Advertisement

ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಮುಂದೂಡಿಕೆ; ಐಪಿಎಲ್‌ ಹಾದಿ ಇನ್ನು ಸುಗಮ

03:17 AM Jul 21, 2020 | Hari Prasad |

ದುಬಾೖ: ಕೊನೆಗೂ ಭಾರತ ನಿರೀಕ್ಷಿಸಿದಂತೆಯೇ ಆಗಿದೆ.

Advertisement

ವರ್ಷಾಂತ್ಯ ಆಸ್ಟ್ರೇಲಿಯದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಮುಂದೂಡಲಾಗಿದೆ.

ಇದರಿಂದ ಆ ಸಮಯದಲ್ಲಿ ಐಪಿಎಲ್‌ ನಡೆಸುವ ಭಾರತದ ಕನಸು ಬಹುತೇಕ ನನಸಾಗಲಿದೆ.

‘ಇಂದು ದುಬಾೖಯಲ್ಲಿ ನಡೆದ ಐಸಿಸಿ ಸಭೆಯಲ್ಲಿ ವಿಶ್ವಕಪ್‌ ಪಂದ್ಯಾವಳಿಯನ್ನು ಕೋವಿಡ್ 19 ಕಾರಣದಿಂದ ಮುಂದೂಡುವ ತೀರ್ಮಾನಕ್ಕೆ ಬರಲಾಯಿತು’ ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

‘ಈ ವಿಶ್ವ ಮಟ್ಟದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಟಗಾರರ ಸಹಿತ ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುವುದು ನಮ್ಮ ಕರ್ತವ್ಯ.

Advertisement

ಎಲ್ಲ ಸಾಧ್ಯತೆಗಳನ್ನು ಕೂಲಂಕಷವಾಗಿ ಪರಿಗಣಿಸಿದ ಬಳಿಕ ಈ ಕೂಟವನ್ನು ಮುಂದೂಡುವ ತೀರ್ಮಾನಕ್ಕೆ ಬರಲಾಯಿತು’ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನು ಸಾಹ್ನಿ ಹೇಳಿದರು.

ಮೂಲ ವೇಳಾಪಟ್ಟಿ ಪ್ರಕಾರ ಈ ಪಂದ್ಯಾವಳಿ ಅ. 18ರಿಂದ ನ. 15ರ ತನಕ ನಡೆಯಬೇಕಿತ್ತು. ಆದರೆ ವಿಶ್ವಾದ್ಯಂತ ಕೋವಿಡ್ 19 ತನ್ನ ಹಾವಳಿಯನ್ನು ಇನ್ನೂ ಮುಂದುವರಿಸುತ್ತಲೇ ಇರುವ ಕಾರಣ ಈ ಸಮಯದಲ್ಲಿ ವಿಶ್ವಕಪ್‌ನಂಥ ಮಹೋನ್ನತ ಕೂಟವನ್ನು ನಡೆಸುವುದು ಅಸಾಧ್ಯ ಎಂಬ ತೀರ್ಮಾನಕ್ಕೆ ಬರಲಾಯಿತು.
16 ಅಂತಾರಾಷ್ಟ್ರೀಯ ತಂಡಗಳ ಆಟಗಾರರಿಗೆ ಕ್ವಾರಂಟೈನ್‌ ವ್ಯವಸ್ಥೆ ಮಾಡುವುದು ಕೂಡ ಸಾಧ್ಯವಿಲ್ಲ ಎಂದು ಐಸಿಸಿ ಹೇಳಿತು.

ಏಕದಿನವೂ ಮುಂದೂಡಿಕೆ
ಇದೇ ವೇಳೆ 2023ರಲ್ಲಿ ಭಾರತದ ಆತಿಥ್ಯದ ಏಕದಿನ ವಿಶ್ವಕಪ್‌ ಪಂದ್ಯಾವಳಿಯನ್ನು ಕೆಲವು ತಿಂಗಳ ಮಟ್ಟಿಗೆ ಮುಂದೂಡಲು ನಿರ್ಧರಿಸಲಾಯಿತು.

2023ರ ಮಾರ್ಚ್‌-ಎಪ್ರಿಲ್‌ ತಿಂಗಳಲ್ಲಿ ನಡೆಯಬೇಕಿದ್ದ ಈ ಕೂಟವನ್ನು ಅದೇ ವರ್ಷದ ಅಕ್ಟೋಬರ್‌-ನವೆಂಬರ್‌ನಲ್ಲಿ ಆಡಲಾಗುವುದು.

ಇದರೊಂದಿಗೆ ಸತತ‌ 3 ವರ್ಷ ವಿಶ್ವಕಪ್‌ ಪಂದ್ಯಾವಳಿಗಳ ಆನಂದವನ್ನು ಸವಿಯುವ ಅವಕಾಶ ಕ್ರಿಕೆಟ್‌ ಪ್ರೇಮಿಗಳದ್ದಾಗಲಿದೆ. ಮುಂದಿನ ವರ್ಷದ ಅಕ್ಟೋಬರ್‌-ನವೆಂಬರ್‌ನಲ್ಲಿ ಹಾಗೂ 2022ರ ಅಕ್ಟೋಬರ್‌-ನವೆಂಬರ್‌ನಲ್ಲಿ ಪುರುಷರ ಟಿ20 ವಿಶ್ವಕಪ್‌ ಪಂದ್ಯಾವಳಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next