Advertisement
ನಾನು ಎಸ್‌ಎಸ್‌ಎಲ್‌ಸಿ ಆದ್ಮೇಲೆ ಕೆಲವು ಕಾಲ ಸ್ಕೂಲ್ ಟೀಚರ್ ಆಗಿದ್ದೆ. ಹೊಳೇನರಸೀಪುರದ ಜೋಡಿ ಗುಬ್ಬಿ ಮಾಧ್ಯಮಿಕ ಶಾಲೆಯಲ್ಲಿ ಮಕ್ಕಳಿಗೆ ಸರಳ ಇಂಗ್ಲೀಷ್ ಹಾಗೂ ಕನ್ನಡ ಪಾಠ ಮಾಡ್ತಿದ್ದೆ. ಆಗ ಮಾಸಿಕ 30ರೂ ಸಿಗುತ್ತಿತ್ತು. ಪ್ರತಿನಿತ್ಯ ಎರಡು ಕಿ.ಮೀ. ನಡೆದು ಶಾಲೆಗೆ ಪಾಠ ಮಾಡಲು ಹೋಗುತ್ತಿದ್ದೆ. ಡಿಪ್ಲೊಮಾ ಮುಗಿಸಿಕೊಂಡು ಬಂದ್ಮೇಲೆ ಒಬ್ಬ ಸಣ್ಣ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದೆ. ಅದೇ ಸಂದರ್ಭದಲ್ಲಿ ನಮ್ಮ ಹಳ್ಳಿಯ ಆಂಜನೇಯ ಕ್ರೆಡಿಟ್ ಕೋ ಆಪರೇಟೀವ್ ಸೊಸೈಟಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ.
Related Articles
Advertisement
ಅಲ್ಟಿಮೇಟ್ ಅರಸುಕರ್ನಾಟಕದ ರಾಜಕಾರಣದಲ್ಲಿ ಮರೆಯಲಾಗದ ವ್ಯಕಿತ್ವ ಎಂದರೆ ಅದು ದೇವರಾಜ ಅರಸು. ನಿಜ ಹೇಳಬೇಕಾದರೆ ನಿಜಲಿಂಗಪ್ಪ, ಬಿ.ಡಿ.ಜತ್ತಿ, ವೀರೇಂದ್ರ ಪಾಟೀಲ್ ಪ್ರಾಮಾಣಿಕರು. ದೇವರಾಜ ಅರಸು ಅವರಂತೂ ಅಲ್ಟಿಮೇಟ್. ನನಗೂ ಅರಸು ಅವರಿಗೂ ಆತ್ಮೀಯತೆ ಇದ್ದರೂ ದೇವರಾಜ ಅರಸು ಮುಖ್ಯಮಂತ್ರಿ ಆದಾಗ ನಾನು ಪ್ರತಿಪಕ್ಷ ನಾಯಕ. ಭೂ ಸುಧಾರಣೆಯಲ್ಲಿ ಅವರದು ಬಹುದೊಡ್ಡ ಕ್ರಾಂತಿಕಾರಕ ನಿಲುವಾಗಿತ್ತು. ಅದೊಂದು ಪ್ರಮುಖ ನಿರ್ಧಾರ ಎಂದು ನನಗನ್ನಿಸುತ್ತದೆ. ವಿಧವೆಯರಿಗೂ ವಿನಾಯಿತಿ ಕೊಡಲಿಲ್ಲ. ನಾನು ಬಹಳ ಹೇಳಿದೆ, ವಿಧವೆಯರನ್ನು ಬಿಟ್ಟುಬಿಡಿ. ಆ ವಿಚಾರದಲ್ಲಿ ಬ್ರಾಹ್ಮಣರು, ಲಿಂಗಾಯಿತರು, ಒಕ್ಕಲಿಗರು