ಅಹ್ಮದಾಬಾದ್: ಕಳೆದೆರಡು ಫೈನಲ್‌ಗಳಲ್ಲಿ ಸೋತು ಹೊಸ ಭರವಸೆಯೊಂದಿಗೆ 13ನೇ ವಿಶ್ವಕಪ್ ವಿಶ್ವಕಪ್ ಅಭಿಯಾನ ಆರಂಭಿಸಿರುವ ನ್ಯೂಜಿಲ್ಯಾಂಡ್ ತಂಡ ಗುರುವಾರ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 9 ವಿಕೆಟ್ ಗಳ ಭಾರೀ ಗೆಲುವಿನೊಂದಿಗೆ ಶುಭಾರಂಭಗೈದಿದೆ.
ನ್ಯೂಜಿಲ್ಯಾಂಡ್ ತಂಡದ ಭರವಸೆಯ ಕಿರಣವಾಗಿರುವ ಕರ್ನಾಟಕ ಮೂಲದ 23 ರ ಹರೆಯದ ರಚಿನ್ ರವೀಂದ್ರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಅಬ್ಬರಿಸಿದ ರವೀಂದ್ರ 82 ಎಸೆತಗಳಿಂದ ಶತಕ ಪೂರ್ತಿಗೊಳಿಸಿದರು. ಡೆವೊನ್ ಕಾನ್ವೇ ಅವರೊಂದಿಗೆ 273 ರನ್ ಜೊತೆಯಾಟವಾಡಿದರು. ಅತ್ಯಾಕರ್ಷಕ ಇನ್ನಿಂಗ್ಸ್ ಕಟ್ಟಿದ ಕಾನ್ವೇ 152 ರನ್ ಸಿಡಿಸಿ ಅಜೇಯರಾಗಿ ಉಳಿದರು.(121 ಎಸೆತ 19 ಬೌಂಡರಿ ಮತ್ತು 3 ಸಿಕ್ಸರ್ ಅವರ ಗೆಲುವಿನ ಆಟದಲ್ಲಿ ಒಳಗೊಂಡಿತ್ತು.
ರವೀಂದ್ರ 96 ಎಸೆತಗಳಲ್ಲಿ 123 ರನ್ ಗಳಿಸಿ ಸ್ಮರಣೀಯ ಅಜೇಯ ಮೊದಲ ಶತಕ ದಾಖಲಿಸಿದರು. 11 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ ಸಿಡಿಸಿದರು.
ನ್ಯೂಜಿಲ್ಯಾಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಂಗ್ಲರು 50 ಓವರ್ ಗಳನ್ನು ಆಡಿ 9 ವಿಕೆಟ್ ನಷ್ಟಕ್ಕೆ 282 ರನ್ ಕಲೆ ಹಾಕಿದರು. ಜೋ ರೂಟ್ 77, ಜೋಸ್ ಬಟ್ಲರ್ 43 ಗರಿಷ್ಟ ಸ್ಕೋರ್ ಆಗಿತ್ತು. ಮ್ಯಾಟ್ ಹೆನ್ರಿ 3/48, ಗ್ಲೆನ್ ಫಿಲಿಪ್ಸ್ 2/17 ಬೌಲಿಂಗ್ ನಲ್ಲಿ ಗಮನ ಸೆಳೆದರು.
ಗುರಿ ಬೆನ್ನಟ್ಟಿದ ಕೀವಿಸ್ ಆರಂಭಿಕ ಆಘಾತ ಅನುಭವಿಸಿತು. ತಂಡ 10 ರನ್ ಗಳಿಸಿದ್ದ ವೇಳೆ ವಿಲ್ ಯಂಗ್ ಶೂನ್ಯಕ್ಕೆ ನಿರ್ಗಮಿಸಿದರು. ಆ ಬಳಿಕ ನೆಲಕಚ್ಚಿ ಆಡಿದ ಕಾನ್ವೇ- ರವೀಂದ್ರ ಜೋಡಿ ಇಂಗ್ಲೆಂಡ್ ಬೌಲರ್ ಗಳಿಗೆ ಸಿಂಹಸ್ವಪ್ನವಾಗಿ ಕಾಡಿದರು. 36.2 ಓವರ್ ಗಳಲ್ಲಿ 283 ಗಳಿಸಿ ಜಯಭೇರಿ ಬಾರಿಸಿ , ಭಾರೀ ಮೊತ್ತ ಲೆಕ್ಕಕ್ಕೆ ಇಲ್ಲದಂತೆ ಅಬ್ಬರಿಸಿತು.