ಹೊಸದಿಲ್ಲಿ: ವರ್ಷಾಂತ್ಯ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಅನುಭವಿ ಬೌಲಿಂಗ್ ಆಲ್‌ರೌಂಡರ್ ಶಿಖಾ ಪಾಂಡೆ ಭಾರತ ತಂಡದಲ್ಲಿ ಸ್ಥಾನ ಸಂಪಾದಿಸುವಲ್ಲಿ ವಿಫಲರಾಗಿದ್ದಾರೆ. ಇವರ ಬದಲು ಸೀಮ್ ಬೌಲಿಂಗ್ ಆಲ್‌ರಂಡರ್ ಪೂಜಾ ವಸ್ತ್ರಾಕರ್ ಆಯ್ಕೆಯಾಗಿದ್ದಾರೆ. ಗಾಯಾಳಾದ ಕಾರಣ ಇತ್ತೀಚೆಗಷ್ಟೇ ಶ್ರೀಲಂಕಾದಲ್ಲಿ ಮುಗಿದ ಸರಣಿಯ ವೇಳೆ ಪೂಜಾ ಹೊರಗುಳಿದಿದ್ದರು. ಈಗ ವಿಶ್ವಕಪ್‌ಗಾಗಿ ಮರಳಿ ತಂಡವನ್ನು ಸೇರಿಕೊಂಡಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ತಂಡದ ನಾಯಕಿಯಾಗಿದ್ದು, ಎಡಗೈ ಆರಂಭಕಾರ್ತಿ ಸ್ಮತಿ ಮಂಧನಾ ಉಪನಾಯಕಿಯಾಗಿ ಮುಂದು ವರಿದಿದ್ದಾರೆ. ತನಿಯಾ ಭಾಟಿಯ ವಿಕೆಟ್ ಕೀಪರ್ ಆಗಿದ್ದಾರೆ. ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅವರು ಇನ್ನಿಂಗ್ಸ್ ಆರಂಭಿಸುವರು.
ತಂಡದಲ್ಲಿ ಮೂವರು ಸ್ಪಿನ್ನರ್‌ಗಳಿಗೆ ಅವಕಾಶ ನೀಡಲಾಗಿದೆ. ಲೆಗ್‌ಬ್ರೇಕ್ ಬೌಲರ್ ಪೂನಂ ಯಾದವ್, ಎಡಗೈ ಸ್ಪಿನ್ನರ್ ರಾಧಾ ಯಾದವ್ ಜತೆಗೆ ಸ್ಪೆಷಲಿಸ್ಟ್ ಸ್ಪಿನ್ನರ್ ಏಕ್ತಾ ಬಿಷ್ಟ್ ಕೂಡ ಕೆರಿಬಿಯನ್ ನಾಡಿಗೆ ಪಯಣಿಸಲಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಮಾನ್ಸಿ ಜೋಶಿ, ಪೂಜಾ ವಸ್ತ್ರಾಕರ್ ಮತ್ತು ಅರುಂಧತಿ ರೆಡ್ಡಿ ಇದ್ದಾರೆ. ಅನುಜಾ ಪಾಟೀಲ್ ಹಾಗೂ ದೀಪ್ತಿ ಶರ್ಮ ತಂಡದ ಪ್ರಮುಖ ಆಲೌರೌಂಡರ್‌ಗಳಾಗಿದ್ದಾರೆ.
ಕೂಟದಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳಲಿವೆ. “ಬಿ’ ವಿಭಾಗದಲ್ಲಿ ಸ್ಥಾನ ಪಡೆದಿರುವ ಭಾರತ ತಂಡ, ಇಲ್ಲಿ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ಪಾಕಿಸ್ಥಾನ ಮತ್ತು ಐರ್‌ಲ್ಯಾಂಡ್ ಸವಾಲನ್ನು ಎದುರಿಸಲಿದೆ. ಮೊದಲ ಪಂದ್ಯವನ್ನು ನ. 9ರಂದು ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ.
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂಧನಾ (ಉಪನಾಯಕಿ), ಮಿಥಾಲಿ ರಾಜ್, ಜೆಮಿಮಾ ರೋಡ್ರಿಗಸ್, ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮ, ತನಿಯಾ ಭಾಟಿಯ (ವಿ.ಕೀ.), ಪೂನಂ ಯಾದವ್, ರಾಧಾ ಯಾದವ್, ಅನುಜಾ ಪಾಟೀಲ್, ಏಕ್ತಾ ಬಿಷ್ಟ್, ಡಿ. ಹೇಮಲತಾ, ಮಾನ್ಸಿ ಜೋಶಿ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ.