Advertisement

ಕೊಡೆ ಕೊಡ್ತೀನಿ ಕುಣಿಬೇಕ್‌ ನೋಡ್‌!

10:46 AM May 23, 2017 | Harsha Rao |

ನನಗೆ ಹೇಗಾದರೂ ಮಳೆಯಿಂದ ನನ್ನ ಲ್ಯಾಪ್‌ಟಾಪ್‌ ರಕ್ಷಿಸಲೇಬೇಕಿತ್ತು. ಹಾಗಾಗಿ ಮಳೆಯಲ್ಲಿ ಒಂದೆರಡು ಸ್ಟೆಪ್ಪು ಹಾಕಿದ್ದೂ ಆಯಿತು, ನನ್ನ ಸ್ನೇಹಿತರ ಮುಂದೆ ನಗೆಪಾಟಲಿಗೆ ಈಡಾಗಿದ್ದೂ ಆಯಿತು. ಸರಿ ಅವಳು ಹೇಳಿದಂತೆ ಡ್ಯಾನ್ಸ್‌ ಮಾಡಿಯಾಯಿತಲ್ಲ, ಇನ್ನಾದರೂ ಕೊಡೆ ಕೊಡಿ ಅಂತ ಕೇಳಿದೆ. ಅಷ್ಟರಲ್ಲಿ ಮಳೆ ನಿಂತುಹೋಗಬೇಕೇ?! 

Advertisement

ಪಂಚನದಿಗಳ ನಾಡು ಬಿಜಾಪುರದಿಂದ ಪಶ್ಚಿಮ ಘಟ್ಟದ ಸೆರಗಿಗೆ ಅಂಟಿಕೊಂಡಿರುವ ಬೆಳಗಾವಿ ನಗರಕ್ಕೆ ಉನ್ನತ ಶಿಕ್ಷಣಕ್ಕಾಗಿ ಬಂದಿದ್ದೆ. ಆಗ, ಮುಂಗಾರು ಮಳೆಯಲ್ಲಿ ಮೀಯುತ್ತಿದ್ದ ನಕ್ಷತ್ರ ಕಣ್ಣಿನ, ಗುಂಗುರು ಕೂದಲ, ದುಂಡು ಮುಖದ ಕನ್ಯೆಯ ಬಗ್ಗೆ ಮನಸಿನಲ್ಲಾದ ತಳಮಳದ ಬಗ್ಗೆ ಹೇಳಲೇಬೇಕಾಗಿದೆ.

ಆ ಹುಡುಗಿಯನ್ನು ನೋಡಿದ ತಕ್ಷಣ, ಇವಳು ಮುದ್ದು ಮನಸಿನ ಗುಲ್‌ಮೊಹರ್‌ ಹುಡುಗಿ ಅನ್ನಿಸಿಬಿಟ್ಟಿತು. ಉತ್ತರ ಕರ್ನಾಟಕದಲ್ಲಿ ಪ್ರೀತಿಯ ಸಂಕೇತವೇ ಎಂದುಕೊಂಡ ಗುಲ್‌ಮೊಹರ್‌ ಹೂ ನೆನಪಾದದ್ದು, ಈ ಕೆಂಪು ಗುಲ್‌ಮೊಹರ್‌ ಹೂವಿನ ಹಾಗಿದ್ದ ಅವಳ ಮುಖವನ್ನು ನೋಡಿದಾಗ. ಅವಳನ್ನು ನೋಡುತ್ತಿದ್ದಂತೆ ಸಮಯ ಹೋಗಿದ್ದೇ ತಿಳಿಯಲಿಲ್ಲ. ಆ ಬೆಡಗಿಯ ವರ್ಣನೆ ಮಾಡಲಿಕ್ಕೆ ಕವಿಯಾಗಬೇಕೆಂದೆನಿಸಿದ್ದು ನಿಜ.

