Advertisement

ಮತದಾನ ನನ್ನ ಹಕ್ಕು ನಾನು ಚಲಾಯಿಸುತ್ತೇನೆ

01:30 AM Apr 06, 2018 | |

ರಾಜಕೀಯ ಇಂದು ಒಂದು ಉದ್ಯಮವಾಗಿ ಬದಲಾಗಿರುವುದರಿಂದ ಜನಸೇವೆಯೇ ಜನಾರ್ದನ ಸೇವೆ ಎಂಬ ಮಾತು ಮೌಲ್ಯ ಕಳೆದುಕೊಂಡಿದೆ. ಪರಿಣಾಮವಾಗಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಯಾವುದೇ ಸರಕಾರ ಬಂದರೂ ನಯಾ ಪೈಸೆಯ ಲಾಭವಿಲ್ಲ ಎನ್ನುವ ಮಾತುಗಳು ನಾಣ್ನುಡಿ ಯಷ್ಟು ಖ್ಯಾತವಾಗಿದೆ. ನಾಯಕರು ಮತ ಯಾಚನೆಗೆ ಬರುವಾಗ ಯಾವುದಾದರೊಂದು ಸಮಸ್ಯೆಯ ನೆಪವನ್ನು ಹೊತ್ತುಕೊಂಡು ಬಗೆಹರಿಸುವ ಮಾತಿನೊಂದಿಗೆ ಮತ ಕೇಳುತ್ತಾರೆ. ವೈಯಕ್ತಿಕವಾಗಿ ಯಾರಿಗೂ ಸಮಸ್ಯೆಗಳು ಬಗೆ ಹರಿಯುವುದು ಬೇಡ ಎಂಬುದು ಕಟು ಸತ್ಯ. ಅಭಿವೃದ್ಧಿಯ ಮೇಲೆ ಮತಯಾಚಿಸುವಷ್ಟು ಪ್ರೌಢಿಮೆ ನಮ್ಮನ್ನಾಳುವವರಿಗೆ ಬಂದಿಲ್ಲ. ಬರೀ ಆರೋಪ ಪ್ರತ್ಯಾರೋಪಗಳಲ್ಲೇ ಕಾಲದೂಡುವ ಜನಪ್ರತಿನಿಧಿಗಳು ನೈಜ ಪ್ರಜಾಪ್ರಭುತ್ವ ಆಶಯದ ವಿರೋಧಿಗಳು. ಅವರ ಕಪಟ ನಾಟಕಗಳನ್ನು ಗಮನಿಸುತ್ತಿರುವ ಪ್ರಜೆಗಳಿಗೆ ಬೇಸರದ ಜತೆಗೆ ಪ್ರಜಾಪ್ರಭುತ್ವದ ಕುರಿತು ಭ್ರಮನಿರಸನ ಹೊಂದಲು ಶುರಾಗುತ್ತದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಸರಕಾರ ಎನ್ನುವುದು ಬರೀ ಘೋಷಣೆ ಮಾತ್ರ.ಸರಕಾರಗಳ ಕುರಿತಾದ ಭ್ರಮನಿರಸನ ಮತ ಚಲಾಯಿಸುವ ಆಸಕ್ತಿಯನ್ನು ಕುಂದಿಸಿದೆ.  

Advertisement

ಆದರೆ ನಮ್ಮ ಇರುವಿಕೆಯನ್ನು ಸಾಬೀತುಪಡಿಸಲು ಮತದಾನ ಮಾಡುವುದು ಒಂದು ವಿಧಾನ.  ಸಾಂವಿಧಾನಿಕ ಸೌಲಭ್ಯ
ಭಾರತೀಯರಿಗೆ ಮತದಾನ ಸಾಂವಿಧಾನಿಕವಾಗಿ ದೊರೆತ ಅವಕಾಶ. ನಮ್ಮನ್ನಾಳುವ ಮಂದಿಯನ್ನು ನಾವೇ ಚುನಾಯಿಸಿಕೊಳ್ಳುವ ಬಹು ಅಮೂಲ್ಯ ಅವಕಾಶವನ್ನು ಪ್ರಜಾಪ್ರಭುತ್ವದ ನೀಡಿದೆ. ಮತದಾನವನ್ನು ಹಕ್ಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ನಮ್ಮ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ನಮ್ಮ ಹಕ್ಕಿಗೆ ಚ್ಯುತಿ ಬಂದರೆ ಅದನ್ನು ಪ್ರಶ್ನಿಸುವ ಅವಕಾಶ ಇದೆ. ಇಷ್ಟೆಲ್ಲ ಅನುಕೂಲವನ್ನು ಸಂವಿಧಾನ ನೀಡಿದರೂ ನಾವು ರಾಜಕೀಯ ವ್ಯವಸ್ಥೆಯ ಮೇಲೆ ಭ್ರಮೆನಿರಸನ ಹೊಂದಿ ಮತದಾನದಿಂದ ದೂರ ಉಳಿಯುವುದು ಸಾಧುವಲ್ಲ.

