ಎಂದು ವರದಿಯಾಗಿದೆ.