ಹೊಸದಿಲ್ಲಿ : ಜಾರ್ಖಂಡ್‌ನ ಪಾಕುರ್‌ನಲ್ಲಿ ನಿನ್ನೆ ಮಂಗಳವಾರ 79ರ ವೃದ್ಧ, ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ ನಡೆದುದನ್ನು ಅನುಸರಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಗುರಿ ಇರಿಸಿಕೊಂಡು ಟ್ವಿಟರ್‌ನಲ್ಲಿ ಪಾಪ್ ಕ್ವಿಜ್ ಪ್ರಕಟಿಸಿದ್ದಾರೆ. ದುರ್ಬಲರನ್ನು ಹುಡುಕಿ ಚಚ್ಚುವ ನಾನು ಯಾರು ? ಎಂದು ಪ್ರಶ್ನಿಸಿದ್ದಾರೆ.
ಸಂಸತ್ತಿನಲ್ಲಿಂದು ಮಾನ್ಸೂನ್ ಅಧಿವೇಶನ ಆರಂಭವಾಗುವುದಕ್ಕೆ ಕೆಲವು ತಾಸು ಮುನ್ನ ಟ್ಟಿಟರ್‌ನಲ್ಲಿ ಕಂಡು ಬಂದ ರಾಹುಲ್ ಗಾಂಧಿ ಅವರ ಈ ಪಾಪ್ ಕ್ವಿಜ್ ಹಲವರ ಗಮನ ಸೆಳೆದುಕೊಂಡಿದೆ; ಟೀಕೆಗೆ ಗುರಿಯಾಗಿದೆ.
ರಾಹುಲ್ ಪಾಪ್ ಕ್ವಿಜ್ ಹೀಗಿದೆ : ಅತ್ಯಂತ ಬಲಶಾಲಿಗೆ ನಾನು ಬಾಗುತ್ತೇನೆ; ಒಬ್ಬ ವ್ಯಕ್ತಿಯ ಶಕ್ತಿ ಮತ್ತು ಅಧಿಕಾರ ನನಗೆ ಅತೀ ಮುಖ್ಯವಾಗುತ್ತದೆ. ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ನಾನು ದ್ವೇಷ ಮತ್ತು ಭಯವನ್ನು ಅಸ್ತ್ರವಾಗಿ ಬಳಸುತ್ತೇನೆ; ಅತ್ಯಂತ ದುರ್ಬಲರನ್ನು ಹುಡುಕಿ ತುಳಿದು, ಹೊಸಕಿ ಹಾಕಲು ನಾನು ಬಯಸುತ್ತೇನೆ. ನನ್ನ ಉಪಯೋಗಕ್ಕೆ ಸಿಗುವ ನೆಲೆಯಲ್ಲಿ ಎಲ್ಲರನ್ನು ನಾನು ಬಳಸಿಕೊಳ್ಳುತ್ತೇನೆ. ಹಾಗಿದ್ದರೆ ನಾನು ಯಾರು ?
ಜಾರ್ಖಂಡ್‌ನ ಪಾಕುರ್‌ನಲ್ಲಿ ಬುಡುಕಟ್ಟು ಸಮುದಾಯದವರ ಸಂಸ್ಥೆಯೊಂದು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಹಿಂದೂ ವಿರೋಧಿ ಭಾಷಣ ಮಾಡಿದರೆಂಬ ಕಾರಣಕ್ಕೆ 79ರ ಹರೆಯದ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರನ್ನು ಯುವ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರು ಕಪಾಳಮೋಕ್ಷ ಮಾಡಿ, ನೆಲಕ್ಕೆ ಬೀಳಿಸಿ, ಕಾಲಿನಿಂದ ತುಳಿದು, ಹೊಡೆದು ಹಲ್ಲೆ ಮಾಡಿದ್ದ ಅತ್ಯಂತ ಆಘಾತಕಾರಿ ಘಟನೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ.