Advertisement

ICC T20 World Cup: ನ್ಯೂಜಿಲ್ಯಾಂಡ್‌ ಗೆ ಪ್ರಶಸ್ತಿಯ ದಾರಿ ತೋರಿದ ʼಅಜ್ಜಿʼಯಂದಿರು

06:11 PM Oct 24, 2024 | ಕೀರ್ತನ್ ಶೆಟ್ಟಿ ಬೋಳ |

“ನಾವು ತಂಡದ ಅಜ್ಜಿಯಂದಿರು….” (“We’re the grandmas of the team.”) ಇದು ಐಸಿಸಿ ವನಿತಾ ಟಿ20 ವಿಶ್ವಕಪ್‌ ಕೂಟದ ಫೈನಲ್‌ ಪಂದ್ಯದ ಮೊದಲು ನ್ಯೂಜಿಲ್ಯಾಂಡ್‌ ತಂಡದ ಸೂಜಿ ಬೇಟ್ಸ್‌ ಹೇಳಿದ ಮಾತಿದು. ಅವರು ಅಜ್ಜಿಯಂದಿರು ಎಂದಿದ್ದು ಸ್ವತಃ ತಾನು, ಸೋಫಿ ಡಿವೈನ್‌ ಮತ್ತು ಲೀ ತಹುಹು ಅವರನ್ನು ಉಲ್ಲೇಖಿಸಿ.

Advertisement

ಬೇಟ್ಸ್, ಡಿವೈನ್ ಮತ್ತು ತಹುಹು ಅವರು ಅನುಭವಿಗಳಾಗಿದ್ದು, ಕಿವೀಸ್‌ ತಂಡಕ್ಕಾಗಿ ಸಾಕಷ್ಟು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಅವರಲ್ಲಿ, ಬೇಟ್ಸ್ ಮತ್ತು ಡಿವೈನ್ ಟಿ20 ವಿಶ್ವಕಪ್ ಈವೆಂಟ್‌‌ ನ ಎಲ್ಲಾ ಒಂಬತ್ತು ಆವೃತ್ತಿಗಳಲ್ಲಿ ಭಾಗವಹಿಸಿದ್ದಾರೆ. ಸುದೀರ್ಘವಾಗಿ ತಂಡಕ್ಕಾಗಿ ಆಡಿದ ಈ ದಂತಕಥೆಗಳು ತಮ್ಮ ವೃತ್ತಿ ಜೀವನದ ಅಂತ್ಯವನ್ನು ಅತ್ಯಂತ ಸುಂದರವಾಗಿಸಿ ಕೊಂಡಿದ್ದಾರೆ. ನ್ಯೂಜಿಲ್ಯಾಂಡ್ ಟಿ20 ನಾಯಕಿಯಾಗಿ ತನ್ನ ಅವಧಿಯನ್ನು ಅಂತ್ಯಗೊಳಿಸಲು ಡಿವೈನ್‌ ಅವರಿಗೆ ಬಹುಶಃ ಇದಕ್ಕಿಂತ ಉತ್ತಮ ವೇದಿಕೆ ಸಿಗುತ್ತಿರಲಿಲ್ಲ.

ಬೇಟ್ಸ್ ಅವರು ಭಾರತದ ಮಿಥಾಲಿ ರಾಜ್ ಅವರನ್ನು ಹಿಂದಿಕ್ಕಿ ಮಹಿಳಾ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ಆಡಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪಂದ್ಯಾವಳಿಯ ಮುಂದಿನ ಆವೃತ್ತಿಯಲ್ಲಿ ಬೇಟ್ಸ್, ಡಿವೈನ್ ಮತ್ತು ತಹುಹು ಆಡುವ ಸಾಧ್ಯತೆ ಕಡಿಮೆಯೇ ಅನ್ನಬಹುದು. ಈ ಎಲ್ಲಾ ಕಾರಣಗಳಿಂದ ನ್ಯೂಜಿಲ್ಯಾಂಡ್‌ ನ ವಿಶ್ವಕಪ್‌ ಗೆಲುವು ಅವಿಸ್ಮರಣೀಯ.