ವಿಶ್ವದ ಬಹಳಷ್ಟು ರಾಷ್ಟ್ರಗಳಲ್ಲಿ ಮತದಾನದ ಮುಕ್ತ ಹಕ್ಕು ನೀಡಲಾಗಿಲ್ಲ. ಕೆಲವು ಕಮ್ಯುನಿಷ್ಟ್ ಪ್ರಭುತ್ವ ಹೊಂದಿದ ರಾಷ್ಟ್ರಗಳಲ್ಲಿ ನಿರ್ಬಂಧಿತ ಪ್ರಜಾಪ್ರಭುತ್ವವಿದೆ. ಹಲವು ರಾಷ್ಟ್ರಗಳಲ್ಲಿ ಈಗಲೂ ವಂಶಾಡಳಿತ ಜಾರಿಯಲ್ಲಿದೆ. ಭಾರತ, ಅಮೆರಿಕ ಮೊದಲಾದ ಹಲವು ರಾಷ್ಟ್ರಗಳಲ್ಲಿ ಆಳುವವರನ್ನು ಚುನಾಯಿಸುವ ಅಧಿಕಾರವನ್ನು ಜನರಿಗೆ ನೀಡಲಾಗಿದೆ. ಅಭಿವೃದ್ಧಿ ಕಾರ್ಯಗಳು, ಜನಪ್ರತಿನಿಧಿಗಳ ಸಂಬಳ, ಭತ್ಯೆ, ಮೊದಲಾದ ಎಲ್ಲ ಖರ್ಚನ್ನು ಪ್ರಜೆಗಳು ಪಾವತಿಸಿದ ತೆರಿಗೆಯಿಂದ ಭರಿಸಲಾಗುತ್ತದೆ. 

ಸರಕಾರ ಮಾಡುವ ಖರ್ಚು ಅಧಿಕವಾದ ಪಕ್ಷದಲ್ಲಿ ಅದನ್ನು ಜನರ ಮೇಲೆ ಹೇರಲಾಗುತ್ತದೆ. ನಮ್ಮ ಹಣದಿಂದ ಆಡಳಿತ ನಡೆಯುತ್ತಿರುವಾಗ ನಾವು ಮತದಾನದಿಂದ ದೂರ ಉಳಿಯುವುದು ಸರಿಯೇ? ಸಂವಿಧಾನಾತ್ಮಕವಾಗಿ ನಮ್ಮ ಧ್ವನಿಯನ್ನು ಅಭಿವ್ಯಕ್ತಗೊಳಿಸುವ ಅವಕಾಶವನ್ನು ಈ ನೆಲ ನಮಗೆ ದಯಪಾಲಿಸಿದೆ. ಭಾರತದಲ್ಲಿ ಮಲ್ಟಿ ಪೊಲಿಟಿಕಲ್‌ ಸಿಸ್ಟಮ್‌ (ಎರಡಕ್ಕಿಂತ ಹೆಚ್ಚು ಪಕ್ಷಗಳನ್ನು ಹೊಂದುವ ಅವಕಾಶ) ಚಾಲ್ತಿಯಲ್ಲಿದೆ. ಅಮೆರಿಕ, ಯುಕೆ ರಾಷ್ಟ್ರಗಳಲ್ಲಿ ಎರಡೇ ಪಕ್ಷಗಳಿಗೆ ಅವಕಾಶ ಇದೆ. ಆದರೆ ನಮ್ಮಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಉದ್ದೇಶದಿಂದ ಪ್ರಾದೇಶಿಕ ಪಕ್ಷಗಳನ್ನು ಹುಟ್ಟುಹಾಕಲು ಸಂವಿಧಾನವು ಅವಕಾಶ ಕಲ್ಪಿಸಿದೆ. ಈಗಿರುವ ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಇಲ್ಲವೇ? ಇಂತಹ ಸಂದರ್ಭದಲ್ಲಿ ನಿಮಗೂ ಹೊಸಪಕ್ಷವನ್ನು ಸ್ಥಾಪಿಸುವ ಅವಕಾಶವನ್ನು ಹೊಂದಿದವರಾಗಿದ್ದೀರಿ. 