ಅಂತ ತೆಗೆದುಕೊಳ್ಳಬೇಡಿ, ಮಾನವೀಯತೆಯಿಂದ ನೋಡಿ ಎಂದು. ಏಕೆಂದರೆ, ಮೈಸೂರು ಅಗ್ರಹಾರದಲ್ಲಿರುವ ಹಾಗೂ ಮಂಡ್ಯ ಶ್ರೀರಂಗಪಟ್ಟಣದ ಬ್ರಾಹ್ಮಣರಿಗೆ ಜಮೀನು ಕೊಡಲಾಗಿತ್ತು. ಅವರೆಲ್ಲಾ ಬೇರೆಯವರಿಗೆ ಉಳುಮೆ ಮಾಡಲು ಕೊಟ್ಟಿದ್ದರು. ಉಳುವವನೆ ಭೂ ಒಡೆಯ ನಿರ್ಧಾರದಿಂದ ಬಡವರು ಕಣ್ಣಲ್ಲಿ ನೀರು ಹಾಕಿದರು. ನಮ್ಮದೇ ಹಳ್ಳಿಯ ಉದಾಹರಣೆ ಬಂದರೆ, ನಮ್ಮ ಹಳ್ಳಿಯಲ್ಲಿ ನಾನು ಟ್ರಿಬ್ಯುನಲ್ ಮೆಂಬರ್, ಉಳಿದವರು ನಾಲ್ವರು ಕಾಂಗ್ರೆಸ್‌ನವರು. ಈಡಿಗರ ಪೈಕಿ ಒಬ್ಬ ಹೆಣ್ಣು ಮಗಳಿದ್ದಳು. ಆಕೆಗೆ ಪತಿ ಇರಲಿಲ್ಲ, ಎರಡು ಗಂಡು ಮಕ್ಕಳು. ಇದ್ದ ಆ 4 ಎಕರೆ ಗದ್ದೆ ಯನ್ನೂ ವೆಂಕಟೇಗೌಡ ಉಳುತ್ತಿದ್ದರು. ಆತನಿಗೂ ಪಕ್ಕದಲ್ಲೇ ನಾಲ್ಕು ಎಕರೆ ಭೂಮಿ ಇತ್ತು. 8 ಎಕರೆ ಮಾಡಿಕೊಂಡಿದ್ದ. ಆತ ಆಕೆಗೆ 65 ಪಲ್ಲ ಭತ್ತ ಕೊಡಬೇಕಿತ್ತು. ಆಯಮ್ಮ “ವಿಷ ಕೊಡ್ತೀರೋ, ಅಮೃತ ಕೊಡ್ತಿರೋ ಕೊಟ್‌ಬಿಡಿ’ ಅಂತ ಸೀರೆಯ ಸೆರಗು ಹಿಡಿದಿದ್ದರು. ಆಗ ನಾನು, “ವೆಂಕಟಪ್ಪ ಕೊಟ್‌ಬಿಡು 65 ಪಲ್ಲ ಭತ್ತ’ ಎಂದು ಹೇಳಿದೆ. ಅದಕ್ಕೆ ವೆಂಕಟಪ್ಪ ಗೌಡ, “ಓಹೋ…ನಾವೆಲ್ಲ ಶ್ರಮಪಟ್ಟು ಗೆಲ್ಲಿಸಿದ್ದಕ್ಕೆ ಉಪದೇಶ ಮಾಡೋಕೆ ಬಂದ್ ಬಿಟ್ರಾ?’ ಅಂದುಬಿಟ್ಟ. ಅದೇ ಕೊನೆ, ಅರಸು ಅವರ ಬಳಿ ಆ ಘಟನೆಯನ್ನೇ ಪ್ರಸ್ತಾಪಿಸಿ ಹೇಳಿದೆ “ನಾನು ಇನ್ಮೆàಲೆ ಟ್ರಿಬ್ಯುನಲ್ ಮೀಟಿಂಗ್‌ಗೆ ಅಟೆಂಡ್ ಮಾಡಲ್ಲ’ ಅಂತ. ಆಮೇಲೆ ಹೋಗಲೇ ಇಲ್ಲ. ಅರಸು ಅವರ ನಿರ್ಧಾರ ಗಟ್ಟಿ ಇತ್ತು. ಆದರೆ, ಆ ನಿರ್ಧಾರದಿಂದ ಜಮೀನು ಕಳೆದುಕೊಂಡವರು ಮಕ್ಕಳ ಮದುವೆ ಮಾಡೋಕೆ ಆಗಲಿಲ್ಲ. ಹೀಗಾಗಿ, ಸಾಕಷ್ಟು ಕುಟುಂಬಗಳು ನೋವುಂಡಿದ್ದವು. ಅದು ಸಹ ಒಂದೆಡೆ ಅರಸು ಅವರಿಗೆ ರಾಜಕೀಯವಾಗಿ ತೊಂದರೆಯಾಯಿತು. ಕಲಾಪದ ಗುಣಮಟ್ಟ ಕುಸಿತ
ಏನೇ ಆದರೂ ದೇವರಾಜ ಅರಸು ಅಲ್ಟಿಮೇಟ್ ಮ್ಯಾನ್. ಅವರ ಅವಧಿಗೆ ಮುಗಿಯಿತು. ದಟ್ಸ್ ಲಾಸ್ಟ್ ಎರಾ. ಅವರು ಮುಖ್ಯಮಂತ್ರಿ ಆಗಿದ್ದಾಗ ವಿಧಾನಸಭೆ ತಂಬಿರೋದು. ಯಾರು ಏನೇ ಕೇಳಿದರೂ ಅರಸು ಕನ್ವಿನ್ಸಿಸಿಂಗ್ ಉತ್ತರ ಕೊಡದೆ ಮುಂದೆ ಹೋಗುತ್ತಿರಲಿಲ್ಲ. ನಾವೆಲ್ಲಾ ಅಧ್ಯಯನ ಮಾಡೇ ಕಲಾಪಕ್ಕೆ ಹೋಗುತ್ತಿದ್ದೆವು. ಅದು ಚರ್ಚೆಯ ಗುಣಮಟ್ಟ ಅಂದ್ರೆ! ಈಗೆಲ್ಲಿ ಆ ಕಾಲ? ವಿಧಾನಸಭೆ ಕಲಾಪ ನೋಡಿದರೆ ಕಣ್ಣಲ್ಲಿ ನೀರು ಬರುತ್ತೆ. ಸಂಸತ್‌ನಲ್ಲೂ ಗುಣಮಟ್ಟ ಬಿದ್ದು ಹೋಗಿದೆ. ಮೊದಲು ವಿಧಾನಸಭೆ ಕಲಾಪ ಅಂದ್ರೆ ಭಯ ಭಕ್ತಿ ಇರೋದು. ಹೌಸ್‌ಫುಲ್ ಇರಿ¤ತ್ತು. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದಾಗ ವೀರೇಂದ್ರ ಪಾಟೀಲ್ ನೀರಾವರಿ ಸಚಿವರು. ಕಾವೇರಿ ಬಗ್ಗೆ ನಾನು ಅಂಕಿ-ಸಂಖ್ಯೆ ನೀಡಿ ಮಾತನಾಡುತ್ತಿದ್ದೆ. ಅದಕ್ಕೂ ಮುಂಚೆ ಸಾಕಷ್ಟು ಅಧ್ಯಯನ ಮಾಡುತ್ತಿದ್ದೆ. ನನಗೆ ಬಾಳೆಕುಂದ್ರಿ, ಅಮೀನ್ ಬಾವಿ ಗೈಡ್ ಮಾಡೋರು. ತಿಳಿದುಕೊಳ್ಳಬೇಕು ಎಂಬ ಆಸಕ್ತಿಯಿಂದ ವಿದ್ಯಾರ್ಥಿ ರೀತಿ ಪ್ರತಿದಿನ ವ್ಯಾಸಂಗ ಮಾಡುತ್ತಿದ್ದೆ. ಪಾಯಖಾನೆಗೆ ಸಹ ಹೋಗುತ್ತಿರಲಿಲ್ಲ. ಬೆಳೆಗ್ಗೆ 11 ಗಂಟೆಗೆ ವಿಧಾನಸಭೆ ಕಲಾಪಕ್ಕೆ ಹೋದರೆ ಆಚೆ ಬರುತ್ತಿರಲಿಲ್ಲ. ಕಲಿಯಬೇಕು, ಯಾರ್ಯಾರು ಏನು ಭಾಷಣ ಮಾಡ್ತಾರೆ, ಶಬ್ದ ಬಳಕೆ ಮಾಡ್ತಾರೆ ಎಂಬ ಬಗ್ಗೆ ಕುತೂಹಲ ಇತ್ತು. ಪ್ರತಿ ಹಂತದಲ್ಲಿ ನಾನು ವಿದ್ಯಾರ್ಥಿ, ಹೋಂ ವರ್ಕ್ ಮಾಡಿ ಹೋಗ್ತಿದ್ದೆ. ಈಗ ಆ ಕಾಲ ಹೋಗಿದೆ. ಮೂಲ ಕಾಂಗ್ರೆಸ್ಸಿಗ
ನಾನೂ ಮೂಲ ಕಾಂಗ್ರೆಸ್ಸಿಗ. ನನ್ನ ರಾಜಕಾರಣ ಪ್ರಾರಂಭವಾಗಿದ್ದು ಕಾಂಗ್ರೆಸ್‌ನಿಂದಲೇ. ಆದರೆ, 1962ರಲ್ಲಿ ಟಿಕೆಟ್ ಸಿಗದಿದ್ದಾಗ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದೆ. ಬೇರೆ ಪಕ್ಷಕ್ಕೆ ಹೋಗಿರಲಿಲ್ಲ. 1962ರಲ್ಲಿ ಕಾಂಗ್ರೆಸ್‌ನಿಂದ ನನ್ನ ಆರು ವರ್ಷ ಉಚ್ಚಾಟನೆ ಮಾಡಲಾಗಿತ್ತು. 1968ರಲ್ಲಿ ನಾನು ಕಾಂಗ್ರೆಸ್‌ಗೆ ಮರಳಿದೆ. ಆದರೆ, 1969ರಲ್ಲಿ ಕಾಂಗ್ರೆಸ್ ಒಡೆಯಿತು. ನಾವು ಮೂಲ ಕಾಂಗ್ರೆಸ್‌ನಲ್ಲೇ ಉಳಿದೆವು. ನಂತರ ಜನತಾಪಕ್ಷ ಸ್ಥಾಪನೆಯಾಗಿದ್ದು ಇತಿಹಾಸ. 1977ರಲ್ಲಿ ನನಗಾದ ನೋವು ಹೇಳತೀರದು. ವಿಧಾನಸಭೆ ಚುನಾವಣೆಗೆ ಸಂಸದೀಯ ಮಂಡಳಿ ಸಿದ್ಧಪಡಿಸಿದ್ದ ಪಟ್ಟಿಯನ್ನು ರಾಮಕೃಷ್ಣ ಹೆಗಡೆ ರಾತ್ರೋರಾತ್ರಿ ಬದಲಾಯಿಸಿದ್ದು ನನ್ನ ತಲೆ ಮೇಲೆ ಬಂದಿತ್ತು. ಬೀದಿಯಲ್ಲಿ ತಿರುಗೋ ಯೋಗ್ಯತೆ ಇಲ್ಲದಂತೆ ಆಗಿತ್ತು. “ಕಳ್ಳ, ಟಿಕೆಟ್ ಮಾರಿಕೊಂಡ’ ಅಂತೆಲ್ಲಾ ಹೇಳಿದ್ರು. ಆಗ ರಾಣೋಜಿರಾವ್ ಸ್ಟ್ರೀಟ್‌ನಲ್ಲಿ ಬಾಡಿಗೆ ಮನೆಯಲ್ಲಿದ್ದೆ. ತಲೆ ಎತ್ತಿಕೊಂಡು ತಿರುಗೋಹಾಗಿರಲಿಲ್ಲ. ನನ್ನ ಜತೆಯಲ್ಲಿದ್ದವರೇ ಕೈಕೊಟ್ರಾ, ನಾನು ಸಹಾಯ ಮಾಡಿದವರೂ ಕೈ ಕೊಟ್ರಾ. ಆ ನಂತರವೂ ಎದೆಗುಂದದೆ ಪಕ್ಷ ಕಟ್ಟಿದೆ. ಅದಾದ ನಂತರವೂ ಒಬ್ಬೊಬ್ಬರೇ ಮತ್ತೆ ಮತ್ತೆ ಕೈ ಕೊಟ್ಟರು. ಯಾರೇನೂ ಕಡಿಮೆ ಇಲ್ಲ ಆ ವಿಚಾರದಲ್ಲಿ. ಅವೆಲ್ಲಾ ನನ್ನ ಗ್ರಹ ದೋಷ ಅಂದುಕೊಳ್ಳುತ್ತೇನೆ. ರಾಜಕಾರಣದಲ್ಲಿ ಮುಂದೆಯೂ ಎಲ್ಲವನ್ನೂ ಮೀರಿ ಬೆಳೆಯುವುದು ಕಷ್ಟ; ನನ್ನ ಸ್ವಂತ ಮಕ್ಕಳು ಸೇರಿ ಐ ಕೆನಾಟ್ ಎಕ್ಸ್‌ಪೆಕ್ಟ್. ನನ್ನ ಆತ್ಮಕಥೆಯಲ್ಲಿ ಎಲ್ಲ ಬರೆಯುತ್ತೇನೆ. ಓದಿದವರು ಅನುಸರಿಸಿದರೆ ಸಂತೋಷ. ಆದರೆ, ಒಂದಂತೂ ಸತ್ಯ, ಯಾವ ರಾಜಕಾರಣಿಗೂ ನಾನು ನಡೆದುಕೊಂಡು ಬಂದಂತೆ ಕಲ್ಲು-ಮುಳ್ಳು ತುಳಿದುಕೊಂಡು ಮುನ್ನುಗ್ಗಲು ಸಾಧ್ಯವಿಲ್ಲ. ದೈವದಲ್ಲಿ ನಂಬಿಕೆ
ನನಗೆ ದೈವದಲ್ಲಿ ನಂಬಿಕೆ ಇದೆ. ದೈವದ ಇಚ್ಛೆ ಇಲ್ಲದೆ ಏನೂ ನಡೆಯಲ್ಲ. ಯಾರು ಏನು ಬೇಕಾದರೂ ಹೇಳಿಕೊಳ್ಳಲಿ. ನನ್ನ ತಂದೆ-ತಾಯಿ ಪರಮ ಶಿವಭಕ್ತರು. ತಂದೆ-ತಾಯಿ ವಿದ್ಯಾವಂತರಲ್ಲ. ಬಹುಶಃ ಅವರು ಮಾಡಿದ ಪ್ರಾರ್ಥನೆ ನನ್ನ ಈ ಶ್ರೇಯಸ್ಸಿಗೆ ಕಾರಣ. ನಾನೂ ದೇವರನ್ನು ನಂಬುತ್ತೇನೆ. ನಾನು ಅಧಿಕಾರದಲ್ಲಿದ್ದಾಗ ಬೆಳಗ್ಗೆ ಎದ್ದು ಸ್ನಾನ-ಪೂಜೆ ನಂತರವೇ ಎಲ್ಲ ಕೆಲಸ. ಸ್ನಾನ ಮಾಡದೆ ಯಾವುದೇ ಫೈಲ್‌ಗೂ ರುಜು ಮಾಡುತ್ತಿರಲಿಲ್ಲ. ನೆವರ್ ಇನ್ ಮೈ ಲೈಫ್. ಗೃಹ ಕಚೇರಿಯ ಕುರ್ಚಿಯಲ್ಲೂ ಕೂರುತ್ತಿರಲಿಲ್ಲ. ಬೆಳಗ್ಗೆ 5.30ಕ್ಕೆ ಕೆಲಸ ಪ್ರಾರಂಭಿಸುತ್ತಿದ್ದೆ. ನನಗೆ ಜ್ಯೋತಿಷ್ಯದಲ್ಲಿಯೂ ನಂಬಿಕೆಯಿದೆ. ನನ್ನ ತಂದೆಯ ಮೊದಲ ಹೆಂಡ್ತಿಗೆ ಮೂರು ಜನ ಗಂಡು ಮಕ್ಕಳು. ಕಾಲರಾ ಬಂದು ಹೆಂಡ್ತಿ ಸಮೇತ ನಾಲ್ವರು