ಮೂರು ವರ್ಷಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಕೇನ್ ವಿಲಿಯಮ್ಸನ್ ನೇತೃತ್ವದ ಪುರುಷರ ತಂಡವು ಅದೇ ಸ್ಥಳದಲ್ಲಿ (ದುಬೈ) ಸೋಲು ಕಂಡಿದ್ದರು. ಆದರೆ ಮಹಿಳಾ ತಂಡ ಮತ್ತೊಂದು ಸೋಲಿಗೆ ಮುಖ ಮಾಡಲಿಲ್ಲ. ಅವರು ದಕ್ಷಿಣ ಆಫ್ರಿಕಾವನ್ನು ಸೋಲಿಸಿದ್ದು ಮಾತ್ರವಲ್ಲದೆ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಏಕಪಕ್ಷೀಯ ಫೈನಲ್‌ ನಲ್ಲಿ ಅವರನ್ನು 32 ರನ್‌ಗಳಿಂದ ಸೋಲಿಸಿದರು. ಹೈ-ವೋಲ್ಟೇಜ್ ಆಟದಲ್ಲಿ ಯಾವುದೇ ಹಂತದಲ್ಲೂ ಅವರು ಒತ್ತಡ ಎದುರಿಸಲಿಲ್ಲ.

Advertisement

ಸೋಲಿನ ಸರಣಿಯಿಂದ ಎದ್ದು ಬಂದವರು

ಟಿ20 ವಿಶ್ವಕಪ್‌ ಕೂಟ ಆರಂಭಕ್ಕೆ ಮೊದಲು ಕ್ರಿಕೆಟ್‌ ಪಂಡಿತರೆಲ್ಲರು ನ್ಯೂಜಿಲ್ಯಾಂಡ್‌ ತಂಡ ಗೆಲ್ಲವುದು ಬಿಡಿ, ಸೆಮಿ ಹಂತಕ್ಕೂ ತಲುಪುವ ವಿಶ್ವಾಸ ಹೊಂದಿರಲಿಲ್ಲ. ಯಾಕೆಂದರೆ 2024ರಲ್ಲಿ ನ್ಯೂಜಿಲ್ಯಾಂಡ್‌ ತಂಡದ ಆಟ ಹಾಗಿತ್ತು. ಸತತ ಹತ್ತು ಪಂದ್ಯಗಳಲ್ಲಿ ಸೋತು ಟಿ20 ವಿಶ್ವಕಪ್‌ ಗೆ ಬಂದಿದ್ದ ಸೋಫಿ ಡಿವೈನ್‌ ಪಡೆ, ಯಾವುದೇ ನಿರೀಕ್ಷೆ ಇಲ್ಲದೆ ಆಡಲಿಳಿದಿತ್ತು.

ಆದರೆ ಮೊದಲ ಪಂದ್ಯದಲ್ಲಿಯೇ ಹರ್ಮನ್‌ ಪ್ರೀತ್‌ ನಾಯಕತ್ವದ ಭಾರತದ ವಿರುದ್ದ ಭರ್ಜರಿಯಾಗಿ ಗೆದ್ದುಕೊಂಡಿದ್ದರು. 2020 ರ ರನ್ನರ್ ಅಪ್ ವಿರುದ್ಧ ಅವರ 58 ರನ್ ಗೆಲುವು ನ್ಯೂಜಿಲ್ಯಾಂಡ್‌ ತಂಡಕ್ಕೆ ಉತ್ತಮವಾದದ್ದನ್ನು ಸೋಲಿಸಬಹುದೆಂಬ ನಂಬಿಕೆಯನ್ನು ನೀಡಿತ್ತು. ಅಲ್ಲಿಂದ ಅವರು ಹಿಂತಿರುಗಿ ನೋಡಲಿಲ್ಲ.

ಸೂಜಿ ಬೇಟ್ಸ್‌

38ರ ಹರೆಯದ ಸೂಜಿ ಬೇಟ್ಸ್‌ ತಾನೇಕೆ ವನಿತಾ ಟಿ20 ಕ್ರಿಕೆಟ್‌ ನ ಅತಿ ಹೆಚ್ಚಿನ ರನ್‌ ಸ್ಕೋರರ್‌ ಎಂದು ಮತ್ತೆ ಸಾಬೀತು ಪಡಿಸಿದರು. ಈ ಬಾರಿಯ ಕೂಟದಲ್ಲಿ ಕಿವೀಸ್‌ ಪರ ಅತಿ ಹೆಚ್ಚು ರನ್‌ ಗಳಿಸಿದ ಜಂಟಿ ಸಾಧನೆಯನ್ನು ಜಾರ್ಜಿಯಾ ಪ್ಲಿಮರ್‌ ಜತೆ ಸಾಧಿಸಿದರು. ಫೈನಲ್‌ ನಲ್ಲಿ ಕೂಡಾ ಬಹುಮೂಲ್ಯ 32 ರನ್‌ ಬಾರಿಸಿದ್ದರು.

