ಹೊಸದಿಲ್ಲಿ : ಭಾರತೀಯ ವಾಯು ಪಡೆ, ಪಾಕಿಸ್ಥಾನದ ಫಕ್‌ತೂನ್‌ಖ್ವಾ ಪ್ರಾಂತ್ಯದ ಬಾಲಾಕೋಟ್ ನಲ್ಲಿನ ಜೈಶ್ ಎ ಮೊಹಮ್ಮದ್ ಸಂಘಟನೆಯ ಬೃಹತ್ ಉಗ್ರ ತರಬೇತಿ ಶಿಬಿರವನ್ನು ಧ್ವಂಸಗೊಳಿಸಿದುದನ್ನು ಅನುಸರಿಸಿ ಫೆ.27ರಂದು ಬೆಳಗ್ಗೆ ಪಾಕ್ ವಾಯು ಪಡೆ ಭಾರತದ ಮೇಲೆ ಸಮರೋಪಾದಿಯ ವೈಮಾನಿಕ ದಾಳಿ ನಡೆಸಲು ತನ್ನ ಎಫ್ 16 ಯುದ್ಧ ವಿಮಾನಗಳನ್ನು ಎಲ್‌ಓಸಿಯಲ್ಲಿ ಸಜ್ಜುಗೊಳಿಸಿತ್ತು. ಇದನ್ನು ಸಕಾಲದಲ್ಲಿ ಗಮನಿಸಿದ ಭಾರತೀಯ ವಾಯು ಪಡೆ, ಪಾಕಿಸ್ಥಾನ ನಡೆಸುವ ಯಾವುದೇ ಸಂಭವನೀಯ ವಾಯು ಸಮರವನ್ನು ವಿಫಲಗೊಳಿಸಲು ಪೂರ್ಣ ಪ್ರಮಾಣದ ಕಟ್ಟೆಚ್ಚರವನ್ನು ವಹಿಸಿತ್ತು ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪಾಕ್ ಯುದ್ಧ ವಿಮಾನಗಳು ಎಲ್‌ಓಸಿಯಲ್ಲಿ ಅಣಿಯಾಗುತ್ತಿದ್ದಂತೆ ಭಾರತೀಯ ವಾಯು ಪಡೆ ಈ ಗಂಭೀರ ವಿದ್ಯಮಾನವನ್ನು ರಾಡಾರ್ ಗಳ ಮೂಲಕ ಗಮನಿಸಿ ಒಡನೆಯೇ ತನ್ನ ಹೆಚ್ಚುವರಿ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿತು ಎಂದು ಐಎಎಫ್ ಹೇಳಿದೆ.
ಆ್ಯಮ್‌ರಾಮ್‌ಎಐಎಂ-120 ಕ್ಷಿಪಣಿಗಳನ್ನು ಪ್ರಯೋಗಿಸುವ ಸಲುವಾಗಿ ಎಫ್ 16 ಯುದ್ಧ ವಿಮಾನಗಳನ್ನು ಪಾಕ್ ವಾಯು ಪಡೆ ಸಜ್ಜು ಗೊಳಿಸುತ್ತಿದ್ದಂತೆಯೇ ಭಾರತೀಯ ವಾಯು ಪಡೆ ಇತ್ತ ತನ್ನ ಮಿರಾಜ್ 2000, ಎಸ್‌ಯು 30 ಮತ್ತು ಮಿಗ್ 21 ಬೈಸನ್ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿತು. ಪಾಕಿಸ್ಥಾನದ ಆ್ಯಮ್‌ರಾಮ್‌ಎಐಎಂ-120 ಕ್ಷಿಪಣಿಗಳನ್ನು IAF SU-30 MKI ಯುದ್ಧ ವಿಮಾನ ಯಶಸ್ವಿಯಾಗಿ ಹೊಡೆದುರುಳಿಸಿತು.
ಭಾರತದತ್ತ ಪಾಕ್ ಎಫ್ 16 ಯುದ್ಧ ವಿಮಾನಗಳು ಹಾರಿ ಬರುತ್ತಿದ್ದಂತೆಯೇ ಭಾರತೀಯ ಯುದ್ಧ ವಿಮಾನಗಳು ಅವುಗಳನ್ನು ಆಗಸ ಮಾರ್ಗದಲ್ಲಿ ಅಡ್ಡಗಟ್ಟಿದ ಪರಿಣಾಮ ಅವು ಅವಸರವಸರದಲ್ಲಿ ಹಿಂದಿರುಗಿ ಹೋಗುವಾಗ ಜಮ್ಮು ಕಾಶ್ಮೀರದ ರಜೌರಿಯ ಪೂರ್ವ ಭಾಗದಲ್ಲಿ ಕೆಲವು ಬಾಂಬ್ ಗಳನ್ನು ಉದುರಿಸಿ ಮರಳಿದವು. ಆದರೆ ಆ ಬಾಂಬ್‌ಗಳು ಸಿಡಿಯದಿದ್ದುದರಿಂದ ಸಂಭವನೀಯ ಅಪಾಯ ತಪ್ಪಿತ್ತು ಎಂದು ಐಎಎಫ್ ತನ್ನ ಹೇಳಿಕೆಯಯಲ್ಲಿ ತಿಳಿಸಿದೆ.
ಪಾಕ್ ವಾಯು ಪಡೆ ಅಕ್ರಮವಾಗಿ ಬಳಸಿದ್ದ ಎಫ್ 16 ಯುದ್ಧ ವಿಮಾನಗಳಲ್ಲಿ ಒಂದನ್ನು ನಮ್ಮ ಮಿಗ್ ಫೈಟರ್ ಜೆಟ್ ಧ್ವಂಸಗೈದು ಉರುಳಿಸಿತು ಎಂದು ಐಎಎಫ್ ಹೇಳಿದೆ.