ಹೊಸದಿಲ್ಲಿ: ಭಾರತೀಯ ವಾಯುಪಡೆ (ಐಎಎಫ್)ಗಾಗಿ ಹಿಂದುಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ (ಎಚ್‌ಎಎಲ್) ಅಭಿವೃದ್ಧಿಪಡಿಸಿರುವ 70 ಬೇಸಿಕ್ ಟ್ರೈನಿಂಗ್ ಏರ್‌ಕ್ರಾಫ್ಟ್ ಅನ್ನು ಖರೀದಿಸಲು ನಿರ್ಧರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹೊಸದಿಲ್ಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಒಟ್ಟು 6,800 ಕೋಟಿ ರೂ. ವೆಚ್ಚದಲ್ಲಿ ಈ ಖರೀದಿ ಪ್ರಕ್ರಿಯೆ ನಡೆಯಲಿದೆ. ತರಬೇತಿ ನೀಡುವ ವಿಚಾರದಲ್ಲಿ ಈ ವಿಮಾನ ತಾಂತ್ರಿಕವಾಗಿ ಅತ್ಯುತ್ತಮವಾಗಿದ್ದು, ಹವಾನಿಯಂತ್ರಿಕ ಕಾಕ್‌ಪಿಟ್ ಅನ್ನು ಹೊಂದಿರಲಿದೆ.
ಜತೆಗೆ ಅತ್ಯಾಧುನಿಕ ಸೌಕರ್ಯಗಳನ್ನೂ ಹೊಂದಿರಲಿದೆ ಎಂದು ಕೇಂದ್ರ ಸಂಪುಟ ಸಭೆಯ ಬಳಿಕ ಬಿಡುಗಡೆ ಮಾಡಲಾಗಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಎಪ್ಪತ್ತು ವಿಮಾನಗಳ ಸೇರ್ಪಡೆಯಿಂದಾಗಿ ಐಎಎಫ್ಗೆ ಹೊಸತಾಗಿ ಸೇರ್ಪಡೆಯಾಗಲಿರುವ ಪೈಲಟ್‌ಗಳಿಗೆ ಅತ್ಯಾಧುನಿಕ ವಿಮಾನಗಳಲ್ಲಿ ತರಬೇತಿ ನೀಡಲು ಸಾಧ್ಯವಾಗಲಿದೆ.
ಖಾಸಗಿ ಸಹಭಾಗಿತ್ವ: ಎಚ್‌ಎಎಲ್ ಖಾಸಗಿ ಸಹಭಾಗಿತ್ವದಲ್ಲಿ ಬೇಸಿಕ್ ಟ್ರೈನಿಂಗ್ ಏರ್‌ಕ್ರಾಫ್ಟ್ ಅನ್ನು ಅಭಿವೃದ್ಧಿ ಪಡಿಸಲಿದೆ. ತರಬೇತಿ ವಿಮಾನದಲ್ಲಿ ಶೇ.60ರಷ್ಟು ಪ್ರಮಾಣದಲ್ಲಿ ದೇಶೀಯ ಉತ್ಪನ್ನಗಳನ್ನು ಒಳಗೊಳ್ಳಲಿದೆ. ಅವುಗಳನ್ನು ದೇಶದ ಖಾಸಗಿ ಕಂಪೆನಿಗಳ ಖಾಸಗಿ ಸಹಭಾಗಿತ್ವದಲ್ಲಿ ಉತ್ಪಾದಿಸಲಾಗುತ್ತದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 4,500 ಉದ್ಯೋಗಗಳೂ ಸೃಷ್ಟಿಯಾಗಲಿವೆ.
ಮತ್ತೊಂದು ಪ್ರಮುಖ ನಿರ್ಧಾರದಲ್ಲಿ ಎಲ್ ಆ್ಯಂಡಿ ಟಿಯಿಂದ 3,100 ಕೋಟಿ ರೂ. ವೆಚ್ಚದಲ್ಲಿ ಮೂರು ತರಬೇತಿ ಹಡಗುಗಳ ಖರೀದಿಗೆ ಕೂಡ ಸಮ್ಮತಿ ನೀಡಲಾಗಿದೆ.