Advertisement

ಇಂಗ್ಲೆಂಡ್‌ ಎದುರು ಭಾರತಕ್ಕೆ ಸೇಡಿನ ಪಂದ್ಯ

06:00 AM Nov 22, 2018 | |

ನಾರ್ತ್‌ ಸೌಂಡ್‌ (ಆ್ಯಂಟಿಗುವಾ): ಲೀಗ್‌ ಹಂತದಲ್ಲಿ ಸತತ 4 ಗೆಲುವುಗಳೊಂದಿಗೆ ಅಜೇಯವಾಗಿ ಟಿ20 ವಿಶ್ವಕಪ್‌ ನಾಕೌಟ್‌ ಪ್ರವೇಶಿಸಿರುವ ಭಾರತದ ವನಿತೆಯರ ಮುಂದೀಗ ಸೇಡಿನ ಪಂದ್ಯವೊಂದು ಕಾದು ಕುಳಿತಿದೆ. ಶುಕ್ರವಾರ ಮುಂಜಾನೆ ನಡೆಯಲಿರುವ ಸೆಮಿಫೈನಲ್‌ ಮುಖಾಮುಖೀಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಪಡೆ ಬಲಿಷ್ಠ ಇಂಗ್ಲೆಂಡ್‌ ಸವಾಲನ್ನು ಎದುರಿಸಲಿದೆ.

Advertisement

ಇಂಗ್ಲೆಂಡ್‌ ಹಾಲಿ ಏಕದಿನ ವಿಶ್ವ ಚಾಂಪಿಯನ್‌. ಕಳೆದ ವರ್ಷ ಲಾರ್ಡ್ಸ್‌ನಲ್ಲಿ ನಡೆದ ರೋಚಕ ಹೋರಾಟದಲ್ಲಿ ಭಾರತವನ್ನು 9 ರನ್ನುಗಳಿಂದ ಮಣಿಸುವ ಮೂಲಕ ಇಂಗ್ಲೆಂಡ್‌ ಪ್ರಶಸ್ತಿಯನ್ನೆತ್ತಿತ್ತು. ಇದಕ್ಕೀಗ ಟಿ20 ಕ್ರಿಕೆಟ್‌ನಲ್ಲಿ ಸೇಡು ತೀರಿಸಿಕೊಳ್ಳುವ ಅಪೂರ್ವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ. ಇದರಲ್ಲಿ ಕೌರ್‌ ಬಳಗ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದೊಂದು ಕುತೂಹಲ. ದಿನದ ಮೊದಲ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಖ್ಯಾತಿಯ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡ ಆಸ್ಟ್ರೇಲಿಯ ವಿರುದ್ಧ ಆಡಲಿದೆ.

ಭಾರತದ ಬ್ಯಾಟಿಂಗ್‌ ಮಿಂಚು
ಬಲಾಡ್ಯ ತಂಡಗಳಿಂದ ಕೂಡಿದ “ಬಿ’ ವಿಭಾಗದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿತ್ತು. ಮೊದಲ ಪಂದ್ಯದಲ್ಲೇ ನ್ಯೂಜಿಲ್ಯಾಂಡನ್ನು ಮಣಿಸಿದ ಭಾರತ, ಬಳಿಕ ಪಾಕಿಸ್ಥಾನ, ಐರ್ಲೆಂಡ್‌, ಆಸ್ಟ್ರೇಲಿಯಕ್ಕೂ ಆಘಾತವಿಕ್ಕಿತು. ಭಾರತದ ಅಜೇಯ ಅಭಿಯಾನದಲ್ಲಿ ಬ್ಯಾಟಿಂಗ್‌ ಹಾಗೂ ಸ್ಪಿನ್‌ ಬೌಲಿಂಗ್‌ ವಿಭಾಗದ ಪಾತ್ರ ಮಹತ್ವದ್ದಾಗಿತ್ತು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಅನುಭವಿ ಮಿಥಾಲಿ ರಾಜ್‌, ಎಡಗೈ ಓಪನರ್‌ ಸ್ಮತಿ ಮಂಧನಾ, ಯುವ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌ ಬ್ಯಾಟಿಂಗ್‌ ಶಕ್ತಿಗಳಾಗಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ಒಂದೊಂದು ಜೋಡಿ ಕ್ಲಿಕ್‌ ಆಗಿತ್ತು. ವೇದಾ ಕೃಷ್ಣಮೂರ್ತಿ, ತನ್ಯಾ ಭಾಟಿಯ ಕೂಡ ಭಾರತದ ಬ್ಯಾಟಿಂಗ್‌ ಲೈನ್‌ಅಪ್‌ನಲ್ಲಿರುವ ಪ್ರಮುಖರು.