ಪ್ರತಿದಿನದಂತೆ ಧೋ ಎನ್ನುತ್ತಿದ್ದ ಮುಂಗಾರು ಮಳೆ ಒಂದು ಕಡೆ, ಬೆಳಗಾವಿ ನಗರದಿಂದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ದೂರದ ಹಾದಿ ಅನ್ನೋದು ಇನ್ನೊಂದು ಕಡೆ, ಮಳೆಯ ಮಧ್ಯೆ ಸರಕಾರಿ ಬಸ್‌ ಹಿಡಿದು ಹೋಗುವುದೆಂದರೆ ಜಂಗಿ ಕುಸ್ತಿ ಮಾಡಿದಂತೆಯೇ ಸರಿ. ಆವತ್ತು, ಬಸ್‌ನಲ್ಲಿ ಸೀಟ್‌ ಸಿಗದೆ ಮುಂಬದಿ ಡೋರ್‌ನಲ್ಲಿ ನಿಂತಿದ್ದೆ. ಆಗ ಮಳೆ, ಬಸ್‌, ಕಾಲೇಜ್‌ ಎಂಬ ಗೊಂದಲದ ಮಧ್ಯೆ ಕಂಡವಳೇ ಈ ಗುಲ್‌ಮೊಹರ್‌ ಹುಡುಗಿ.

ಮಳೆ ಬರುತ್ತಿತ್ತು. ಆಕೆ‌ ತನ್ನ ಕೈಯನ್ನು ಕಿಟಕಿಯ ಹೊರ ಹಾಕಿ ಚಿಟಪಟ ಮಳೆಯ ಹನಿಗಳೊಂದಿಗೆ ಆಡುತ್ತಿದ್ದಳು. ಅವಳ ಆ ಆಟ ವಿಶ್ವವಿದ್ಯಾಲಯ ತಲುಪುವವರೆಗೂ ನಡೆದಿತ್ತು. ಅಂದು ಕಂಡಕ್ಟರ್‌, ಕಾಲೇಜಿನ ಸಮೀಪವಿರುವ ಹೈವೇ ಸ್ಟಾಪ್‌ನಲ್ಲಿ ಬಸ್‌ ನಿಲ್ಲಿಸಿದರು. ಅಲ್ಲಿಂದ ವಿ.ವಿ. ಅರ್ಧ ಕಿ.ಮೀ. ದೂರ. ತುಂಬಾ ಜನರು ಇಳಿದುಕೊಂಡರು. ಆ ಮಳೆಯಲ್ಲಿಯೇ ಒದ್ದೆಯಾಗಿ ಯೂನಿವರ್ಸಿಟಿಯತ್ತ ದಾಪುಗಾಲಿಡತೊಡಗಿದೆವು. 

Advertisement

ನನ್ನ ಬ್ಯಾಗ್‌ನಲ್ಲಿ ಲ್ಯಾಪ್‌ಟಾಪ್‌ ಇತ್ತು. ಮಳೆಯಲ್ಲಿ ನೆನೆದರೆ ಏನು ಮಾಡುವುದೆಂಬ ಚಿಂತೆಯಲ್ಲಿ ಬ್ಯಾಗನ್ನು ಎದೆಗವುಚಿಕೊಂಡು ನಡೆಯತೊಡಗಿದೆ. ಅಷ್ಟರಲ್ಲೇ ಕಣ್ಣಿಗೆ ಬಿದ್ದಳು ಗುಲ್‌ಮೊಹರ್‌ ಹುಡುಗಿ. ಕೈಯಲ್ಲಿ ಕೊಡೆ ಇದ್ದರೂ ಬಿಡಿಸದೆ ಮಳೆಯಲ್ಲಿ ನೆನೆಯುತ್ತ ಹೋಗುತ್ತಿದ್ದಳಾಕೆ. ಎಂಥ ಹುಚ್ಚು ಹುಡುಗಿಯಪ್ಪಾ ಎನ್ನಿಸಿತು. ನನ್ನಿಂದ ತಡೆಯಲಾಗಲಿಲ್ಲ. ಅವಳನ್ನು ಮಾತನಾಡಿಸಿಯೇಬಿಡೋಣವೆಂದು ಅವಳ ಬಳಿ ತೆರಳಿ ಕೇಳಿದೆ: “ರೀ, ಕೊಡೆಯಿದ್ದರೂ ಮಳೆಯಲ್ಲಿ ಯಾಕೆ ನೆನೆಯುತ್ತಿದ್ದೀರಾ?’. “ಅದೆಲ್ಲಾ ನಿಮಗ್ಯಾಕ್ರೀ? ಮಳೆಯಲ್ಲಿ ನೆನೆಯೋದು ನಂಗಿಷ್ಟ. ಏನಿವಾಗ?’ ಎಂದು ನಡೆದುಹೋಗತೊಡಗಿದಳು.

