ಶ್ರೀನಗರ: ಕಾಶ್ಮೀರ ಹೋರಾಟ ರಾಜಕೀಯವಾದ್ದಲ್ಲ. ಪ್ರತ್ಯೇಕ ರಾಷ್ಟ್ರ ಸ್ಥಾಪನೆಗೂ ಅಲ್ಲ, ಬದಲಿಗೆ ಇದು ಇಸ್ಲಾಂ ಸಾಮ್ರಾಜ್ಯ ಸ್ಥಾಪನೆ ಕುರಿತಾದ ಹೋರಾಟ. ಇದರ ಬಗ್ಗೆ ಸ್ಪಷ್ಟಪಡಿಸದಿದ್ದರೆ, ಪ್ರತ್ಯೇಕತಾವಾದಿ ಹುರಿಯತ್ ನಾಯಕರ ತಲೆ ಕತ್ತರಿಸುತ್ತೇವೆ ಎಂಬ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಝಾಕಿರ್ ಮೂಸಾನ ಹೇಳಿಕೆ ಉಗ್ರ ಸಂಘಟನೆಯಲ್ಲಿ ತೀವ್ರ ಒಡಕು ಸೃಷ್ಟಿಸಿದೆ.
ಈ ಧ್ವನಿಸಂದೇಶವನ್ನು ಒಪ್ಪಲು ಹಿಜ್ಬುಲ್ ನಿರಾಕರಿಸಿದೆ. ಈ ಹೇಳಿಕೆ ಆತನ ವೈಯಕ್ತಿಕವಾದದ್ದು ಎಂದಿದೆ. ಈ ಬಗ್ಗೆ ಉಗ್ರರ ಒಳಜಗಳದಿಂದಾಗಿ ಮೂಸಾ ಹಿಜ್ಬುಲ್ ಸಂಘಟನೆಯನ್ನೇ ತೊರೆಯುವುದಾಗಿ ಹೇಳಿದ್ದಾನೆ. ಹಿಜ್ಬುಲ್‌ಗೂ ತನಗೂ ಸಂಬಂಧವಿಲ್ಲ ಎಂದು ಹೇಳಿದ್ದಾನೆ.
ನಡೆದಿದ್ದೇನು?: ದಿನಗಳ ಹಿಂದೆ 5.40 ನಿಮಿಷಗಳ ಮೂಸಾನ “ತಲೆಕತ್ತರಿಸುವ’ ಧ್ವನಿ ಸಂದೇಶವನ್ನು ಅಂತರ್ಜಾಲದಲ್ಲಿ ಹಾಕಲಾಗಿದ್ದು, ಇರಾಕ್, ಸಿರಿಯಾದಲ್ಲಿ ಐಸಿಸ್ ಮಾದರಿಯಲ್ಲಿ ಇಸ್ಲಾಂ ಸಾಮ್ರಾಜ್ಯ ಸ್ಥಾಪನೆ ಗುರಿಯಾಗಿದೆ ಎಂದು ಹೇಳಿದ್ದ. ಆದರೆ ಹಿಜ್ಬುಲ್ ಮೂಸಾನ ಹೇಳಿಕೆಯಿಂದ ದೂರ ನಿಂತಿದ್ದು, “ಮೂಸಾನ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ಅದು ಸ್ವೀಕಾರಾರ್ಹವಾದ್ದಲ್ಲ’ ಎಂದು ಹಿಜ್ಬುಲ್ ವಕ್ತಾರ ಸಲೀಮ್ ಹಶ್ಮಿ ಪಾಕ್ ಆಕ್ರಮಿತ ಕಾಶ್ಮೀರ ದಿಂದ ಹೇಳಿಕೆ ನೀಡಿದ್ದಾನೆ. ಏತನ್ಮಧ್ಯೆ ಧ್ವನಿ ಸಂದೇಶದಲ್ಲಿದ್ದಿದ್ದು ಮೂಸಾನ ಧ್ವನಿಯೇ ಎಂಬುದನ್ನು ಪರೀಕ್ಷಿಸುವುದಾಗಿ ಜಮ್ಮು ಮತ್ತು ಕಾಶ್ಮೀರದ ಡಿಜಿ ಎಸ್.ಪಿ.ವೈದ್ ಹೇಳಿದ್ದಾರೆ.
ಪಾಕ್ ಕದನ ವಿರಾಮ ಉಲ್ಲಂಘನೆ: ಇತ್ತ ನಿಯಂತ್ರಣ ರೇಖೆಗೆ ತಾಗಿಕೊಂಡಿರುವ ರಜೌರಿ ಜಿಲ್ಲೆಯಲ್ಲಿ ಗಡಿಯಾಚೆನಿಂದ ಪಾಕ್ ಅಪ್ರಚೋದಿತ ಶೆಲ್‌ದಾಳಿ ನಡೆಸಿದೆ. ಪರಿಣಾಮ ಇಬ್ಬರು ಮೃತಪಟ್ಟು ಮೂವರಿಗೆ ಗಾಯವಾಗಿವೆ.
ಕದನವಿರಾಮ ಉಲ್ಲಂಘನೆ ಪರಿಣಾಮ ಶಾಲೆಗಳನ್ನು ಅನಿರ್ದಿಷ್ಟಾವಧಿ ಮುಚ್ಚಲಾಗಿದೆ. ಪಾಕ್‌ನ ಈ ಕುಕೃತ್ಯದ ಬಗ್ಗೆ ಭಾರತೀಯ ಗಡಿಭದ್ರತಾ ಪಡೆ (ಬಿಎಸ್‌ಎಫ್) ಪ್ರಬಲ ಪ್ರತಿಭಟನೆ ದಾಖಲಿಸಿದೆ.
ಲಷ್ಕರ್ ಉಗ್ರರ ಸೆರೆ
ಪ್ರತ್ಯೇಕ ಪ್ರಕರಣವೊಂದರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿ, ಚೆನಾಬ್ ಕಣಿವೆಯಲ್ಲಿ ಲಷ್ಕರ್-ಎ- ತೋಯ್ಬಾ ಸಂಘಟನೆ ಮರುಸ್ಥಾಪ ನೆಗೆ ಯತ್ನಿಸುತ್ತಿದ್ದ 7 ಮಂದಿಯನ್ನು ಬಂಧಿಸಿದ್ದಾರೆ. ಆಘಾತಕಾರಿ ಎನ್ನುವಂತೆ ಬಂಧನಕ್ಕೊಳಗಾದವಧಿರಲ್ಲಿ ಎಸ್‌ಪಿಓ ಮತ್ತು ಒಬ್ಬರು ಮಾಜಿ ಟೆರಿಟೋರಿಯಲ್ ಸೇನಾ ಅಧಿಕಾರಿ ಸೇರಿದ್ದಾರೆ.