ನ್ಯೂಜಿಲ್ಯಾಂಡ್‌ ವಿರುದ್ಧ ಹರ್ಮನ್‌ಪ್ರೀತ್‌ ಕೌರ್‌ ಭರ್ಜರಿ ಶತಕ ಸಿಡಿಸುವ ಮೂಲಕ ಭಾರತದ ಬ್ಯಾಟಿಂಗ್‌ ಸಾಮರ್ಥ್ಯ ಅನಾವರಣಗೊಂಡಿತ್ತು. ಕೌರ್‌ ಪ್ರಸಕ್ತ ಟೂರ್ನಿಯಲ್ಲಿ 167 ರನ್‌ ಬಾರಿಸಿ ಅಗ್ರಸ್ಥಾನ ಅಲಂಕರಿಸಿದ್ದಾರೆ. 177ರಷ್ಟು ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಮಂಧನಾ 144 ರನ್‌ ಹೊಡೆದು 4ನೇ ಸ್ಥಾನದಲ್ಲಿದ್ದಾರೆ. ಮಿಥಾಲಿ ಸತತ 2 ಅರ್ಧ ಶತಕಗಳೊಂದಿಗೆ ಮಿಂಚು ಹರಿಸಿದ್ದಾರೆ. ಐರ್ಲೆಂಡ್‌ ಎದುರಿನ ಪಂದ್ಯದ ವೇಳೆ ಗಾಯಾಳಾದ ಕಾರಣ ಆಸ್ಟ್ರೇಲಿಯ ವಿರುದ್ಧ ಆಡದಿದ್ದ ಮಿಥಾಲಿ ಈಗ ಪೂರ್ತಿ ಫಿಟ್‌ ಆಗಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಅನುಜಾ ಪಾಟೀಲ್‌ ಸ್ಥಾನದಲ್ಲಿ ಮಿಥಾಲಿ ಆಡುವರು.

ಇಂಗ್ಲೆಂಡಿಗೆ ಸೀಮರ್‌ಗಳೇ ಶಕ್ತಿ
ಇಂಗ್ಲೆಂಡ್‌ ಸೀಮ್‌ ಬೌಲಿಂಗ್‌ ದಾಳಿಯನ್ನು ಹೆಚ್ಚು ಅವಲಂಬಿಸಿದೆ. ಅನ್ಯಾ ಶ್ರಬೊಲ್‌ ಹ್ಯಾಟ್ರಿಕ್‌ ಸಹಿತ 7 ವಿಕೆಟ್‌, ನಥಾಲಿ ಶೀವರ್‌ 4 ವಿಕೆಟ್‌ ಕಿತ್ತು ಮಿಂಚಿದ್ದಾರೆ. ದಕ್ಷಿಣ ಆಫ್ರಿಕಾವನ್ನು 100 ರನ್‌ ಒಳಗೆ ಕಟ್ಟಿಹಾಕುವಲ್ಲಿ ಇವರಿಬ್ಬರ ಪಾತ್ರ ಮಹತ್ವದ್ದಾಗಿತ್ತು. ಬ್ಯಾಟಿಂಗ್‌ನಲ್ಲಿ ಡ್ಯಾನಿ ವ್ಯಾಟ್‌ (3 ಪಂದ್ಯ, 28 ರನ್‌), ನಾಯಕಿ ಹೀತರ್‌ ನೈಟ್‌ (3 ಪಂದ್ಯ, 31 ರನ್‌) ಇನ್ನೂ ನೈಜ ಫಾರ್ಮ್ ಕಂಡುಕೊಂಡಿಲ್ಲ. ಆ್ಯಮಿ ಜೋನ್ಸ್‌ 3 ಪಂದ್ಯಗಳಿಂದ 50 ರನ್‌ ಮಾಡಿದ್ದೇ ಇಂಗ್ಲೆಂಡಿನ ಅತ್ಯುತ್ತಮ ಸಾಧನೆ. ವಿಂಡೀಸ್‌ ಎದುರಿನ ಪಂದ್ಯದಲ್ಲಿ ಇಂಗ್ಲೆಂಡಿಗೆ ಗಳಿಸಲು ಸಾಧ್ಯವಾದದ್ದು 8ಕ್ಕೆ 115 ರನ್‌ ಮಾತ್ರ. ಭಾರತ ಮೇಲುಗೈ ಸಾಧಿಸಬೇಕಾದರೆ ಆಂಗ್ಲರ ಸೀಮ್‌ ಬೌಲಿಂಗನ್ನು ಯಶಸ್ವಿಯಾಗಿ ನಿಭಾಯಿಸಬೇಕಾದುದು ಮುಖ್ಯ.

