Advertisement

Transgender: ನನಗೆ ಅವಳಾಗಿ ಬದುಕುವಾಸೆ: ನಮ್ಮನ್ನೂ ಮನುಷ್ಯರಂತೆ ನೋಡಿ !

08:59 PM Aug 20, 2023 | Team Udayavani |

“ಹೆತ್ತವರಿಂದ ತ್ಯಜಿಸಲ್ಪಟ್ಟು, ಸಮಾಜದಿಂದ ತಿರಸ್ಕರಿಸಲ್ಪಟ್ಟು “ನಾವು ಮಾಡಿದ ತಪ್ಪಾದರೂ ಏನು? ಎಂಬ ಪ್ರಶ್ನೆಗೆ ಉತ್ತರ ಯಾರಿಗೆ ಕೇಳಬೇಕು ಎಂಬ ದ್ವಂದ್ವದಲ್ಲೇ ಸಮಾಜದ ಮುಂದೆ ಬಂದು ನಿಲ್ಲುವ “ಮಂಗಳಮುಖಿಯರದ್ದು ಬಹು ಆಯಾಮ ಕಷ್ಟದ ಬದುಕು. ಕನಿಷ್ಠ ಅದೊಂದು ಮನುಷ್ಯ ಜೀವ ಅನ್ನೋದನ್ನು ಕಾಣದಷ್ಟು ಕಠೊರ ವ್ಯವಸ್ಥೆಗೆ ಬಹುಕಾಲದ ಕರಾಳ ಇತಿಹಾಸವಿದೆ. ಆದರೆ, ಕೆಲ ದಶಕಗಳಿಂದ ಪರಿಸ್ಥಿತಿ ಒಂದಿಷ್ಟು ಸುಧಾರಿಸಿದೆ. ಸರ್ಕಾರ ಮತ್ತು ಸಮಾಜ ಈ ವರ್ಗವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಸ್ವತಃ ಮಂಗಳಮುಖಿಯರ ನಡವಳಿಕೆಯಲ್ಲಿ ಗಣನೀಯ ಸುಧಾರಣೆ ಬಂದಿದೆ. ಆದಾಗ್ಯೂ ಕಷ್ಟಗಳು, ಅವಮಾನಗಳು ನಿಂತಿಲ್ಲ. ಮಂಗಳಮುಖಿಯರ ಬದುಕು-ಬವಣೆ ಮತ್ತು ಬೇಡಿಕೆಗಳ ಬಗ್ಗೆ “ಸುದ್ದಿ ಸುತ್ತಾಟ’ದಲ್ಲಿ ಒಂದು ಕಿರುನೋಟ.

Advertisement

ವಿದ್ಯಾ, ಕಾಜೋಲ್‌, ಅಪ್ಸರ, ನಯನ, ಸ್ವಾತಿ, ಪ್ರೀತಿ…….ಹೀಗೆ ಎಷ್ಟೊಂದು ಸುಂದರ ಹೆಸರುಗಳ ಗಂಡು ದೇಹದಲ್ಲಿ ಬಂದಿಯಾಗಿರುವ ಹೆಣ್ಣು ಮನಸ್ಸಿನ ಮಂಗಳಮುಖಿಯರದ್ದು. ಹೆಣ್ಣು ಮಕ್ಕಳ ಸೌಂದರ್ಯಕ್ಕೆ ಸ್ಪರ್ಧೆ ನೀಡುವಷ್ಟು ಕಣ್ಣುಕ್ಕುವ ಚೆಲುವು. ಸಮಾಜದ ಕಣ್ಣಿಗೆ ಅವರು ಯಾರು? ಅವರ ನೋವು ಸಂಕಟಗಳೇನು? ಅವರ ತೊಂದರೆಗಳೇನು? ಎಂದು ಊಹಿಸಲು ಸಾಧ್ಯವಿಲ್ಲ.

ಮಂಗಳ ಮುಖಿಯರು ಮನುಷ್ಯರು, ಅವರಿಗೂ ಮನಸ್ಸಿದೆ, ಭಾವನೆಗಳಿವೆ, ಕಷ್ಟದಲ್ಲಿರುವರನ್ನು ನೋಡಿದರೆ ಮರುಗುವ ಗುಣವಿದೆ, ನೊಂದವರಿಗೆ ನೆರವು ನೀಡುವ ಮನಸ್ಸಿದೆ, ಬುದ್ಧಿವಂತಿಕೆ ಇದೆ. ವಿದ್ಯೆ ಪ್ರತಿಭೆಗಳಿವೆ, ಆದರೂ ಅವರನ್ನು ಮನುಷ್ಯರಂತೆ ಕಾಣಲು ಜನರು ಹಿಂಜರಿಯುತ್ತಾರೆ, ಏಕೆ? ಅವರಿಗೂ ಜೀವನದಲ್ಲಿ ಸಹಜವಾಗಿ ಸಹ-ಬಾಳ್ವೆ ನಡೆಸಲು ನಾಗರಿಕ ಸಮಾಜ ಒಪ್ಪುತ್ತಿಲ್ಲ ಏಕೆ? ಅವರ ಮೇಲಿನ ತಪ್ಪು ತಿಳಿವಳಿಕೆಯೇ ಅಥವಾ ಅವರ ಬಗೆಗಿನ ಅವ್ಯಕ್ತ ಭಯವೇ? ಎನ್ನುವ ಮಂಗಳ ಮುಖಿಯರ ಕೂಗು ಅನೇಕ ವರ್ಷಗಳಿಂದ ಕಿವಿಗಳಿಗೆ ಕೇಳುತ್ತಿದ್ದರೂ, ಪ್ರಜ್ಞಾವಂತ ಸಮಾಜ ಮಾತ್ರ ಕಿವುಡಾಗಿದೆ.

ಮಂಗಳಮುಖಿಯರು ತಮ್ಮ ಎದೆಯೊಳಗೆ ಬಚ್ಚಿಟ್ಟುಕೊಂಡಿರುವ ನೋವುಗಳ ಗುರುತು ಹೊರ ಜಗತ್ತಿಗೆ ಗೊತ್ತಾಗುವುದೇ ಇಲ್ಲ. ಎಲ್ಲರಿಗೂ ಕಾಣಿಸುವುದು ಅವರು ಧರಿಸುವ ಸೀರೆ, ರವಿಕೆ, ತುಟಿಗೆ ತಿದ್ದಿಕೊಳ್ಳುವ ಲಿಪ್‌ಸ್ಟಿಕ್‌ ಮಾತ್ರ. ಮಂಗಳಮುಖಿ ಎಂದರೆ ಅಲ್ಲೊಂದು ಚಪ್ಪಾಳೆ ಮತ್ತು ಗಡಸು ಧ್ವನಿ . ಆದರೆ ಅವರ ಮನದಾಳದ ನೋವು ಮಾತ್ರ ಯಾರಿಗೂ ಅರ್ಥವಾಗದು. ನಾವು ಕೂಡ ಇದರ ಬಗ್ಗೆ ಯೋಜನೆ ಮಾಡಬೇಕು ಅಲ್ಲವೇ ಅವರು ಕೂಡ ನಮ್ಮಂತೆ ಮನುಷ್ಯರೇ ಅವರಿಗೂ ಅಸೆ ಅಕಾಂಕ್ಷೆ ಇರುತ್ತದೆ ನಾವು ಅವರನ್ನು ಬೇರೆ ರೀತಿಯಿಂದ ಕಂಡಾಗ ಅವರಿಗೂ ನೋವುವಾಗುತ್ತದೆ.

ಬೆಂಗಳೂರು ನಗರದಲ್ಲಿ ಸುಮಾರು 60,000 ಮಂದಿ ಮಂಗಳ ಮುಖಿಯರಿದ್ದಾರೆ. ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ವೋಟರ್‌ ಐಡಿಗೆ ನೋಂದಾಯಿಸಿಕೊಂಡವರು ಅಧಿಕೃತವಾಗಿ 41,300 ಮಂದಿ ಇದ್ದಾರೆ. ಬೇರೆ ರಾಜ್ಯದಿಂದ ಬಂದವರು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇವರಲ್ಲಿ ಕೆಲವರು ಟ್ರಾಫಿಕ್‌ ಸಿಗ್ನಲ್‌, ಟೋಲ್‌, ಬಸ್‌, ಅಂಗಡಿ, ಮದುವೆ – ನಾಮಕರಣ ಸಮಾರಂಭಗಳಿಗೆ ಬಂದು ಹಣ ಕೇಳುತ್ತಾ ಜೀವನ ಸಾಗಿಸುತ್ತಾರೆ. ಇನ್ನೂ ಕೆಲವರು ಉತ್ತಮ ಶಿಕ್ಷಣವನ್ನು ಪಡೆದು ಎನ್‌ಜಿಒ, ಐಟಿ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ.

Advertisement

ದಾಖಲೆ ಎಲ್ಲಿಂದ ತರಲಿ!
ಮಂಗಳಮುಖೀಯರಿಗೂ ಕೆಲಸ ಮಾಡಬೇಕು ಎನ್ನುವ ಆಸೆ ಇದೆ. ಯಾರು ಕೆಲಸ ಕೊಡುತ್ತಾರೆ ಹೇಳಿ. ಕೆಲಸಕ್ಕೆ ಆಧಾರ್‌ ಕಾರ್ಡ್‌ ಅಥವಾ ಗುರುತಿನ ಪತ್ರವನ್ನು ಕೇಳುತ್ತಾರೆ. ಆದರೆ ಅದರಲ್ಲಿ ಹೆಣ್ಣಾಗಿ ಬದಲಾಗುವ ಮುಂಚಿನ ಫೋಟೋ ಹಾಗೂ ಹೆಸರು ಇರುತ್ತದೆ. ಅಂತಹ ದಾಖಲೆಯನ್ನು ಯಾರು ಸ್ವೀಕರಿಸುವುದಿಲ್ಲ. ನಮ್ಮ ಉಡುಗೆತೊಡುಗೆಯಲ್ಲಿ ಬದಲಾವಣೆಯಾಗುತ್ತದೆ. ನಮ್ಮ ಗುರುತು ಬದಲಾಗುತ್ತದೆ. ಈ ಕಾರಣದಿಂದಲೇ ನಮಗೆ ಎಲ್ಲೂ ಕೆಲಸ ಸಿಗುವುದಿಲ್ಲ . ಇನ್ನು ಕೆಲವೊಮ್ಮೆ ಮನೆಯವರು ಕೋಪದಲ್ಲಿ ದಾಖಲೆಗಳನ್ನು ಸುಟ್ಟು ಹಾಕುತ್ತಾರೆ. ಇಂತಹ ವೇಳೆ ನಾವು ದಾಖಾಲೆ ಹೇಗೆ ಸಂಗ್ರಹಿಸಲು ಸಾಧ್ಯ ಎನ್ನುತ್ತಾರೆ ಮಂಗಳಮುಖಿಯರು.

ಶೌಚಾಲಯಕ್ಕೆ ಪರದಾಟ!
ನಗರ ಪ್ರದೇಶದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆಯಿದೆ. ಮಂಗಳಮುಖಿಯರಾದ ನಾವು ಎಲ್ಲಿಗೆ ಹೋಗಬೇಕು. ಮಹಿಳೆಯರ ಶೌಚ ಗೃಹಕ್ಕೆ ತೆರಳಿದ್ದರೆ ಕಾವಲುಗಾರನ ಜತೆಗೆ ಮಹಿಳೆಯರ ಕೆಂಗಣ್ಣಿಗೆ ಗುರಿಯಾಬೇಕು. ಇನ್ನೂ ಸಂಪೂರ್ಣವಾಗಿ ಮಹಿಳೆಯರಾಗಿ ಬದಲಾಗಿರುವ ನಮ್ಮವರಿಗೆ ಪುರುಷ ಶೌಚಾಲಯದಲ್ಲಿ ಶೌಚಕ್ಕೆ ತೆರಳುವುದೇ ಕಷ್ಟ. ಇದರಿಂದಾಗಿ ಜನರು ಓಡಾಟ ನಡೆಸದ ಸ್ಥಳಕ್ಕೆ ತೆರಳಬೇಕಾಗುತ್ತದೆ ಎಂದು ಮಂಗಳ ಮುಖಿಯೊಬ್ಬರು ನೋವು ತೋಡಿಕೊಂಡರು.

