Advertisement

ಕೆರಿಬಿಯನ್‌ನಲ್ಲಿ ಕ್ರಿಕೆಟ್‌ ಹಬ್ಬ: ಇಂದಿನಿಂದ ವೆಸ್ಟ್‌ ಇಂಡೀಸ್‌ನಲ್ಲಿ ಕಿರಿಯರ ವಿಶ್ವಕಪ್‌

09:55 AM Jan 14, 2022 | Team Udayavani |

ಜಾರ್ಜ್‌ಟೌನ್‌ (ಗಯಾನಾ): ಜಗತ್ತು ಮತ್ತೂಮ್ಮೆ ಕೋವಿಡ್‌ ಜತೆಗೆ ಒಮಿಕ್ರಾನ್‌ ಹಾವಳಿಗೆ ಸಿಲುಕಿರುವ ವೇಳೆಯಲ್ಲೇ ವೆಸ್ಟ್‌ ಇಂಡೀಸ್‌ನಲ್ಲಿ 14ನೇ ಆವೃತ್ತಿಯ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯ ಕ್ಷಣಗಣನೆ ಆರಂಭಗೊಂಡಿದೆ. ಶುಕ್ರವಾರದಿಂದ ಫೆ. 5ರ ತನಕ ಕೆರಿಬಿಯನ್‌ ದ್ವೀಪದ 4 ತಾಣಗಳಲ್ಲಿ ಕಿರಿಯರ ಕ್ರಿಕೆಟ್‌ ಕದನ ನಡೆಯಲಿದೆ.

Advertisement

ಒಟ್ಟು 16 ತಂಡಗಳು ವಿಶ್ವಕಪ್‌ ಕಿರೀಟಕ್ಕೆ ಹೋರಾಟ ನಡೆಸಲಿವೆ. ಇವುಗಳನ್ನು 4 ಗುಂಪುಗಳಾಗಿ ವಿಭಜಿಸಲಾಗಿದೆ. ಅತೀ ಹೆಚ್ಚು 4 ಸಲ ಚಾಂಪಿಯನ್‌ ಆಗಿರುವ ಭಾರತ (2000, 2008, 2012 ಮತ್ತು 2018) “ಬಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಇಲ್ಲಿನ ಉಳಿದ ತಂಡಗಳೆಂದರೆ ದಕ್ಷಿಣ ಆಫ್ರಿಕಾ, ಐರ್ಲೆಂಡ್‌ ಮತ್ತು ಉಗಾಂಡ. ಕೂಟದ ತಾಣಗಳೆಂದರೆ ಆಂಟಿಗಾ, ಗಯಾನಾ, ಸೇಂಟ್‌ ಕಿಟ್ಸ್‌ ಮತ್ತು ಟ್ರಿನಿಡಾಡ್‌. ಆಂಟಿಗಾದ ನಾರ್ತ್‌ಸೌಂಡ್‌ನ‌ “ಸರ್‌ ವಿವಿಯನ್‌ ರಿಚರ್ಡ್ಸ್‌ ಸ್ಟೇಡಿಯಂ’ನಲ್ಲಿ ಪ್ರಶಸ್ತಿ ಸಮರ ಏರ್ಪಡಲಿದೆ.

ಯಶ್‌ ಧುಲ್‌ ನಾಯಕ:

ದಿಲ್ಲಿಯ ಬ್ಯಾಟ್ಸ್‌ಮನ್‌ ಯಶ್‌ ಧುಲ್‌ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ದಿಲ್ಲಿಯವರೇ ಆದ ವಿರಾಟ್‌ ಕೊಹ್ಲಿ ಮತ್ತು ಉನ್ಮುಕ್ತ್ ಚಂದ್‌ ನೇತೃತ್ವದಲ್ಲಿ ಭಾರತ ಕಿರೀಟ ಏರಿಸಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಧುಲ್‌ ಸಾರಥ್ಯದಲ್ಲೇ ಭಾರತ ಇತ್ತೀಚೆಗೆ ಅಂಡರ್‌-19 ಏಶ್ಯ ಕಪ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

