ಮುಂಬೈ: ಬಹುನಿರೀಕ್ಷಿತ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಕೂಟ 2023ರ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮಂಗಳವಾರ ಮಂಬೈನಲ್ಲಿ ಬಿಡುಗಡೆ ಮಾಡಿದೆ.
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಏಕದಿನ ವಿಶ್ವಕಪ್ ನಡೆಯಲಿದೆ. ಮೊದಲ ಪಂದ್ಯದಲ್ಲಿ 2019ರ ವಿಶ್ವಕಪ್ ಫೈನಲಿಸ್ಟ್ ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೆಣಸಾಡಲಿದೆ. ಈ ಉದ್ಘಾಟನಾ ಪಂದ್ಯ ಮತ್ತು ಫೈನಲ್ ಪಂದ್ಯಗಳೆರಡೂ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಆತಿಥೇಯ ಭಾರತ ತಂಡವು ಅಕ್ಟೋಬರ್ 8ರಂದು ತನ್ನ ಅಭಿಯಾನವನ್ನು ಆರಂಭಿಸಲಿದೆ. ಅಂದು ರೋಹಿತ್ ಬಳಗವು ಆಸ್ಟ್ರೇಲಿಯಾ ತಂಡವನ್ನು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಎದುರಿಸಲಿದೆ.
ಕೂಟದಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿದ್ದು, ಮೊದಲ ಎಂಟು ತಂಡಗಳು ಈಗಾಗಲೇ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಮೂಲಕ ಅರ್ಹತೆ ಪಡೆದಿವೆ. ಜುಲೈ 9 ರಂದು ಮುಕ್ತಾಯಗೊಳ್ಳುವ ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಕ್ವಾಲಿಫೈಯರ್ ಪಂದ್ಯಾವಳಿಯ ಕೊನೆಯಲ್ಲಿ ಅಂತಿಮ ಎರಡು ಸ್ಥಾನಗಳನ್ನು ನಿರ್ಧರಿಸಲಾಗುತ್ತದೆ.
ರೌಂಡ್ ರಾಬಿನ್ ಮಾದರಿಯಲ್ಲಿ ಕೂಟ ನಡೆಯಲಿದೆ. ಪ್ರತಿಯೊಂದು ತಂಡವು ತಲಾ ಒಂಬತ್ತು ಪಂದ್ಯಗಳನ್ನು ಮೊದಲ ಸುತ್ತಿನಲ್ಲಿ ಆಡಲಿದೆ. ಟಾಪ್ ನಾಲ್ಕು ತಂಡಗಳು ಸೆಮಿ ಫೈನಲ್ ಪ್ರವೇಶಿಸಲಿದೆ.
ಮೊದಲ ಸೆಮಿ ಫೈನಲ್ ನವೆಂಬರ್ 15ರಂದು ಮುಂಬೈನಲ್ಲಿ, ಎರಡನೇ ಸೆಮಿ ಫೈನಲ್ ನವೆಂಬರ್ 16ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.
ಅತ್ಯಂತ ಕುತೂಹಲಕಾರಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಅಕ್ಟೋಬರ್ 15ರಂದು ಅಹಮದಾಬಾದ್ ನಲ್ಲಿ ನಡೆಯಲಿದೆ.
ಅಹಮದಾಬಾದ್, ಹೈದರಾಬಾದ್, ಧರ್ಮಶಾಲಾ, ದೆಹಲಿ, ಚೆನ್ನೈ, ಲಕ್ನೋ, ಪುಣೆ, ಬೆಂಗಳೂರು, ಮುಂಬೈ, ಕೋಲ್ಕತ್ತಾದಲ್ಲಿ ಪಂದ್ಯಗಳು ನಡೆಯಲಿದೆ.
ಹೈದರಾಬಾದ್ ಜೊತೆಗೆ ಗುವಾಹಟಿ ಮತ್ತು ತಿರುವನಂತಪುರಂ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3 ರವರೆಗೆ ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಿದೆ.
ಭಾರತದ ಪಂದ್ಯಗಳು
( ದಿನಾಂಕ- ಪಂದ್ಯಗಳು- ಮೈದಾನ)
ಅಕ್ಟೋಬರ್ 8: ಭಾರತ- ಆಸ್ಟ್ರೇಲಿಯಾ- ಚೆನ್ನೈ
ಅಕ್ಟೋಬರ್ 11: ಭಾರತ- ಅಪ್ಘಾನಿಸ್ತಾನ- ದೆಹಲಿ
ಅಕ್ಟೋಬರ್ 15: ಭಾರತ- ಪಾಕಿಸ್ತಾನ- ಅಹಮದಾಬಾದ್
ಅಕ್ಟೋಬರ್ 19: ಭಾರತ- ಬಾಂಗ್ಲಾ- ಪುಣೆ
ಅಕ್ಟೋಬರ್ 22: ಭಾರತ- ನ್ಯೂಜಿಲ್ಯಾಂಡ್- ಧರ್ಮಶಾಲಾ
ಅಕ್ಟೋಬರ್ 29: ಭಾರತ- ಇಂಗ್ಲೆಂಡ್ – ಲಕ್ನೋ
ನವೆಂಬರ್ 2: ಭಾರತ- ಕ್ವಾಲಿಫಯರ್ 2- ಮುಂಬೈ
ನವೆಂಬರ್ 5: ಭಾರತ- ದಕ್ಷಿಣ ಆಫ್ರಿಕಾ- ಕೋಲ್ಕತ್ತಾ
ನವೆಂಬರ್ 11: ಭಾರತ- ಕ್ವಾಲಿಫಯರ್ 1- ಬೆಂಗಳೂರು