ಮೃತಪಟ್ಟರು. ನಮ್ಮ ತಂದೆ ಎರಡನೇ ವಿವಾಹವಾಗಿ ನಾನು ಹುಟ್ಟಿದಾಗ ಮತ್ತೆ ಏನಾಗುತ್ತೋ ಎಂಬ ಆತಂಕದಿಂದ ಅಪ್ಪ ನಮ್ಮ ಗ್ರಾಮದ ಆಂಜನೇಯನಗುಡಿ ಕುಳ್ಳಯ್ಯಂಗಾರ್ ಅವರ ಬಳಿ ಕೇಳಿದಾಗ ಅವರು ತಮ್ಮ ಬೀಗರಾದ ಕೆ.ಆರ್. ಪೇಟೆ ಬಂಡಿಹೊಳೆ ರಾಮಾಂಜನಯ್ಯಂಗಾರ್ ಅವರ ಬಳ ಕಳುಹಿಸಿದರು. ರಂಗನಾಥನ ಆರಾಧಕರು ಹಾಗೂ ಸಾತ್ವಿಕರಾದ ರಾಮಾಂಜನಯ್ಯಂಗಾರ್ ನನ್ನ ಜಾತಕ ಬರೆದುಕೊಟ್ಟಿದ್ದರು. ನಮ್ಮ ಮನೆಗೆ ಒಂದೆರಡು ಬಾರಿ ಅವರು ಬಂದಿದ್ದರು. ಬಹುಶಃ 1970 ರಲ್ಲಿ ಅವರು ತೀರಿಹೋದರು. ಅವರು ಬರೆದುಕೊಟ್ಟ ಜಾತಕದ ಪ್ರಕಾರ 2006ಕ್ಕೆ ನನ್ನ ಲೈಫ್ ಎಂಡ್ ಅಂತ ಕ್ಲೋಸ್ ಮಾಡಿದ್ದರು. 2006 ಜ.18 ಕುಮಾರಸ್ವಾಮಿ ಬಿಜೆಪಿ ಜತೆ ಹೋದರಲ್ಲ, ಅದೇ ದಿನ ನಾನು ತಲೆ ತಿರುಗಿ ಬಿದ್ದೆ. ಬೆಳಗ್ಗೆ 6.30ಕ್ಕೆ ಕುಮಾರಸ್ವಾಮಿ ಗೋವಾ ಕಡೆ ಹೊರಟಾಗ ನಾನು ಮನೆಯಲ್ಲಿ ಕುಸಿದು ಬಿದ್ದಿದ್ದು. ಮಾರನೆಯ ದಿನ ಜ.19. ಪ್ರಜ್ಞೆ ಬಂತು. ಬಿಜೆಪಿ ಜತೆ ಸರ್ಕಾರ ರಚನೆ ಮಾಡಿದ್ದು ನನ್ನ ರಾಜಕೀಯ ಜೀವನದಲ್ಲಿ ದೊಡ್ಡ ನೋವಿನ ಘಟನೆಯೂ ಹೌದು. ಮಗನನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿಗೆ ಕಳುಹಿಸಿದರು ಎಂದೆಲ್ಲಾ ಮಾತಾಡ್ತಾರೆ, ದೇವರಿಗೆ ಗೊತ್ತಿದೆ ಸತ್ಯ ಏನೆಂದು. ಅಪ್ಪನ ಬ್ರೈನ್ ಡೆಡ್
