ಮುಂಬೈ: ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಸ್ಟಾಪ್ ಕ್ಲಾಕ್ ನಿಯಮವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಜಾರಿಗೊಳಿಸಲು ಐಸಿಸಿ ನಿರ್ಧರಿಸಿದೆ. ಮುಂದಿನ ಜೂನ್ ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ನಲ್ಲಿ ಈ ನಿಯಮ ಜಾರಿಗೆ ಬರಲಿದೆ ಎಂದು ಐಸಿಸಿ ತಿಳಿಸಿದೆ.
ಕಳೆದ ಡಿಸೆಂಬರ್‌ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪರಿಚಯಿಸಿದ ಈ ನಿಯಮವನ್ನು ಈಗ ಪೂರ್ಣವಾಗಿ ಅಳವಡಿಸಲಾಗುವುದು.
ಓವರ್‌ಗಳ ನಡುವೆ ಎಲೆಕ್ಟ್ರಾನಿಕ್ ಗಡಿಯಾರದ ಪ್ರದರ್ಶನದ ಅಗತ್ಯವಿರುವ ಈ ನಿಯಮವನ್ನು ಪಂದ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ರೂಪಿಸಲಾಗಿದೆ.
ಈ ನಿಯಮದ ಪ್ರಕಾರ, ಪ್ರತಿ ಓವರ್ ಬಳಿಕ 60 ಸೆಕೆಂಡ್ಸ್ ಗಳ ಕೌಂಟ್ ಡೌನ್ ಆರಂಭವಾಗುತ್ತದೆ. ಫೀಲ್ಡಿಂಗ್ ಮಾಡುತ್ತಿರುವ ತಂಡವು ಈ 60 ಸೆಕೆಂಡ್ಸ್ ಗಳು ಮುಗಿಯುವ ಮೊದಲು ಮತ್ತೊಂದು ಓವರ್ ಆರಂಭಿಸಬೇಕು.
ಈ ನಿಯಮವನ್ನು ಜಾರಿಗೊಳಿಸುವ ಜವಾಬ್ದಾರಿಯು ಅಂಪೈರ್ ಗಳ ಮೇಲಿರುತ್ತದೆ. ಥರ್ಡ್ ಅಂಪೈರ್ ಟೈಮರ್ ಆನ್ ಮಾಡುತ್ತಾನೆ. ಫೀಲ್ಡಿಂಗ್ ತಂಡವು ನಿಯಮಕ್ಕೆ ತಪ್ಪಿದರೆ ಫೀಲ್ಡ್ ಅಂಪೈರ್ ಗಳು ಎರಡು ಬಾರಿ ಎಚ್ಚರಿಕೆ ನೀಡುತ್ತಾರೆ. ಮೂರನೇ ಬಾರಿಗೆ ಮತ್ತು ನಂತರದ ಪ್ರತಿ ಉಲ್ಲಂಘನೆಗೆ ಐದು ರನ್ ಗಳ ದಂಡವನ್ನು ವಿಧಿಸಲಾಗುತ್ತದೆ. ಟೈಮರ್ ಬಳಸುವ ನಿರ್ಧಾರವು ಅಂಪೈರ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ಅವರು ಬ್ಯಾಟ್ಸ್‌ಮನ್ ಗಳು ಡಿಆರ್ ಎಸ್ ಕರೆಗಳು ಅಥವಾ ಯಾವುದೇ ಅನಿರೀಕ್ಷಿತ ಸಂದರ್ಭಗಳಿಂದ ವಿಳಂಬ ಮಾಡುತ್ತಾರೆಯೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿದ್ದಾರೆ.