ನೀವು ರಾಜಕೀಯದ ಭಾಗವಾಗಲು ಇಷ್ಟಪಡುತ್ತಿಲ್ಲ ಎಂದರೂ ನೀವು ಮತದಾನದಿಂದ ದೂರ ಉಳಿಯಲು ಆಗುವುದಿಲ್ಲ. ನಿಮ್ಮ ಹುಟ್ಟಿನೊಂದಿಗೆ ನೀವು ಸಂವಿಧಾನತ್ಮಕವಾದ ಉಳಿದೆಲ್ಲ ಹಕ್ಕುಗಳನ್ನು ಅನುಭವಿಸಿಯೂ ಮತದಾನದ ಹಕ್ಕನ್ನು ನಿರಾಕರಿಸಲು ಆಗದು. ನೀವೂ ಮತದಾನದಿಂದ ದೂರ ಉಳಿದು ಬಂಡಾಯ ಪ್ರದರ್ಶನ ಮಾಡಿದ್ದೇ ಆದಲ್ಲಿ, ನಿಮ್ಮಿಂದ ಕೈ ತಪ್ಪಿದ ಒಂದು ಮತದಿಂದ ಏನೂ ಬದಲಾವಣೆಗೆ ಸಾಧ್ಯವಾಗದು. ಮತಕೇಂದ್ರದಲ್ಲಿ ಒಂದು ಬಿಂದು ಶಾಹಿಯ ಉಳಿತಾಯ ಹೊರತುಪಡಿಸಿ ಯಾವುದೂ ಸಾಧಿಸಲು ಆಗುವುದಿಲ್ಲ. “ನಾನು ಮತದಾನ ಮಾಡುವುದಿಲ್ಲ. ಈ ಮೂಲಕ ಅವರಿಗೆ ನಾನು ಪಾಠ ಕಲಿಸಬೇಕು’ ಎಂಬ ಮಾತಿನಿಂದ ಏನೂ ಸಾಧಿಸಲು ಸಾಧ್ಯವಾಗದು.

Advertisement

ಸ್ಥಳೀಯ ಜನಪ್ರತಿನಿಧಿ ಅಥವಾ ಸರಕಾರದ ವಿರುದ್ಧ ಸಮರ ಸಾರುವ ಉದ್ದೇಶದಿಂದ ವೈಯಕ್ತಿಕವಾಗಿ ಮನನೊಂದು ಮತ ಚಲಾಯಿಸದೇ ದೂರ ಇರಬಹುದು. ಆದರೆ ತನ್ನ ಸ್ನೇಹಿತರ, ಕುಟುಂಬ ಸದಸ್ಯರ ಮತ, ನೆರೆ-ಹೊರೆ ಅವರ ಮತ 
ಹಾಳು ಮಾಡುವ ಹಕ್ಕು ನಿಮಗೆ ಇಲ್ಲ. ನೀವು ಮತಚಲಾಯಿಸದೇ ಇದ್ದದ್ದು ನೀವು ಮಾಡಿದ ಮೊದಲ ತಪ್ಪು. ಇನ್ನು ಇನ್ನೊಬ್ಬರ ಹಕ್ಕನ್ನು ಕಸಿದುಕೊಂಡದ್ದು ಕಾನೂನು ಬಾಹಿರ. ಅಂಥವರ ಮೇಲೆ ಕಾನೂನು ಸಮರ ಕೈಗೊಳ್ಳಲು ಅವಕಾಶ ಇದೆ.

ಮತದಾರರಿಗೋಸ್ಕರ ನೋಟಾ ವ್ಯವಸ್ಥೆೆಯನ್ನು ಜಾರಿಗೆ ತರಲಾಗಿದೆ. ತಮ್ಮ ಕ್ಷೇತ್ರದ ಯಾವುದೇ ಅಭ್ಯರ್ಥಿಗಳ ಮೇಲೆ ಒಲವು ಇಲ್ಲ ಎಂದಾದರೆ ನೋಟಾ ಅವಕಾಶವನ್ನು ಬಳಸ ಬಹುದಾಗಿದೆ. ಇದರಿಂದ ಮತದಾರರ ಪಾಲ್ಗೊಳ್ಳುವಿಕೆಯು ಅಧಿಕವಾಗುವ ಜತೆಗೆ ಶೇಕಡಾವಾರು ಪೋಲಿಂಗ್‌ ಹೆಚ್ಚುತ್ತದೆ. ಈ ಮೂಲಕ ಭ್ರಷ್ಟ ಅಥವ ಅಯೋಗ್ಯರನ್ನು ಆಯ್ಕೆಮಾಡುವ ಸಂಕಷ್ಟವನ್ನು ದೂರ ಮಾಡಬಹುದು. ನೋಟಾ ಮತದಾನದ ಸಂಖ್ಯೆ ಅಧಿಕವಾದರೆ ರಾಜಕಾರಣಿಗಳಿಗೆ ಸ್ಪಷ್ಟ ಸಂದೇಶ ರವಾನೆಯಾಗುತ್ತದೆ.

ಮತದಾನವನ್ನು ಸಂಭ್ರಮಿಸಬೇಕು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಹಬ್ಬದ ರೀತಿಯಲ್ಲಿ ಎಲ್ಲರೂ ಸೇರಿ ನಮ್ಮನ್ನಾಳುವವರನ್ನು ಚುನಾಯಿಸಬೇಕು. ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳೋಣ, ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯೋಣ, ಸಂಭ್ರಮಿಸೋಣ.

ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next