ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವ್ಯಾಪಕ ಚರ್ಚಿತವಾಗಿರುವ ಮತ್ತು ಬಹುನಿರೀಕ್ಷಿತ ನಿಯಮ ಸಾಫ್ಟ್ ಸಿಗ್ನಲ್ ನಲ್ಲಿ ಬದಲಾವಣೆ ಮಾಡಿದೆ. ಲಂಡನ್ ನಲ್ಲಿ ಮುಂದಿನ ತಿಂಗಳಿನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ನಿಂದ ಈ ಬದಲಾವಣೆ ಜಾರಿಗೆ ಬರುವ ನಿರೀಕ್ಷೆಯಿದೆ.
ಸೌರವ್ ಗಂಗೂಲಿ ನೇತೃತ್ವದ ಐಸಿಸಿಯ ಕ್ರಿಕೆಟ್ ಸಮಿತಿಯು ಈ ನಿಯಮಗಳ ಬದಲಾವಣೆಗೆ ಅನುಮತಿ ನೀಡಿದೆ. ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಡುವ ತಂಡಗಳಾ ಆಸ್ಟ್ರೇಲಿಯಾ ಮತ್ತು ಭಾರತಕ್ಕೆ ಈ ವಿಚಾರವನ್ನು ತಿಳಿಸಲಾಗಿದೆ ಎಂದು ಕ್ರಿಕ್ ಬಜ್ ವರದಿ ಮಾಡಿದೆ.
ಇತರ ಗಮನಾರ್ಹ ಅಂಶವೆಂದರೆ, ಮಂದ ಬೆಳಕಿನ ಸಂದರ್ಭದಲ್ಲಿ ಫ್ಲಡ್ ಲೈಟ್ ಗಳನ್ನು ಆಟದ ಸಮಯದಲ್ಲಿ ಆನ್ ಮಾಡಬಹುದಾಗಿದೆ.
ಏನಿದು ಸಾಫ್ಟ್ ಸಿಗ್ನಲ್?
ಕ್ರಿಕೆಟ್ ನಲ್ಲಿ ಕೆಲವು ಕಠಿಣ ಸಂದರ್ಭ ಎದುರಾದಾಗ, ಉದಾ: ಅನುಮಾನಾಸ್ಪದ ಕ್ಯಾಚ್ ಇದ್ದಾಗ ಮೈದಾನದ ಅಂಪೈರ್ ಟಿವಿ ಅಂಪೈರ್ ಸಹಾಯ ಕೇಳುತ್ತಾರೆ. ಆದರೆ ಆ ವೇಳೆ ತನ್ನ ದೃಷ್ಟಿಯಲ್ಲಿ ಆ ತೀರ್ಪು ಏನು (ಔಟ್ ಅಥವಾ ನಾಟ್ ಔಟ್) ಎಂದು ಮೈದಾನದ ಅಂಪೈರ್ ಹೇಳಬೇಕು. ಇದನ್ನು ಸಾಫ್ಟ್ ಸಿಗ್ನಲ್ ಎನ್ನಲಾಗುತ್ತದೆ. ಟಿವಿ ಅಂಪೈರ್ ಗೆ ಸರಿಯಾದ ಸಾಕ್ಷಿ ಸಿಗದಿದ್ದರೆ ಸಾಫ್ಟ್ ಸಿಗ್ನಲ್ ಅನ್ನೇ ಅಂತಿಮ ತೀರ್ಪಾಗಿ ಪರಿಗಣಿಸಬಹುದು ಎನ್ನುತ್ತದೆ ನಿಯಮ.
ಯಾವಾಗ ಆರಂಭ?
2014ರಲ್ಲಿ ಐಸಿಸಿ ಈ ನಿಯಮವನ್ನು ಪರಿಚಯಿಸಿತು. ಅದಕ್ಕಿಂತ ಮೊದಲು ಮೈದಾನದ ಅಂಪೈರ್ ಗಳು ಮೂರನೇ ಅಂಪೈರ್ ಜೊತೆ ಚರ್ಚೆ ನಡೆಸುತ್ತಿದ್ದರು.
ಸಾಫ್ಟ್ ಸಿಗ್ನಲ್ ನಿಯಮಕ್ಕೆ ದಿಗ್ಗಜ ಆಟಗಾರರು ವಿರೋಧ ವ್ಯಕ್ತಪಡಿಸಿದ್ದರು. ಈ ನಿಯಮವನ್ನು ತೆಗೆದು ಪೂರನೇ ಅಂಪೈರ್ ಗೆ ಪೂರ್ಣ ಅಧಿಕಾರ ನೀಡಬೇಕು ಎಂದು ಹಲವು ವಾದ ಮಂಡಿಸಿದ್ದರು.