ಬೌಲಿಂಗ್‌ ನಲ್ಲಿಯೂ ಮಿಂಚಿದ ಅವರು ಸೆಮಿ ಫೈನಲ್‌ ನಲ್ಲಿ ನಿರ್ಣಾಯಕ ಅಂತಿಮ ಓವರ್‌ ಎಸೆದು ತಂಡ ಫೈನಲ್‌ ಗೆ ಸಾಗುವಂತೆ ಮಾಡಿದರು. ತಹುಹು ಕೂಡಾ ಭಾರತದ ವಿರುದ್ದ ಮೂರು ವಿಕೆಟ್‌ ತೆಗೆದು ಗೆಲುವಿಗೆ ಕಾರಣವಾಗಿದ್ದರು.

ಅನುಭವಿಗಳಂತೆ ನ್ಯೂಜಿಲ್ಯಾಂಡ್ ತಂಡದಲ್ಲಿನ ಯುವ ಆಟಗಾರ್ತಿಯರೂ ಸಹ ಪ್ರಮುಖ ಪಾತ್ರ ವಹಿಸಿದರು. ಮಹಿಳಾ ಕ್ರಿಕೆಟ್‌ ನಲ್ಲಿ ಸದ್ದು ಮಾಡುತ್ತಿರುವ ಆಲ್‌ ರೌಂಡರ್‌ ಗಳಲ್ಲಿ ಒಬ್ಬರಾದ ಅಮೆಲಿಯಾ ಕೆರ್ ಅವರು ಫೈನಲ್‌ ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆಲ್ಲವುದರ ಜತೆಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.

ಅಮೆಲಿಯಾ ಕೆರ್

23ರ ಹರೆಯದ ಎಡನ್‌ ಕಾರ್ಸನ್‌ ಪವರ್‌ ಪ್ಲೇ ನಲ್ಲಿ ಬೌಲಿಂಗ್‌ ನಡೆಸಿ ಎದುರಾಳಿ ಬ್ಯಾಟರ್‌ ಗಳನ್ನು ಕಟ್ಟಿ ಹಾಕಿದ್ದರು. ಕೂಟದಲ್ಲಿ 9 ವಿಕೆಟ್‌ ಕಿತ್ತಿದ್ದಾರೆ. ರೋಸೆಮರಿ ಮೇರ್‌ ಭಾರತದ ವಿರುದ್ದದ ಪಂದ್ಯದಲ್ಲಿ ಕೆರಿಯರ್‌ ಬೆಸ್ಟ್‌ ಫಿಫ್ಟಿ ಜತೆಗೆ ಫೈನಲ್‌ ನಲ್ಲಿ ಮೂರು ವಿಕೆಟ್‌ ಕಿತ್ತು ಮಿಂಚಿದ್ದಾರೆ. 20 ವರ್ಷದ ಪ್ಲಿಮ್ಮರ್‌ ಲಂಕಾ ವಿರುದ್ದದ ಮ್ಯಾಚ್‌ ವಿನ್ನಿಂಗ್‌ ಅರ್ಧ ಶತಕದ ಜತೆಗೆ ಸೆಮಿಯಲ್ಲಿ 33 ರನ್‌ ಆಟವಾಡಿದ್ದರು.

ʼಅಜ್ಜಿʼಯಂದಿರಾದ ಡಿವೈನ್‌, ಬೇಟ್ಸ್‌ ಮತ್ತು ತಹುಹು ಅವರುಗಳು ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದಾರೆ. ಹೊಸ ಆಟಗಾರ್ತಿಯರು ತಂಡದಲ್ಲಿ ತಮ್ಮ ಸ್ಥಾನ ಕಂಡುಕೊಳ್ಳುವ ಮೂಲಕ ನ್ಯೂಜಿಲ್ಯಾಂಡ್‌ ತಂಡವು ಹೊಸ ಶಕೆಯತ್ತ ಮುಖ ಮಾಡಿದೆ.

*ಕೀರ್ತನ್‌ ಶೆಟ್ಟಿ, ಬೋಳ

Advertisement

Udayavani is now on Telegram. Click here to join our channel and stay updated with the latest news.

Next