ಹೊಸದಿಲ್ಲಿ : ಬಿಹಾರದಲ್ಲಿನ ನಿತೀಶ್ ಕುಮಾರ್ ನೇತೃತ್ವದ ಸರಕಾರಕ್ಕೆ ಭಾರೀ ಮುಜುಗರ ಉಂಟು ಮಾಡುವ ವಿದ್ಯಮಾನವೊಂದರಲ್ಲಿ ಆದಾಯ ತೆರಿಗೆ ಇಲಾಖೆ ಬೇನಾಮಿ ವಹಿವಾಟು ಕಾಯಿದೆಯಡಿ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಲಾಲು ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ ಮತ್ತು ಪುತ್ರಿ ಮೀಸಾ ಭಾರತಿ ವಿರುದ್ಧ ಆಸ್ತಿ ಮುಟ್ಟುಗೋಲು ಕ್ರಮ ತೆಗೆದುಕೊಂಡಿದೆ.
ಲಾಲು ಪ್ರಸಾದ್ ಯಾದವ್ ಅವರ ಕುಟುಂಬದವರು ಹೊಂದಿರುವ 9 ಕೋಟಿ ರೂ.ಗಳಿಗೂ ಮೀರಿದ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಲುವಾಗಿ ಐಟಿ ಇಲಾಖೆ ಆಟ್ಯಾಚ್‌ಮೆಂಟ್ ನೊಟೀಸನ್ನು ಜಾರಿ ಮಾಡಿದೆ.
ಮೀಸಾ ಭಾರತಿ ಮತ್ತು ಆಕೆಯ ಪತಿ ಶೈಲೇಶ್ ಕುಮಾರ್, ತೇಜಸ್ವಿ ಯಾದವ್, ರಾಬ್ರಿ ದೇವಿ ಮತ್ತು ಸಹೋದರಿಯರಾದ ರಾಗಿಣಿ ಮತ್ತು ಚಂದಾ ಯಾದವ್ ಅವರಿಗೆ ಸೇರಿದ ಒಟ್ಟು 12 ಭೂ ನಿವೇಶನಗಳನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.
ಕಳೆದ ಮೇ 16ರಂದು ಐಟಿ ಇಲಾಖೆ ಲಾಲು ಪ್ರಸಾದ್ ಯಾದವ್ ಮತ್ತು ಅವರ ಮಕ್ಕಳಾದ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಮತ್ತು ಮೀಸಾ ಭಾರತಿ ಅವರು ಶಾಮೀಲಾಗಿರುವ ಬೇನಾಮಿ ಭೂ ವ್ಯವಹಾರಗಳಿಗೆ ಸಂಬಂಧಿಸಿ ದಿಲ್ಲಿ ಮತ್ತು ಸುತ್ತಮುತ್ತಲಲ್ಲಿನ 22 ತಾಣಗಳಲ್ಲಿ ಶೋಧ ಕಾರ್ಯ ನಡೆಸಿತ್ತು.
ಹಣ ಪಾವತಿಸಿ ಆಸ್ತಿ ಖರೀದಿಸಿದ ಹೊರತಾಗಿಯೂ ಆ ಆಸ್ತಿಯನ್ನು ತನ್ನ ಹೆಸರಲ್ಲಿ ಹೊಂದದಿರುವ ವ್ಯಕ್ತಿಯು ನಡೆಸುವ ವಹಿವಾಟನ್ನು ಬೇನಾಮಿ ವ್ಯವಹಾರ ಎಂದು ಪರಿಗಣಿಸಲಾಗುತ್ತದೆ.