ಜ. 15ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸುವ ಮೂಲಕ ಭಾರತದ ಅಭಿಯಾನ ಮೊದಲ್ಗೊಳ್ಳಲಿದೆ. ಬಳಿಕ ಜ. 19ರಂದು ಐರ್ಲೆಂಡ್‌ ವಿರುದ್ಧ, ಜ. 22ರಂದು ಉಗಾಂಡ ವಿರುದ್ಧ ಆಡಲಿದೆ. ಜ. 14ರ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್‌ ಮತ್ತು ಆಸ್ಟ್ರೇಲಿಯ ಮುಖಾಮುಖೀ ಆಗಲಿವೆ.

Advertisement

ಎಲ್ಲ ಪಂದ್ಯಗಳು ಭಾರತೀಯ ಕಾಲಮಾನದಂತೆ ರಾತ್ರಿ 7.30ಕ್ಕೆ ಆರಂಭವಾಗಲಿವೆ. ಸ್ಟಾರ್‌ ಸೋರ್ಟ್ಸ್ ನಲ್ಲಿ  ನೇರ ಪ್ರಸಾರ ಮೂಡಿಬರಲಿದೆ.

ಭಾರತ ತಂಡ: ಯಶ್‌ ಧುಲ್‌, ಹರ್ನೂರ್‌ ಸಿಂಗ್‌, ಅಂಗ್‌ಕೃಷ್‌ ರಘುವಂಶಿ, ಎಸ್‌.ಕೆ. ರಶೀದ್‌ (ಉಪನಾಯಕ), ನಿಶಾಂತ್‌ ಸಿಂಧು, ಸಿದ್ಧಾರ್ಥ್ ಯಾದವ್‌, ಅನೀಶ್ವರ್‌ ಗೌತಮ್‌, ದಿನೇಶ್‌ ಬಾನಾ, ಆರಾಧ್ಯ ಯಾದವ್‌, ರಾಜ್‌ ಅಂಗದ್‌ ಬಾವಾ, ಮಾನವ್‌ ಪ್ರಕಾಶ್‌, ಲೌಶಲ್‌ ತಾಂಬೆ, ಆರ್‌.ಎಸ್‌. ಹಂಗರ್ಗೇಕರ್‌, ವಾಸು ವತ್ಸ್, ವಿಕಿ ಓಸ್ವಾಲ್‌, ರವಿಕುಮಾರ್‌, ಗರ್ವ್‌ ಸಂಗ್ವಾನ್‌.

ಮೀಸಲು ಆಟಗಾರರು: ರಿಶಿತ್‌ ರೆಡ್ಡಿ, ಉದಯ್‌ ಸಹರಣ್‌, ಅಂಶ್‌ ಗೋಸಾಯ್‌, ಅಮೃತ್‌ರಾಜ್‌ ಉಪಾಧ್ಯಾಯ.

ತಂಡಗಳು :

ಎ’ ವಿಭಾಗ: ಇಂಗ್ಲೆಂಡ್‌, ಬಾಂಗ್ಲಾದೇಶ, ಯುಎಇ, ಕೆನಡಾ.

ಬಿ’ ವಿಭಾಗ: ಭಾರತ, ದಕ್ಷಿಣ ಆಫ್ರಿಕಾ, ಐರ್ಲೆಂಡ್‌, ಉಗಾಂಡ.

ಸಿ’ ವಿಭಾಗ: ಪಾಕಿಸ್ಥಾನ, ಅಫ್ಘಾನಿಸ್ಥಾನ, ಜಿಂಬಾಬ್ವೆ, ಪಪುವಾ ನ್ಯೂ ಗಿನಿ.

ಡಿ’ ವಿಭಾಗ: ಆಸ್ಟ್ರೇಲಿಯ, ವೆಸ್ಟ್‌ ಇಂಡೀಸ್‌, ಶ್ರೀಲಂಕಾ, ಸ್ಕಾಟ್ಲೆಂಡ್‌.

Advertisement

Udayavani is now on Telegram. Click here to join our channel and stay updated with the latest news.

Next