ಹೊಸದಿಲ್ಲಿ : ನೋಟು ನಿಷೇಧದ ಬಳಿಕ ಸುಮಾರು 18 ಲಕ್ಷ ಜನರು ಮಾಡಿರುವ 4.5 ಲಕ್ಷ ಕೋಟಿ ರೂ.ಗಳಿಗೂ ಅಧಿಕದ ಅನುಮಾನಾಸ್ಪದ ಬ್ಯಾಂಕ್ ಖಾತೆ ಜಮಾ ಮೊತ್ತವನ್ನು ಆದಾಯ ತೆರಿಗೆ ಇಲಾಖಾಧಿಕಾರಿಗಳು ಪರಿಶೀಲಿಸುತ್ತಿದ್ದು, ತಾವು ಈ ವ್ಯಕ್ತಿಗಳಿಗೆ ಕಳುಹಿಸಿರುವ ಎಸ್‌ಎಂಎಸ್ ಅಥವಾ ಇ-ಮೇಲ್‌ಗಳಿಗೆ ಫೆ.15ರ ಗಡುವಿನೊಳಗೆ ಉತ್ತರಿಸದ ಸುಮಾರು 11 ಲಕ್ಷ ಜನರಿಗೆ ಈಗ ಶಾಸನೇತರ ನೊಟೀಸ್ ಜಾರಿ ಮಾಡುತ್ತಿದ್ದಾರೆ.
ಶಂಕಾಸ್ಪದ ಬ್ಯಾಂಕ್ ಠೇವಣಿ ಮಾಡಿರುವ 18 ಲಕ್ಷ ಮಂದಿಯ ಪೈಕಿ ಸುಮಾರು 7 ಲಕ್ಷ ಮಂದಿ ತಾವು ಮಾಡಿರುವ ಬ್ಯಾಂಕ್ ಖಾತೆ ಜಮೆಯು ಸರಿಯಾಗಿಯೇ ಇದೆ ಎಂದು ಉತ್ತರಿಸಿದ್ದಾರೆ. ಯಾವುದೇ ರೀತಿಯ ವಿವರಣಾತ್ಮಕ ಉತ್ತರ ನೀಡದ ಉಳಿದ 11 ಲಕ್ಷ ಜನರಿಗೆ ಈಗ ಆದಾಯ ತೆರಿಗೆ ಇಲಾಖಾಧಿಕಾರಿಗಳು ‘non-statutory’ letters ಜಾರಿ ಮಾಡುತ್ತಿದ್ದಾರೆ.
ಕ್ಲೀನ್ ಮನಿ ಆಪರೇಶನ್ ಅಡಿ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಈ ವ್ಯಕ್ತಿಗಳು ಈಗಿನ್ನು ತಮ್ಮ ಬ್ಯಾಂಕ್ ಖಾತೆ ಜಮೆ ಮೊತ್ತದ ಮೂಲವನ್ನು ವಿವರಿಸಬೇಕಾಗುತ್ತದೆ.
ನೋಟು ನಿಷೇಧದ ಬಳಿಕದಲ್ಲಿ ಶಂಕಾಸ್ಪದ ಮೊತ್ತವನ್ನು ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿರುವ 18 ಲಕ್ಷ ಮಂದಿಯ ಪೈಕಿ ಸುಮಾರು ಐದು ಲಕ್ಷ ಮಂದಿ ಐಟಿ ಇಲಾಖೆಗೆ ಎಸ್‌ಎಂಎಸ್ ಅಥವಾ ಇ-ಮೇಲ್ ಮೂಲಕ ಉತ್ತರಿಸಿದ್ದಾರೆ; ಆದರೆ ಇವರು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾವಣೆ ಮಾಡಿಕೊಂಡವರಾಗಿರುವುದಿಲ್ಲ ಎಂದು ಇಲಾಖೆ ತಿಳಿಸಿದೆ.