Advertisement
ಇಲ್ಲಿನ “ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ’ನಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ 71 ರನ್ನುಗಳಿಂದ ವೆಸ್ಟ್ ಇಂಡೀಸಿಗೆ ಆಘಾತವಿಕ್ಕಿತು. ದ್ವಿತೀಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ 8 ವಿಕೆಟ್‌ಗಳಿಂದ ಭಾರತವನ್ನು ಬಗ್ಗುಬಡಿಯಿತು. ವಿಂಡೀಸ್ ಮತ್ತು ಭಾರತ ತಂಡಗಳೆರಡೂ ಕಳಪೆ ಬ್ಯಾಟಿಂಗಿಗೆ ಸರಿಯಾದ ಬೆಲೆ ತೆತ್ತವು. ಈ ಎರಡೂ ತಂಡಗಳು ಲೀಗ್ ಹಂತದ ಎಲ್ಲ 4 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದ್ದವು. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡಗಳ ಲೀಗ್ ಅಭಿಯಾನ ಸಾಮಾನ್ಯ ಮಟ್ಟದ್ದಾಗಿತ್ತು. ಅಲ್ಲಿನ ವೈಫಲ್ಯವನ್ನು ಈ ತಂಡಗಳೆರಡೂ ಸೆಮಿಪೈನಲ್‌ನಲ್ಲಿ ನೀಗಿಸಿಕೊಂಡಿವೆ. ಸಹಜವಾಗಿಯೇ ಈ ಎರಡು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪ್ರಶಸ್ತಿ ಕದನ ಕುತೂಹಲ ಕೆರಳಿಸಿದೆ.
ಈ ಪಂದ್ಯಾವಳಿಯಲ್ಲಿ ಸತತ 2 ಅರ್ಧ ಶತಕ ಬಾರಿಸಿ ಮಿಂಚಿದ್ದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಹೊರಗಿರಿಸಿ ಆಡಲಿಳಿದ ಭಾರತ ನಂಬಲಾಗದ ಬ್ಯಾಟಿಂಗ್ ಕುಸಿತಕ್ಕೆ ಸಿಲುಕಿ ಸೋಲನ್ನು ಮೈಮೇಲೆ ಎಳೆದುಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ “ಟೀಮ್ ಇಂಡಿಯಾ’ ಯಾವ ಹಂತದಲ್ಲೂ ಸೆಮಿಫೈನಲ್ ಜೋಶ್ ತೋರಲಿಲ್ಲ. 19.3 ಓವರ್‌ಗಳಲ್ಲಿ ಜುಜುಬಿ 112 ರನ್ನುಗಳಿಗೆ ಕುಸಿಯಿತು. ಇಂಗ್ಲೆಂಡ್ 17.1 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 116 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
ಭಾರತದ ಆರಂಭ ಉತ್ತಮ ಮಟ್ಟದಲ್ಲೇ ಇತ್ತು. ಸ್ಮತಿ ಮಂಧನಾ (34)-ತನ್ಯಾ ಭಾಟಿಯ (11) ಆರಂಭಿಕ ವಿಕೆಟಿಗೆ 6 ಓವರ್‌ಗಳಿಂದ 43 ರನ್, ಜೆಮಿಮಾ ರೋಡ್ರಿಗಸ್ (26)-ಹರ್ಮನ್‌ಪ್ರೀತ್ ಕೌರ್ (16) 3ನೇ ವಿಕೆಟಿಗೆ 36 ರನ್ ಪೇರಿಸಿ ಸವಾಲಿನ ಮೊತ್ತದ ಸೂಚನೆ ನೀಡಿದ್ದರು. 14ನೇ ಓವರ್ ವೇಳೆ ಭಾರತ ಕೇವಲ 2 ವಿಕೆಟಿಗೆ 89 ರನ್ ಗಳಿಸಿ ಮುನ್ನುಗ್ಗುತ್ತಿತ್ತು. ಆದರೆ ಮತ್ತೆ 24 ರನ್ ಅಂತರದಲ್ಲಿ ಉಳಿದ ಎಂಟೂ ವಿಕೆಟ್‌ಗಳನ್ನು ಕಳೆದುಕೊಂಡಿತು. ಬೇಜವಾಬ್ದಾರಿಯುತ ಆಟ, ಅನಗತ್ಯ ಓಟಗಳೆಲ್ಲ ತಂಡದ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದವು. ಭಾರತದ ಸರದಿಯಲ್ಲಿ 3 ರನೌಟ್‌ಗಳು ಸಂಭವಿಸಿದವು. ನಾಯಕಿ ಹೀತರ್ ನೈಟ್ 9ಕ್ಕೆ 3 ವಿಕೆಟ್ ಉಡಾಯಿಸಿದರೆ, ಸೋಫಿ ಎಕ್‌ಸ್ಟೋನ್ ಮತ್ತು ಕ್ರಿಸ್ಟಿ ಗೋರ್ಡನ್ ತಲಾ 2 ವಿಕೆಟ್ ಕಿತ್ತರು. ಅಗ್ರ ಕ್ರಮಾಂಕದ ನಾಲ್ವರನ್ನು ಹೊರತುಪಡಿಸಿ ಉಳಿದವರ್ಯಾರೂ ಎರಡಂಕೆಯ ಗಡಿ ತಲುಪಲಿಲ್ಲ.
