ಮೈಸೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದರು. ಸುತ್ತೂರು ಶ್ರೀಗಳನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿಯವರು, “ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಮಾಡಿದ್ದು ಸತ್ಯ” ಎಂದಿದ್ದಾರೆ.
“ನಾನು ಕೆಲವು ವಿಚಾರಗಳಿಂದ ಮನನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಮಾಡಿದ್ದು ಸತ್ಯ. ಆದರೆ ಕೆಲವು ಹಿರಿಯರ ಸಲಹೆ ಮೇರೆಗೆ ಈಗ ಅದನ್ನು ಕೈಬಿಟ್ಟಿದ್ದೇನೆ. ಇನ್ನು 8 ರಿಂದ 10 ದಿನ ನನಗೆ ಮಾಧ್ಯಮದವರು ಬಿಟ್ಟು ಬಿಡಿ. ನಾನು ಅಲ್ಲಿಯವರೆಗೂ ಏನು ಮಾತನಾಡುವುದಿಲ್ಲ” ಎಂದು ಹೇಳಿದರು.
ಇದನ್ನೂ ಓದಿ:ರಾಜೀನಾಮೆ ವಿಚಾರ ಮುಂಬೈನಲ್ಲಿ ಹೇಳುತ್ತೇನೆ: ಬಂಡಾಯದ ಎಚ್ಚರಿಕೆ ನೀಡಿದ ರಮೇಶ್ ಜಾರಕಿಹೊಳಿ
“ಒಂದು ವೇಳೆ ರಾಜೀನಾಮೆ ಕೊಟ್ಟರೂ ನಾನೊಬ್ಬನೇ ಕೊಡುತ್ತೇನೆ. ಆದರೆ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಮುಳುಗುವ ಹಡಗು, ನಾನೇಕೆ ಆ ಪಕ್ಷಕ್ಕೆ ಹೋಗಲಿ. ಬಿಜೆಪಿ ಪಕ್ಷ ನನ್ನನ್ನು ಬಹಳ ಗೌರವಯುತವಾಗಿ ನಡೆಸಿಕೊಂಡಿದೆ. ನಾನು ಬಿಜೆಪಿಗೆ ದ್ರೋಹ ಮಾಡುವ ಕೆಲಸ ಎಂದಿಗೂ ಮಾಡುವುದಿಲ್ಲ” ಎಂದು ಜಾರಕಿಹೊಳಿ ಹೇಳಿದರು.
ನಾನು ಮುಂಬೈಗೆ ಹೋಗಿದ್ದು ಸತ್ಯ. ದೇವೇಂದ್ರ ಫಡ್ನವೀಸ್ ಅವರು ನನ್ನ ರಾಜಕೀಯ ಗಾಡ್ ಫಾದರ್. ಅವರ ಬಳಿ ನನ್ನ ಮನಸ್ಸಿನ ನೋವುಗಳನ್ನು ಹೇಳಿಕೊಂಡಿದ್ದೇನೆ ಎಂದರು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರೈಸುತ್ತಾರೆ. ಮುಂದಿನ ಚುನಾವಣೆಯು ಅವರ ನೇತೃತ್ವದಲ್ಲಿ ನಡೆಯಲಿದೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನಂತರ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.