ಭಾರತೀಯ ವಾಯುಪಡೆ ಮಂಗಳವಾರ ಮುಂಜಾನೆ ಪಾಕಿಸ್ತಾನದೊಳಕ್ಕೆ ನುಗ್ಗಿ ಜೈಶ್-ಎ-ಮೊಹಮ್ಮದ್ ತರಬೇತಿ ನೆಲೆಯನ್ನು ನಾಶ ಮಾಡುವ ಮೂಲಕ ಉಗ್ರರಿಗೆ ಹಾಗೂ ಅವರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದೆ. ಜೈಶ್ ಸಂಘಟನೆ ಫೆ. 14ರಂದು ಪುಲ್ವಾಮದಲ್ಲಿ 44 ಸಿಆರ್‌ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಬಳಿಕ ಪ್ರತಿಯೊಬ್ಬ ಭಾರತೀಯನ ರಕ್ತವೂ ಆಕ್ರೋಶದಿಂದ ಕುದಿಯುತ್ತಿತ್ತು. ಈ ಭೀಕರ ದಾಳಿಗೆ ಪ್ರತೀಕಾರ ತೀರಿಸಲೇ ಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಆದರೆ ನಮ್ಮ ಸೇನೆ ಇಷ್ಟು ಬೇಗ, ಇಷ್ಟು ಕರಾರುವಕ್ಕಾಗಿ ಪ್ರತೀಕಾರ ತೀರಿಸಬಹುದು ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಉಗ್ರರಿಗೆ ಮತ್ತು ಅವರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಅವರ ಭಾಷೆಯಲ್ಲೇ ಉತ್ತರ ನೀಡಿದ ವಾಯುಪಡೆ ಅಭಿನಂದನಾರ್ಹ.
ಇದು ಭಾರತ ಪಾಕಿಸ್ತಾನದ ಮೇಲೆ ಮಾಡಿರುವ ಎರಡನೇ ಸರ್ಜಿಕಲ್ ಸ್ಟ್ರೈಕ್. ಈ ಹಿಂದೆ 2016ರಲ್ಲಿ ಉರಿಯ ಸೇನಾ ನೆಲೆಯ ಮೇಲಾದ ದಾಳಿಗೆ ಪ್ರತೀಕಾರವಾಗಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇದ್ದ ಉಗ್ರರ ನೆಲೆಗಳನ್ನು ನಾಶ ಮಾಡಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಬಹಳಷ್ಟು ಉಗ್ರರು ಸತ್ತಿದ್ದರು. ನಮ್ಮ ತಂಟೆಗೆ ಬಂದರೆ ಎದಿರೇಟು ನೀಡುತ್ತೇವೆ ಎಂಬ ಸಂದೇಶವನ್ನು ಈ ಮೂಲಕ ನೀಡಿದ್ದರೂ ಪಾಕಿಸ್ತಾನವಾಗಲಿ ಅದರ ಕೃಪಾಶಯದಲ್ಲಿರುವ ಉಗ್ರ ಸಂಘಟನೆಗಳಾಗಲಿ ಅದನ್ನು ಅರ್ಥ ಮಾಡಿಕೊಂಡಿರಲೇ ಇಲ್ಲ. ಆನಂತರವೂ ಉಗ್ರರ ಉಪಟಳ ಮುಂದುವರಿದಿತ್ತು. ಪುಲ್ವಾಮ ದಾಳಿಯ ಮೂಲಕ ಅದು ಪರಾಕಾಷ್ಠೆಗೆ ಏರಿತ್ತು. ಈ ಸಂದರ್ಭದಲ್ಲಿ ಭಾರತ ತನ್ನನ್ನು ರಕ್ಷಿಸಿಕೊಳ್ಳಲು ದಿಟ್ಟ ನಡೆಯನ್ನು ಇಡುವುದು ಅನಿವಾರ್ಯವಾಗಿತ್ತು. ಇದರ ಪರಿಣಾಮವೇ ಇಂದಿನ ಎರಡನೇ ಸರ್ಜಿಕಲ್ ಸ್ಟ್ರೈಕ್.
ಮೊದಲ ಸರ್ಜಿಕಲ್ ಸ್ಟ್ರೈಕ್ ಗಡಿಯ ಆಸುಪಾಸಿನಲ್ಲೇ ನಡೆದಿತ್ತು. ಆದರೆ ಈಗಿನ ಕಾರ್ಯಾಚರಣೆ ಎಲ್ಲ ರೀತಿಯಿಂದಲೂ ಅತ್ಯಂತ ಮಹತ್ವದ್ದಾಗಿದೆ. 1971ರ ಬಳಿಕ ಇದೇ ಮೊದಲ ಬಾರಿ ವಾಯುಪಡೆ ಪಾಕಿಸ್ತಾನದೊಳಕ್ಕೇ ನುಗ್ಗಿ ದಾಳಿ ವೈರಿಗಳನ್ನು ನಿರ್ನಾಮ ಮಾಡಿದೆ. ವರದಿಗಳ ಪ್ರಕಾರ ಈ ಕಾರ್ಯಾಚರಣೆಯಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿದ್ದ ಪಂಚತಾರಾ ಸೌಲಭ್ಯಗಳಿದ್ದ ಅತ್ಯಾಧುನಿಕ ನೆಲೆಯನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದ್ದು ಸುಮಾರು 350ರಷ್ಟು ಉಗ್ರರು ಮತ್ತು ಅವರ ತರಬೇತಿದಾರರು ಸತ್ತಿದ್ದಾರೆ. ಉಗ್ರರ ವಿರುದ್ಧದ ಹೋರಾಟದಲ್ಲಿ ಇದು ಅತ್ಯಂತ ಪ್ರಮುಖ ಕಾರ್ಯಾಚರಣೆಯೇ ಹೌದು. ಭಾರತದ ತಂಟೆಗೆ ಹೋದರೆ ಎದಿರೇಟು ಎಷ್ಟು ತೀವ್ರವಾಗಿರುತ್ತದೆ ಎನ್ನುವ ಪಾಠವನ್ನು ಪಾಕಿಸ್ತಾನ ಕಲಿತುಕೊಳ್ಳಬೇಕು. ಇದು ಎಷ್ಟೇ ಪೆಟ್ಟು ತಿಂದರೂ ಕೇವಲ ಶಾಂತಿ ಮಂತ್ರವನ್ನು ಜಪಿಸುವ ಹಿಂದಿನ ಅಸಹಾಯಕ ಭಾರತ ಅಲ್ಲ, ಶಕ್ತಿಶಾಲಿ ನವ ಭಾರತ ಎಂಬುದನ್ನು ಪಾಕ್ ಸರ್ಕಾರ ಮತ್ತು ಸೇನೆ ಅರ್ಥಮಾಡಿಕೊಳ್ಳಬೇಕು.