ನಿಜ ಹೇಳಬೇಕೆಂದರೆ ನನಗೆ ಅವಳಲ್ಲಿ ಮಾತಾಡಬೇಕೆಂದಿರಲಿಲ್ಲ. ನನ್ನ ಲ್ಯಾಪ್‌ಟಾಪ್‌ಅನ್ನು ಮಳೆಯಿಂದ ರಕ್ಷಿಸಲು ಕೊಡೆ ಕೇಳ್ಳೋಣ ಅಂತ ಮಾತನಾಡಿಸಿದ್ದು. ಮುಂದೆ ಹೋಗುತ್ತಿದ್ದ ಅವಳ ಬಳಿಗೆ ಮತ್ತೆ ಓಡಿ “ರೀ, ಬ್ಯಾಗಲ್ಲಿ ಲ್ಯಾಪ್‌ಟಾಪ್‌ ಇದೆ. ಮಳೆಯಲ್ಲಿ ನೆಂದು ಹೋಗ್ತಿದೆ. ಪ್ಲೀಸ್‌, ನಿಮ್ಮ ಕೊಡೆ ಕೊಡು¤ತೀರಾ?’ ಎಂದು ಕೇಳಿದೆ. “ಕೊಡೆ ಕೊಡ್ತೀನ್ರಿ. ಆದ್ರ ನೀವು ಈ ಖಾಲಿ ರೋಡ್‌ನಾÂಗ ಮಳೆಯಲ್ಲಿ ಡ್ಯಾನ್ಸ್‌ ಮಾಡಬೇಕ್‌. ಅವಾಗ್‌ ಕೊಡೆ ಕೊಡ್ತೀನಿ’ ಎಂದಳು. ಆಕೆಯ ಚಾಲೆಂಜ್‌ ಕೇಳಿ ನಾನು ಸುಸ್ತು ಹೊಡೆದಿದ್ದೆ. 

ನನಗೆ ಹೇಗಾದರೂ ಮಳೆಯಿಂದ ನನ್ನ ಲ್ಯಾಪ್‌ಟಾಪ್‌ ರಕ್ಷಿಸಲೇಬೇಕಿತ್ತು. ಹಾಗಾಗಿ ಮಳೆಯಲ್ಲಿ ಒಂದೆರಡು ಸ್ಟೆಪ್ಪು ಹಾಕಿದ್ದೂ ಆಯಿತು, ನನ್ನ ಸ್ನೇಹಿತರ ಮುಂದೆ ನಗೆಪಾಟಲಿಗೆ ಈಡಾಗಿದ್ದೂ ಆಯಿತು. ಸರಿ ಅವಳು ಹೇಳಿದಂತೆ ಡ್ಯಾನ್ಸ್‌ ಮಾಡಿಯಾಯಿತಲ್ಲ, ಇನ್ನಾದರೂ ಕೊಡೆ ಕೊಡಿ ಅಂತ ಕೇಳಿದೆ. ಅಷ್ಟರಲ್ಲಿ ಮಳೆ ನಿಂತುಹೋಗಬೇಕೇ?! ಅವಳು ನನ್ನ ಅವಸ್ಥೆ ಕಂಡು ಮನಸಾರೆ ನಕ್ಕುಬಿಟ್ಟಳು. ನಗುತ್ತಲೇ ಕ್ಲಾಸಿಗೆ ಹೋದಳು. ಆವತ್ತಿನಿಂದ ಆ ಗುಲ್‌ಮೊಹರ್‌ ಗೆಳತಿ ಮತ್ತೆ ಯಾವಾಗ ಸಿಗುತ್ತಾಳ್ಳೋ ಎಂದು ಕಾಯುವುದೇ ನನ್ನ ಹೊಸ ಹವ್ಯಾಸವಾಗಿಬಿಟ್ಟಿದೆ.

– ಆರೀಫ್ ವಾಲೀಕಾರ, ಬೆಳಗಾವಿ

Advertisement

Udayavani is now on Telegram. Click here to join our channel and stay updated with the latest news.

Next