ಸಂಸ್ಕಾರದ ಕೊರತೆ
ನನಗೆ 15ವರ್ಷಕ್ಕೆ ಸಮೀಪಿಸುವಾಗ ನನಗೆ ಹೆಣ್ಣಾಗಿ ಆಲಂಕರಿಸಿಕೊಳ್ಳಬೇಕು ಎನ್ನುವ ಆಸೆ ಚಿಗಿರಿತು. ಮನೆಯವರಿಗೆ ಹೇಳಿದಾಗ ಮೈ ಮೂಳೆ ಮುರಿಯುವಷ್ಟು ಹೊಡೆದರು. ಕೆಲವು ಸತ್ಯ ಸಂಗತಿಗಳನ್ನು ಸ್ನೇಹಿತರಿಂದ ಮುಚ್ಚಿಡುತ್ತಿದ್ದರಿಂದ ಶಾಲೆಯೇ ಬಹು ಕಷ್ಟಕರವೆನಿಸತೊಡಗಿತು. ನನ್ನ ದನಿ, ದೈಹಿಕ ಹಾವಭಾವ, ಉಡುತ್ತಿದ್ದ ಬಟ್ಟೆಗಳಿಂದಾಗಿ ಜನ ನನಗೆ ಕಿರುಕುಳ ನೀಡುತ್ತಿದ್ದರು. ನನ್ನಲ್ಲಿ ಚಿಗುರುತ್ತಿರುವ ಆಸೆಗಳನ್ನು ಬಚ್ಚಿಟ್ಟು ಉನ್ನತ ಶಿಕ್ಷಣ ಮುಗಿಸಿ ಬೆಂಗಳೂರಿಗೆ ಬಂದೆ. ಇಲ್ಲಿ ನಾನು ಹೆಣ್ಣಾಗಿ ಪರಿವರ್ತನೆಗೊಂಡು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸುಮಾರು 10ವರ್ಷಗಳಾಗಿದೆ. ಕೆಲವೊಬ್ಬರಿಗೆ ನಾನು ಮಂಗಳಮುಖಿ ಎನ್ನುವ ಭಾವ ಮೂಡುತ್ತಿದ್ದಂತೆ ಅಂತರ ಕಾಯ್ದುಕೊಳ್ಳಲಾರಂಭಿಸುತ್ತಾರೆ. ನಾವೆಷ್ಟೇ ಸುಶಿಕ್ಷಿತರಂತೆ ವರ್ತಿಸಿದರೂ, ಅವರಲ್ಲಿ ಸಂಸ್ಕಾರದ ಕೊರತೆ ಕಾಣುತ್ತದೆ ಎಂದು ಮಂಗಳ ಮುಖಿಯೊಬ್ಬರು ತಮ್ಮ ನೋವು ಹೇಳಿಕೊಂಡರು.

ಖರೀದಿಸುವವರು ಯಾರು ?
ಸರ್ಕಾರ ಸ್ವ ಉದ್ಯೋಗ ನಡೆಸಲು ಸಾಲ ಸೌಲಭ್ಯ ಹಾಗೂ ಸಬ್ಸಿಡಿ ದರದಲ್ಲಿ ಸಾಲವನ್ನು ನೀಡುತ್ತಿದೆ. ಅದನ್ನು ಬಳಸಿಕೊಂಡು ಉದ್ಯೋಗವನ್ನು ಮಾಡಲು ಬೆಂಗಳೂರಿನಲ್ಲಿ ಅನೇಕ ಮಂಗಳಮುಖಿಯರು ಮುಂದೆ ಬಂದಿದ್ದಾರೆ. ಅವರಲ್ಲಿ ಕೆಲವರು ಹಣ್ಣು, ತರಕಾರಿ ಹಾಗೂ ಸಣ್ಣ ಹೊಟೇಲ್‌ ತೆರೆದು ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಅಲ್ಲಿಗೆ ಬಂದು ಖರೀದಿಸಿವವರು ಯಾರು? ವ್ಯಾಪಾರವಾಗದೇ ಉಳಿದ ತರಕಾರಿ, ಹಣ್ಣುಗಳು ಕೊಳೆತು ಹೋಗಿ, ಬಿಬಿಎಂಪಿ ಕಸವನ್ನು ಸೇರಿಕೊಂಡಿದೆ. ಸ್ವ ಉದ್ಯೋಗದ ಕನಸು ಕಾಣುವವರಗೆ ನೆರವಿಲ್ಲ. ಇದರಿಂದ ಅನೇಕರು ಜೀವನ ಸಾಗಿಸಲು ಸಿಗ್ನಲ್‌, ಟೋಲ್‌ಗ‌ಳಲ್ಲಿ ಭಿಕ್ಷೆ ಬೇಡುತ್ತಾರೆ.