Advertisement

ಸ್ಪಿನ್ನರ್‌ಗಳ ಭರ್ಜರಿ ಬೇಟೆ
ಕೇವಲ ಒಂದೇ ಪೇಸ್‌ ಬೌಲರ್‌ಗೆ ಅವಕಾಶ ಕೊಡುವ ಕೋಚ್‌ ರಮೇಶ್‌ ಪೊವಾರ್‌ ಅವರ ಕಾರ್ಯತಂತ್ರ ನಿರೀಕ್ಷೆಗೂ ಮೀರಿದ ಯಶಸ್ಸು ಸಾಧಿಸಿದೆ. ವಿಂಡೀಸಿನ ನಿಧಾನ ಗತಿಯ ಟ್ರ್ಯಾಕ್‌ನಲ್ಲಿ ಭಾರತದ ಸ್ಪಿನ್‌ ಬೌಲರ್‌ಗಳು ಎದುರಾಳಿಗಳಿಗೆ ಭರ್ಜರಿ ಕಡಿವಾಣ ತೊಡಿಸಿದ್ದಾರೆ. ಲೆಗ್‌ಸ್ಪಿನ್ನರ್‌ ಪೂನಂ ಯಾದವ್‌ 8 ವಿಕೆಟ್‌, ಎಡಗೈ ಸ್ಪಿನ್ನರ್‌ ರಾಧಾ ಯಾದವ್‌ 7 ವಿಕೆಟ್‌ ಹೆಚ್ಚಿನ ಯಶಸ್ಸು ಸಾಧಿಸಿದರೆ, ಆಫ್ ಸ್ಪಿನ್ನರ್‌ಗಳಾದ ಡಿ. ಹೇಮಲತಾ (5 ವಿಕೆಟ್‌) ಮತ್ತು ದೀಪ್ತಿ ಶರ್ಮ (4 ವಿಕೆಟ್‌) ಕೂಡ ಭರವಸೆಯ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್‌ ವಿರುದ್ಧವೂ ಸ್ಪಿನ್ನರ್‌ಗಳು ಸಿಡಿದು ನಿಂತರೆ ಭಾರತದ ಫೈನಲ್‌ ಪ್ರವೇಶ ಖಚಿತಗೊಳ್ಳಲಿದೆ. ಈ ಕೂಟದ 4 ಪಂದ್ಯಗಳಲ್ಲಿ ಭಾರತದ ಸೀಮರ್‌ಗಳಾದ ಅರುಂಧತಿ ರೆಡ್ಡಿ ಮತ್ತು ಮಾನ್ಸಿ ಜೋಶಿ ಎಸೆದದ್ದು 13 ಓವರ್‌ ಮಾತ್ರ. ಇದರಲ್ಲಿ 10 ಓವರ್‌ಗಳನ್ನು ಅರುಂಧತಿ ಒಬ್ಬರೇ ಎಸೆದಿದ್ದಾರೆ. ಭಾರತ ತನ್ನೆಲ್ಲ ಲೀಗ್‌ ಪಂದ್ಯಗಳನ್ನು ಗಯಾನಾದ ಪ್ರೊವಿಡೆನ್ಸ್‌ ಅಂಗಳದಲ್ಲಿ ಆಡಿತ್ತು. ಎಲ್ಲವೂ ಬೆಳಗ್ಗಿನ ಅವಧಿಯ ಪಂದ್ಯಗಳಾಗಿದ್ದವು. ಆದರೆ ಸೆಮಿಫೈನಲ್‌ ಚಿತ್ರಣ ಬೇರೆಯೇ ಆಗಿದೆ. 
ಈ ಪಂದ್ಯ ನಾರ್ತ್‌ ಸೌಂಡ್‌ನ‌ಲ್ಲಿ ನಡೆಯಲಿದ್ದು, ಮೊದಲ ಸಲ ಭಾರತ ಡೇ-ನೈಟ್‌ ಪಂದ್ಯ ಆಡಲಿಳಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next