Advertisement

ನನಗೂ ಆಮಿಷವೊಡ್ಡಲಾಗಿತ್ತು: ಶ್ರೀನಿವಾಸಗೌಡ

12:20 AM Feb 11, 2019 | Team Udayavani |

ಕೋಲಾರ: ‘ಬಿಜೆಪಿ ಆಪರೇಷನ್‌ ಕಮಲದ ಮೂಲಕ ತಮಗೆ 30 ಕೋಟಿ ರೂ. ಆಮಿಷವೊಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಒತ್ತಾಯಿಸಲಾಗಿತ್ತು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಆರೋಪಿಸಿದರು.

Advertisement

ನಗರದ ತಮ್ಮ ನಿವಾಸದಲ್ಲಿ ಭಾನುವಾರ ದಿಢೀರ್‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರು ತಿಂಗಳ ಹಿಂದೆ ಬಿಜೆಪಿಯ ಡಾ.ಅಶ್ವತ್ಥನಾರಾಯಣ, ಯೋಗೀಶ್ವರ್‌ ಹಾಗೂ ವಿಶ್ವನಾಥ ಅವರು ಬೆಂಗಳೂರಿನ ತಮ್ಮ ನಿವಾಸಕ್ಕೆ ಬಂದು ಆಪರೇಷನ್‌ ಕಮಲದ ರೂಪರೇಷೆಗಳನ್ನು ವಿವರಿಸಿದ್ದರು. ಈ ಸಂದರ್ಭದಲ್ಲಿ ತಮಗೆ 30 ಕೋಟಿ ರೂ. ಆಮಿಷವೊಡ್ಡಲಾಗಿತ್ತು. ಅಂದು ಬಿಜೆಪಿ ಮುಖಂಡರು ಮಾತುಕತೆ ಮುಗಿಸಿ ತೆರಳುವಾಗ 5 ಕೋಟಿ ರೂ. ಇಟ್ಟು ಹೋಗಿದ್ದರು. ಇದನ್ನು ಆನಂತರ ಗಮನಿಸಿ ತಾವು ಮುಖಂಡರಿಗೆ ತಿಳಿಸಿದಾಗ ಅವರು ಅದು ನಿಮಗಾಗಿಯೇ ಇಟ್ಟಿರುವುದು, ಕೆಲಸ ಪೂರ್ಣಗೊಂಡ ನಂತರ ಇನ್ನು 25 ಕೋಟಿ ರೂ. ತಲುಪಿಸುವುದಾಗಿ ಹೇಳಿದರೆಂದು ವಿವರಿಸಿದರು.

ಆಪರೇಷನ್‌ ಕಮಲದಿಂದಾಗಿ ಸಮ್ಮಿಶ್ರ ಸರಕಾರ ಉರುಳಿ ಬೀಳುತ್ತದೆ, ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ. ಆಗ ಮಂತ್ರಿ ಮಾಡಲಾಗುವುದು ಎಂಬ ಮಾತುಕತೆಯೂ ಇದೇ ಸಂದರ್ಭದಲ್ಲಿ ನಡೆದಿತ್ತೆಂದು ಅವರು ಹೇಳಿದರು. ಈ ಕುರಿತು ತಾವು ಆಗಲೇ ಕುಮಾರಸ್ವಾಮಿ ಗಮನಕ್ಕೆ ತಂದಿದ್ದು, ಅವರು ಇಂತದ್ದೆಲ್ಲಾ ಸಾಮಾನ್ಯ. ನೀವು ಹಣವನ್ನು ತಂದವರಿಗೆ ವಾಪಸ್‌ ಮಾಡಿಬಿಡಿ ಎಂದು ಹೇಳಿದ್ದರೆಂದು ತಿಳಿಸಿದರು. ಆನಂತರ ಹಲವಾರು ಬಾರಿ ತಾವು ಬಿಜೆಪಿ ಮುಖಂಡರಿಗೆ ಹಣ ವಾಪಸ್‌ ಪಡೆಯುವಂತೆ ಹೇಳಿದ್ದರೂ ಪಡೆದುಕೊಂಡಿರಲಿಲ್ಲ. 2 ತಿಂಗಳ ನಂತರ ಬಿಜೆಪಿ ಮುಖಂಡ ಆರ್‌.ಅಶೋಕ್‌ರ ಮೂಲಕ ಹಣ ವಾಪಸ್‌ ನೀಡಿದ್ದಾಗಿ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next