ದೌರ್ಬಲ್ಯ ದುರುಪಯೋಗ
ಮಂಗಳಮುಖೀ ಸಮುದಾಯ ಕಷ್ಟುಪಟ್ಟು ಹೊಟ್ಟೆಪಾಡಿಗಾಗಿ ಭಿಕ್ಷೆಯಲ್ಲಿ ತೊಡಗಿಸಿಕೊಂಡಿದೆ. ನಮ್ಮಲ್ಲಿ ಲಿಂಗ ಪರಿವರ್ತನೆಯಾಗದಿದ್ದರೂ ಕೆಲವರು ಮಹಿಳೆಯರಂತೆ ಬದುಕುತ್ತಾರೆ. ಅದರೆ ನಮ್ಮ ದೌರ್ಬಲ್ಯವನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಗಂಡಸರು ಸಹ ಸೀರೆಯುಟ್ಟುಕೊಂಡು ಭಿಕ್ಷಾಟನೆ, ಮನೆ ಮನೆ ಹೋಗಿ ಗಲಾಟೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಸಮುದಾಯಕ್ಕೆ ಕೆಟ್ಟ ಹೆಸರು ಎಂದು ಮಂಗಳ ಮುಖೀಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಬಾಡಿಗೆ ಕೊಡುವವರಿಲ್ಲ!
ನಮ್ಮ ವರ್ಗಕ್ಕೆ ಮನೆ ಬಾಡಿಗೆ ನೀಡಲು ಹಿಂದೇಟು ಹಾಕುವ ಈ ಬೆಂಗಳೂರಿನಲ್ಲಿ ಪ್ರತಿಷ್ಠಿತ ಬಡಾವಣೆಯಲ್ಲಿ ಉತ್ತಮ ಮನೆ ಬಾಡಿಗೆ ಸಿಗುವುದು ಕಷ್ಟ. ಏಕೆಂದರೆ ನಾವು ಮಂಗಳಮುಖೀಯರು ಎನ್ನುವ ಮನೋಭಾವ. ಇದರಿಂದಾಗಿ ಸಾಧ್ಯವದಷ್ಟು ತೀರಾ ಹಿಂದುಳಿದ ಅಥವಾ ಯಾವುದೇ ಹೆಚ್ಚುವರಿ ಸೌಕರ್ಯವಿಲ್ಲದ ಕಡೆ ಮನೆಗಳಲ್ಲಿ ನಮ್ಮವರು ವಾಸಿಸುತ್ತಾರೆ. ನಾವು ಪ್ರತ್ಯೇಕ ಬಡಾವಣೆಯಲ್ಲಿ ಬದುಕು ಕಟ್ಟಿಕೊಳ್ಳಲು ಇಚ್ಛಿಸುವುದಿಲ್ಲ. ಎಲ್ಲರೊಂದಿಗೆ ಬದುಕು ಸಾಗಿಸುವ ಆಸೆ ನಮಗೂ ಇದೆ.

ಬೇಡಿಕೆಗಳೇನು?
*ಎಲ್ಲರೊಂದಿಗೆ ವಾಸಿಸುವ ಹಕ್ಕು
*ಪ್ರತ್ಯೇಕ ಶೌಚಾಲಯ ವ್ಯವಸ್ಥೆ
* ಆಸ್ಪತ್ರೆಯಲ್ಲಿ ಪ್ರತ್ಯೇಕ ಹಾಸಿಗೆ
*ಸ್ವ ಉದ್ಯೋಗಕ್ಕೆ ಪ್ರೋತ್ಸಾಹ

ಒತ್ತಾಯ?
*2017ರ ರಾಜ್ಯ ಲಿಂಗತ್ವ ಅಲ್ಪಸಂಖ್ಯಾತರ ನೀತಿ ಜಾರಿ
* ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ನಿಗಮ
* ಬಜೆಟ್‌ನಲ್ಲಿ 20 ಕೋಟಿ ರೂ. ಕಾಯ್ದಿರಿಸಲು ಒತ್ತಾಯ

ಲಿಂಗತ್ವ ಅಲ್ಪಸಂಖ್ಯಾತರು ಸ್ವಾವಲಂಬನೆ ಜೀವನ ನಡೆಸಲು ಸಮಾಜ, ಸರ್ಕಾರದ ಸಹಕಾರ ಅಗತ್ಯವಿದೆ. ಸ್ವ ಉದ್ಯೋಗದಿಂದ ಬದುಕು ಕಟ್ಟಿಕೊಳ್ಳಬೇಕು ಎಂದು ಬಂದಾಗ ಅವರಿಗೆ ಪ್ರೋತ್ಸಾಹ ನೀಡಿ. 2017ರ ರಾಜ್ಯ ಲಿಂಗತ್ವ ಅಲ್ಪಸಂಖ್ಯಾತರ ನೀತಿಯನ್ನು ಜಾರಿಗೊಳಿಸಿ, ನಮ್ಮವರಿಗೆ ಪ್ರತ್ಯೇಕ ನಿಗಮ ಮಂಡಳಿ ರಚನೆ ಮಾಡಬೇಕು.
-ಅಕ್ಕಯ್‌ ಪದ್ಮಶಾಲಿ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ, ಬೆಂಗಳೂರು.

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next