ಇನ್ನು ಈ ಕಾರ್ಯಾಚರಣೆಗೆ ಪಾಕಿಸ್ತಾನ ನೀಡುತ್ತಿರುವ ಪ್ರತಿಸ್ಪಂದನಗಳು ಅದರ ಎಡಬಿಡಂಗಿತನವನ್ನು ಜಗಜ್ಜಾಹೀರುಗೊಳಿಸುತ್ತಿರುವುದಲ್ಲದೆ ಹಾಸ್ಯಾಸ್ಪದವೂ ಆಗಿದೆ. ಭಾರತ ಹೇಳುತ್ತಿರುವಂಥ ದಾಳಿಯೇ ನಡೆದಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದರೆ ವಿದೇಶಾಂಗ ಸಚಿವರು ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನೋರ್ವ ಸಚಿವರು ನಮ್ಮ ಸೇನೆ ಸನ್ನದ್ಧವಾಗಿಯೇ ಇತ್ತು. ಆದರೆ ರಾತ್ರಿಯಾದ ಕಾರಣ ದಾಳಿಯಾದದ್ದು ಗೊತ್ತಾಗಲಿಲ್ಲ ಎಂದು ಹೇಳಿದ್ದು ಬಹಳ ತಮಾಷೆಯಾಗಿದೆ. ಉಗ್ರ ಒಸಾಮ ಬಿನ್ ಲಾಡೆನ್‌ನನ್ನು ಬೇಟೆಯಾಡಲು ಅಮೆರಿಕ ಅಬೊಟ್ಟಾಬಾದ್‌ಗೆ ಲಗ್ಗೆ ಇಟ್ಟಾಗಲೂ ಪಾಕಿಸ್ತಾನ ಸೇನೆ ಹೀಗೆ ಜಗತ್ತಿನೆದುರು ನಗೆಪಾಟಲಿಗೀಡಾಗಿತ್ತು. ಇದೀಗ ಭಾರತದ ದಾಳಿಯಿಂದಾಗಿ ಮತ್ತೂಮ್ಮೆ ಮುಖಭಂಗಕ್ಕೀಡಾಗಿದೆ. ಇಮ್ರಾನ್ ಖಾನ್‌ರ ಕ್ರಿಕೆಟ್ ಭಾಷೆಯಲ್ಲೇ ಹೇಳುವುದಾದರೆ ಪುಲ್ವಾಮ ದಾಳಿಯ ಬಳಿಕ ಇಮ್ರಾನ್ ಭಾರತದಲ್ಲಿ ಇನ್‌ಸಿÌಂಗರ್‌ಗಳನ್ನು ಎಸೆದಿದ್ದರು. ಇದೀಗ ಭಾರತ ಪಾಕಿಸ್ತಾನಕ್ಕೆ ಗೂಗ್ಲಿಗಳನ್ನು ಎಸೆದು ತಕ್ಕ ಎದಿರೇಟು ನೀಡಿದೆ. ಈ ಕಾರ್ಯಾಚರಣೆಯನ್ನು ನೋಡಿದ ಬಳಿಕ ಇನ್ನಾದರೂ ಪಾಕಿಸ್ತಾನ ತನ್ನಲ್ಲಿರುವ ಉಗ್ರರನ್ನು ಮಟ್ಟ ಹಾಕಬೇಕು.
ಇದು ಉಗ್ರರನ್ನು ಗುರಿಮಾಡಿಕೊಂಡ ಕಾರ್ಯಾಚರಣೆಯೇ ಹೊರತು ಪಾಕಿಸ್ತಾನದ ಸೇನೆಯನ್ನು ಗುರಿಮಾಡಿಕೊಂಡಿಲ್ಲ. ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಪತ್ರಿಕಾಗೋಷ್ಠಿಯಲ್ಲಿ ಈ ಅಂಶವನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪಾಕಿಸ್ತಾನ ಇದು ತನ್ನ ಮೇಲಾಗಿರುವ ದಾಳಿ ಎಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೇಳಿಕೊಂಡರೂ ಅದಕ್ಕೇನೂ ಬಲ ಬರುವುದಿಲ್ಲ. ಈಗಾಗಲೇ ಅಮೆರಿಕವೂ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾರತದ ಬೆಂಬಲಕ್ಕೆ ನಿಂತಿವೆ. ಇದು ಯುದ್ಧಕ್ಕಾಗಿ ಮಾಡಿದ ದಾಳಿ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿರುವುದರಿಂದ ಪಾಕ್ ಕಾಲು ಕೆದರಿ ಜಗಳಕ್ಕೆ ಬಾರದೆ, ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡುವುದು ಉತ್ತಮ.