ಕೇಪ್ ಟೌನ್: ಹರ್ಮನ್‌ಪ್ರೀತ್ ಕೌರ್ ಪಡೆ ವನಿತಾ ಟಿ20 ವಿಶ್ವಕಪ್ ಕೂಟದ ರವಿವಾರ ನಡೆದ ಮೊದಲ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ಥಾನವನ್ನು ಮಣಿಸಿ ಶುಭಾರಂಭ ಮಾಡಿದೆ.
ಪಾಕಿಸ್ಥಾನ ತನ್ನ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಎರಡನೇ ಓವರ್‌ನಲ್ಲಿ ಆರಂಭಿಕ ಆಟಗಾರ್ತಿ ಜಾವೇರಿಯಾ ಖಾನ್ ಅವರನ್ನು ಕಳೆದುಕೊಂಡಿದ್ದರಿಂದ ನಿಧಾನಗತಿಯ ಆರಂಭವನ್ನು ಪಡೆಯಿತು.
ನಾಯಕಿ ಬಿಸ್ಮಾ ಮರೂಫ್ ಅರ್ಧಶತಕ ಗಳಿಸಿದರು, 68 ರನ್ ಗಳಿಸಿ ಅಜೇಯರಾಗಿ ಉಳಿದರು.. ಆಯೇಶಾ 25 ಎಸೆತಗಳಲ್ಲಿ 43 ರನ್ ಗಳಿಸಿ ಅಜೇಯರಾಗಿ ಉಳಿದರು. ತಂಡ 4 ವಿಕೆಟ್ ನಷ್ಟಕ್ಕೆ 149 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ತಲುಪಿತು. ರಾಧಾ ಯಾದವ್ 21ರನ್ ಗಳಿಗೆ 2 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಭಾರತ ವನಿತೆಯರು 3 ವಿಕೆಟ್ ನಷ್ಟಕ್ಕೆ 19 ಓವರ್ ಗಳಲ್ಲಿ 151 ಗಳಿಸಿ 7 ವಿಕೆಟ್‌ಗಳ ಅಂತರದಲ್ಲಿ ಜಯಗಳಿಸಿದರು.
ಯಾಸ್ತಿಕಾ ಭಾಟಿಯಾ 17, ಶಫಾಲಿ ವರ್ಮಾ 33 ರನ್ ಗಳಿಸಿ ಔಟಾದರೆ. ಭರ್ಜರಿ ಆಟವಾಡಿದ ಜೆಮಿಮಾ ರಾಡ್ರಿಗಸ್ 38 ಎಸೆತಗಳಲ್ಲಿ ಔಟಾಗದೆ 53 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 16 ರನ್ ಕೊಡುಗೆ ನೀಡಿ ಔಟಾದರು. ವಿಕೆಟ್ ಕೀಪರ್ ರಿಚಾ ಘೋಷ್ ಔಟಾಗದೆ 20 ಎಸೆತಗಳಲ್ಲಿ 31 ರನ್ ಕೊಡುಗೆ ನೀಡಿ ಗೆಲುವಿನ ದಡವನ್ನು ಒಂದು ಓವರ್ ಇರುವ ಮುನ್ನವೇ ಸೇರಿಸಿದರು.