ಬೆಂಗಳೂರು: ಲೋಕಸಭಾ ಅಧಿವೇಶನವು ಜು. 19 ರಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ 21-22 ರಂದು ಕೆಲವು ಶಾಸಕರು ದೆಹಲಿಗೆ ಹೋಗಬೇಕು ಎಂದು ನಿರ್ಧರಿಸಿದ್ದೇವೆ ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾಯಿಸಬೇಕು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಬದಲಾವಣೆ ಮಾಡುವ ಅಧಿಕಾರ ಒಬ್ಬಿಬ್ಬರ ಕೈಯ್ಯಲ್ಲಿಲ್ಲ. ಅಂಥವರು ರಾಜ್ಯದ ಜನರ ಮುಂದೆ ವಿಲನ್ ಆಗುತ್ತಾರೆ ಎಂದು ಎಚ್ಚರಿಸಿದರು.
ಯಡಿಯೂರಪ್ಪ ಸಿಎಂ ಆಗಿ ಎರಡು ವರ್ಷವಾಯಿತು. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಉತ್ತಮ ಕೆಲಸ ಮಾಡ್ತಿದ್ದಾರೆ. ರೇಣುಕಾಚಾರ್ಯನಂತಹ ಒಬ್ಬಿಬ್ಬರಿಂದ ಯಡಿಯೂರಪ್ಪ ಸಿಎಂ ಆಗಿಲ್ಲ, ಎಲ್ಲ ಶಾಸಕರು ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕುಳಿತು ಅಥವಾ ದೆಹಲಿಯಲ್ಲಿ ಲಾಬಿ ಮಾಡಿದರೆ ಅದೆಲ್ಲ ಆಗುವುದಿಲ್ಲ ಎಂದು ವಿರೋಧಿ ಬಣಕ್ಕೆ ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ನಳಿನ್ ಕುಮಾರ್ ಕಟೀಲ್ ನೇರ ಚರ್ಚೆಗೆ ಬರಲಿ: ಡಿ ಕೆ ಶಿವಕುಮಾರ್ ಸವಾಲು
ಕೋವಿಡ್ ನಿಂದ ಜನರನ್ನು ರಕ್ಷಣೆ ಮಾಡುವುದೇ ನಮ್ಮ ಜವಾಬ್ದಾರಿ. ವಿನಾಕಾರಣ ರಾಜಕಾರಣ ಮಾಡಬಾರದೆಂದು ವರಿಷ್ಠರು ಹೇಳಿದ್ದಾರೆ. ಏನೇ ಇದ್ದರೂ ನಾಲ್ಕು ಗೋಡೆಯ ಮಧ್ಯೆ ಮಾತನಾಡಬೇಕು ಎಂದ ಅವರು ಶಾಸಕರ ಸಹಿ ಸಂಗ್ರಹ ಮಾಡುವುದಕ್ಕೆ ಅರುಣ್ ಸಿಂಗ್ ಬರುವಾಗ ನಿರ್ಧರಿಸಿದ್ದು ಸತ್ಯ. ಆದರೆ ಯಡಿಯೂರಪ್ಪ ಹಾಗೂ ಅಧ್ಯಕ್ಷರು ಸಹಿ ಸಂಗ್ರಹ ಬೇಡವೆಂದು ಖಡಾಖಂಡಿತವಾಗಿ ಹೇಳಿದ್ದರು. ಸಹಿ ಮಾಡಿಸಿದ್ದು ಸತ್ಯ, ತೋರಿಸಿದ್ದು ಸತ್ಯ ಆದರೆ ಕೇಂದ್ರದ ವರಿಷ್ಠರಿಗೆ ಅದನ್ನು ನಾನು ಕೊಡುತ್ತೇನೆಂದು ಹೇಳಿಲ್ಲ ಎಂದರು.