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನನ್ನನ್ನು ಜೈಲಿಗೆ ಹಾಕಿದಾಗ “ದೊಡ್ಡೇಗೌಡ ನಿನ್ ಮಗನ್ನ ಜೈಲ್‌ನಿಂದ ಇಂದಿರಾಗಾಂಧಿ ಬಿಡಲ್ಲ’ ಅಂತ ಊರಿನ ಜನ ಹೇಳಿದ್ದರಿಂದ ಆತಂಕಗೊಂಡ ನಮ್ಮ ತಂದೆ “ಹೌದಾ…’ ಎಂದು ಹೌಹಾರಿದರು. ಅದೇ ಶಾಕ್‌ನಲ್ಲಿ ಬ್ರೈನ್ ಡೆಡ್ ಆಯ್ತು. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಿಸಲಿಲ್ಲ, ಅಂತಿಮವಾಗಿ ನನ್ನ ತೊಡೆ ಮೇಲೆ ಪ್ರಾಣಬಿಟ್ಟರು. ಅಮ್ಮ ಇದ್ದರು, ಆಮ್ಮ ಹೋಗಿದ್ದು ನಾನು ಪ್ರಧಾನಿಯಾದ ಮೇಲೆ. ನಾನು ರಾಜಕಾರಣದಲ್ಲಿ ನೆಮ್ಮದಿಯಾಗಿದ್ದ ದಿನಗಳು ಇಲ್ಲವೇ ಇಲ್ಲ. ಏಕೆಂದರೆ ಕಷ್ಟದ ಮೇಲೆ ಕಷ್ಟ ಅನುಭವಿಸಿದ್ದೇನೆ. ಹೆಗಡೆ ಜತೆ ಇತ್ತು ಆತ್ಮೀಯತೆ
ನನ್ನ ಹಾಗೂ ರಾಮಕೃಷ್ಣ ಹೆಗಡೆ ಅವರ ವಿಚಾರದಲ್ಲಿ ನಾನಾ ಊಹಾ ಪೋಹಗಳಿವೆ. ನನಗೂ ಹೆಗಡೆ ಅವರಿಗೂ ಮೊದಲಿನಿಂದ ಉತ್ತಮ ಸಂಬಂಧವೇನೂ ಇರಲಿಲ್ಲ. ಹಾಗೆ ನೋಡಿದರೆ ವೀರೇಂದ್ರ ಪಾಟೀಲ್ ಹಾಗೂ ನನಗೆ ಆತ್ಮೀಯತೆ ಇತ್ತು. ವೀರೇಂದ್ರ ಪಾಟೀಲ್- ರಾಮಕೃಷ್ಣ ಹೆಗಡೆ ಲವ-ಕುಶರಂತೆ ಇದ್ದರು. 1971ರ ಸಂಸತ್ ಚುನಾವಣೆಯಲ್ಲಿ ಜನತಾಪಕ್ಷ 27ಕ್ಕೆ 27 ಕಡೆ ಸೋತಿತು. ಒಂದೂ ಸೀಟು ಗೆಲ್ಲಲಿಲ್ಲ. ನಾವು 24 ಜನ ಎಂಎಲ್‌ಎಗಳಿದ್ದೆವು. ವೀರೇಂದ್ರ ಪಾಟೀಲರನ್ನು ರಾಜ್ಯಸಭೆಗೆ, ಹೆಗಡೆರನ್ನು ಎಂಎಲ್‌ಸಿ ಮಾಡಿದೆವು. ನಾನು ವಿಧಾನಸಭೆ ಪ್ರತಿಪಕ್ಷ ನಾಯಕನಾಗಿದ್ದೆ, ಹೆಗಡೆ ಅವರು ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿದ್ದರು. ಅಲ್ಲಿಂದ ನನಗೂ ಹೆಗಡೆಯವರಿಗೂ ಬಾಂಧವ್ಯ ಬೆಳೆಯಿತು. ಆಗಾಗ ಅವರ ಮನೆಗೆ ಊಟಕ್ಕೆ ಹೋಗುತ್ತಿದ್ದೆ. ನಿರೂಪಣೆ: ಎಸ್.ಲಕ್ಷ್ಮಿನಾರಾಯಣ