Advertisement

ICC Test Championship: ಅಗ್ರಸ್ಥಾನಕ್ಕೆ ನೆಗೆದ ನ್ಯೂಜಿಲ್ಯಾಂಡ್‌

08:30 AM Feb 08, 2024 | Team Udayavani |

ದುಬಾೖ: ದಕ್ಷಿಣ ಆಫ್ರಿಕಾ ವಿರುದ್ಧ ಸಾಧಿಸಿದ ಜಯದೊಂದಿಗೆ ನ್ಯೂಜಿಲ್ಯಾಂಡ್‌ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆದಿದೆ. ಈ ಪಂದ್ಯಕ್ಕೂ ಮುನ್ನ ನ್ಯೂಜಿಲ್ಯಾಂಡ್‌ 4ನೇ ಸ್ಥಾನದಲ್ಲಿತ್ತು.

Advertisement

ಕಿವೀಸ್‌ ಸಾಧನೆಯಿಂದ ಕಳೆದ ಸಲದ ಫೈನಲಿಸ್ಟ್‌ಗಳಾದ ಆಸ್ಟ್ರೇಲಿಯ ಮತ್ತು ಭಾರತ ಒಂದೊಂದು ಸ್ಥಾನ ಕುಸಿತ ಕಂಡಿವೆ. ಕ್ರಮವಾಗಿ 55.00 ಮತ್ತು 52.77 ಪ್ರತಿಶತ ಅಂಕಗಳೊಂದಿಗೆ 2ನೇ ಹಾಗೂ 3ನೇ ಸ್ಥಾನದಲ್ಲಿವೆ. ವಿಶಾಖಪಟ್ಟಣ ಟೆಸ್ಟ್‌ ಪಂದ್ಯವನ್ನು ಗೆದ್ದ ಬಳಿಕ ಭಾರತ ಐದರಿಂದ ದ್ವಿತೀಯ ಸ್ಥಾನಕ್ಕೆ ಏರಿತ್ತು.

ನ್ಯೂಜಿಲ್ಯಾಂಡ್‌ ಪ್ರಸಕ್ತ ಟೆಸ್ಟ್‌ ಚಾಂಪಿಯನ್‌ಶಿಪ್‌ನ 3 ಪಂದ್ಯಗಳಲ್ಲಿ ಸಾಧಿಸಿದ 2ನೇ ಗೆಲುವು ಇದಾಗಿದೆ. ಇದರಿಂದ ಗೆಲುವಿನ ಪ್ರತಿಶತ ಅಂಕ 66.66ಕ್ಕೆ ಏರಿದೆ. ದಕ್ಷಿಣ ಆಫ್ರಿಕಾ ಮೂರರಲ್ಲಿ 2 ಪಂದ್ಯಗಳನ್ನು ಸೋತಿದ್ದು, ಮೂರರಿಂದ 6ನೇ ಸ್ಥಾನಕ್ಕೆ ಇಳಿದಿದೆ (33.33).
ಬಾಂಗ್ಲಾದೇಶ 4ನೇ (50.00), ಪಾಕಿಸ್ಥಾನ 5ನೇ (36.66), ವೆಸ್ಟ್‌ ಇಂಡೀಸ್‌ 7ನೇ (33.33), ಇಂಗ್ಲೆಂಡ್‌ 8ನೇ (25.00) ಸ್ಥಾನದಲ್ಲಿದೆ.

ಕಿವೀಸ್‌ ಜಯಭೇರಿ
ಮೌಂಟ್‌ ಮೌಂಗನಿ: ದ್ವಿತೀಯ ದರ್ಜೆಯ ದಕ್ಷಿಣ ಆಫ್ರಿಕಾ ತಂಡದ ಮೇಲೆ ಎಲ್ಲ ದಿಕ್ಕುಗಳಿಂದಲೂ ದಾಳಿ ನಡೆಸಿದ ನ್ಯೂಜಿಲ್ಯಾಂಡ್‌ ಪ್ರಥಮ ಟೆಸ್ಟ್‌ ಪಂದ್ಯವನ್ನು 281 ರನ್ನುಗಳ ಭಾರೀ ಅಂತರದಿಂದ ಗೆದ್ದು 1-0 ಮುನ್ನಡೆ ಸಾಧಿಸಿದೆ.

ಗೆಲುವಿಗೆ 529 ರನ್ನುಗಳ ಕಠಿನ ಗುರಿ ಪಡೆದ ದಕ್ಷಿಣ ಆಫ್ರಿಕಾ 4ನೇ ದಿನದಾಟದಲ್ಲಿ 247ಕ್ಕೆ ಆಲೌಟ್‌ ಆಯಿತು. ಸರಣಿಯ ದ್ವಿತೀಯ ಹಾಗೂ ಅಂತಿಮ ಟೆಸ್ಟ್‌ ಫೆ. 13ರಂದು ಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿದೆ.

Advertisement

349 ರನ್ನುಗಳ ಬೃಹತ್‌ ಮುನ್ನಡೆ ಸಾಧಿಸಿದ ಹೊರತಾಗಿಯೂ ಪ್ರವಾಸಿಗರಿಗೆ ಫಾಲೋಆನ್‌ ವಿಧಿಸದೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ನ್ಯೂಜಿಲ್ಯಾಂಡ್‌ 4ಕ್ಕೆ 179 ರನ್‌ ಗಳಿಸಿ ಡಿಕ್ಲೇರ್‌ ಮಾಡಿತು. ಇದು 3ನೇ ದಿನದಾಟದ ಅಂತ್ಯದ ಮೊತ್ತವಾಗಿತ್ತು.

ಕೈಲ್‌ ಜೇಮಿಸನ್‌ 4, ಮಿಚೆಲ್‌ ಸ್ಯಾಂಟ್ನರ್‌ 3 ವಿಕೆಟ್‌ ಉರುಳಿಸಿ ನಾಲ್ಕೇ ದಿನದಲ್ಲಿ ಪಂದ್ಯ ಮುಗಿಸಿದರು. ಚೊಚ್ಚಲ ದ್ವಿಶತಕ ಬಾರಿಸಿದ ರಚಿನ್‌ ರವೀಂದ್ರ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

Advertisement

Udayavani is now on Telegram. Click here to join our channel and stay updated with the latest news.

Next