Related Articles
ಭಾರತದ ಬೌಲಿಂಗ್ ವಿಭಾಗದಲ್ಲಿ ಒಂದೇ ಒಂದು ಮಧ್ಯಮ ವೇಗಿಗೆ ಸ್ಥಾನವಿರಲಿಲ್ಲ. ದಾಳಿಗಿಳಿದ ಎಲ್ಲ 6 ಮಂದಿಯೂ ಸ್ಪಿನ್ನರ್‌ಗಳಾಗಿದ್ದರು. ಆರಂಭಿಕರಿಬ್ಬರ ವಿಕೆಟ್ 24 ರನ್ ಆಗುವಷ್ಟರಲ್ಲಿ ಬಿತ್ತಾದರೂ, ಆ್ಯಮಿ ಜೋನ್ಸ್ (ಔಟಾಗದೆ 53) ಮತ್ತು ನಥಾಲಿ ಶಿವರ್ (ಔಟಾಗದೆ 52) ಸೇರಿಕೊಂಡು ಮುರಿಯದ 3ನೇ ವಿಕೆಟಿಗೆ 92 ರನ್ ಪೇರಿಸಿ ಭಾರತದ ಸ್ಪಿನ್ನರ್‌ಗಳನ್ನು ಚೆನ್ನಾಗಿ ದಂಡಿಸಿದರು.
Advertisement
ತಂಡದ ಹಿತಕ್ಕಾಗಿ ಕೈಗೊಂಡ ನಿರ್ಧಾರ, ವಿಷಾದವಿಲ್ಲ: ಕೌರ್ಸೆಮಿಫೈನಲ್ನಂಥ ಅತೀ ಮಹತ್ವದ ಪಂದ್ಯಕ್ಕಾಗಿ ಅನುಭವಿ ಮಿಥಾಲಿ ರಾಜ್ ಅವರನ್ನು ಹೊರಗಿರಿಸಿದ ಕ್ರಮಕ್ಕೆ ತೀವ್ರ ಟೀಕೆಗಳು ಎದುರಾಗಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ನಾಯಕಿ ಹರ್ಮನ್‌ಪ್ರೀತ್ ಕೌರ್, “ಇದು ಮಿಥಾಲಿ ಅವರನ್ನು ಕೈಬಿಟ್ಟ ಪ್ರಶ್ನೆಯಲ್ಲ, ಗೆಲುವಿನ ಕಾಂಬಿನೇಶನ್ ಮುಂದುವರಿಸುವ ಯೋಜನೆ ಯಾಗಿತ್ತು. ಅಂದಹಾಗೆ, ಮಿಥಾಲಿ ಅವರನ್ನು ಹೊರಗಿರಿಸಿದ ಬಗ್ಗೆ ಯಾವುದೇ ವಿಷಾದವಿಲ್ಲ. ಇದು ತಂಡದ ಹಿತಕ್ಕಾಗಿ ತೆಗೆದುಕೊಂಡ ನಿರ್ಧಾರವಾಗಿತ್ತು’ ಎಂದಿದ್ದಾರೆ. ಟಾಸ್ ಸಂದರ್ಭದಲ್ಲೇ ಕೌರ್ ಈ ಹೇಳಿಕೆ ನೀಡಿದ್ದರು. “ನಾವು ಯಾವುದೇ ನಿರ್ಧಾರ ತೆಗೆದು ಕೊಂಡರೂ ಅದು ತಂಡದ ಒಳಿತಿಗಾಗಿ ತೆಗೆದುಕೊಂಡ ನಿರ್ಧಾರವೇ ಆಗಿರುತ್ತದೆ. ಕೆಲವೊಮ್ಮೆ ಇದು ಕೈಗೂಡುತ್ತದೆ, ಕೆಲವು ಸಲ ವಿಫಲವಾಗುತ್ತದೆ. ಇದಕ್ಕಾಗಿ ವಿಷಾದಪಡಬೇಕಾದ್ದಿಲ್ಲ. ಈ ಪಂದ್ಯಾವಳಿ ಯಲ್ಲಿ ನಮ್ಮ ಹುಡುಗಿಯರು ಆಡಿದ ರೀತಿಯಿಂದ ಹೆಮ್ಮೆಯಾಗಿದೆ’ ಎಂದು ಕೌರ್ ಹೇಳಿದರು. ಸಂಕ್ಷಿಪ್ತ ಸ್ಕೋರ್: ಭಾರತ-19.3 ಓವರ್‌ಗಳಲ್ಲಿ 112 (ಮಂಧನಾ 34, ಜೆಮಿಮಾ 26, ಕೌರ್ 16, ನೈಟ್ 9ಕ್ಕೆ 3, ಗೋರ್ಡನ್ 20ಕ್ಕೆ 2, ಎಕ್ ಸ್ಟೋನ್ 22ಕ್ಕೆ 2). ಇಂಗ್ಲೆಂಡ್-17.1 ಓವರ್‌ಗಳಲ್ಲಿ 2 ವಿಕೆಟಿಗೆ 116 (ಜೋನ್ಸ್ ಔಟಾಗದೆ 53, ಶಿವರ್ ಔಟಾಗದೆ 52, ಪೂನಂ ಯಾದವ್ 20ಕ್ಕೆ 1, ದೀಪ್ತಿ ಶರ್ಮ 24ಕ್ಕೆ 1).
ಪಂದ್ಯಶ್ರೇಷ್ಠ: ಆ್ಯಮಿ ಜೋನ್ಸ್.