ಹೇಳುತ್ತೇನೆ ಕೇಳು: ನಿನ್ನೊಂದಿಗೆ ಕಳೆದ ಕ್ಷಣಗಳು ಬಹಳ ಆಪ್ತವಾಗಿದ್ದವು. ನಾನು ನಿನ್ನಷ್ಟು ಬುದ್ಧಿವಂತನಲ್ಲ. ಆದರೆ ರೂಪದಲ್ಲಿ ನಿನಗಿಂತ ಕಡಿಮೆ ಏನೂ ಇಲ್ಲ. ಕಾಲೇಜಿನ ದಿನಗಳಲ್ಲಿ ಯಾರ ಕಣ್ಣೋಟಕ್ಕೂ ಬಲಿಯಾಗದ ನನ್ನ ಹೃದಯ ನಿನ್ನೆಡೆಗೆ ಜಾರಿದ್ದೇ ದೊಡ್ಡ ಅಚ್ಚರಿ.
ಮನ ತೊರೆದ ಮನದರಸಿಗೆ,
ನೀನು ನನ್ನ ಮನದ ಅರಮನೆಯನ್ನು ತೊರೆದು ವರ್ಷಗಳು ಕಳೆದರೂ, ಅಂತಪುರದಲ್ಲಿ ನಿನ್ನ ಹೆಸರು ಶಾಶ್ವತವಾಗಿ ಉಳಿದು ಹೋಗಿದೆ. ನೆನಪುಗಳ ಸರಮಾಲೆಯನ್ನು ನನ್ನ ಕೊರಳಿಗೆ ಹಾಕಿ, ಪ್ರೀತಿಯ ಪಲ್ಲಕ್ಕಿಯನ್ನು ಇಳಿದು ಹೋಗಿಬಿಟ್ಟೆ ನೀನು.
ಜೀವನದಲ್ಲಿ ಏನೇನೋ ಆಗಿಹೋಯ್ತು. ಆದರೂ, ಹೇಳುತ್ತೇನೆ ಕೇಳು: ನಿನ್ನೊಂದಿಗೆ ಕಳೆದ ಕ್ಷಣಗಳು ಬಹಳ ಆಪ್ತವಾಗಿದ್ದವು. ನಾನು ನಿನ್ನಷ್ಟು ಬುದ್ಧಿವಂತನಲ್ಲ. ಆದರೆ ರೂಪದಲ್ಲಿ ನಿನಗಿಂತ ಕಡಿಮೆ ಏನೂ ಇಲ್ಲ. ಕಾಲೇಜಿನ ದಿನಗಳಲ್ಲಿ ಯಾರ ಕಣ್ಣೋಟಕ್ಕೂ ಬಲಿಯಾಗದ ನನ್ನ ಹೃದಯ ನಿನ್ನೆಡೆಗೆ ಜಾರಿದ್ದೇ ದೊಡ್ಡ ಅಚ್ಚರಿ.
ನಾನು ಶ್ರೀಮಂತನಲ್ಲ. ಆದರೆ ನೀನು ಶ್ರೀಮಂತರ ಮಗಳು ಎಂದು ಗೊತ್ತಾದ ಮೇಲೂ ನಿನ್ನನ್ನು ಪ್ರೀತಿಸುವ ಧೈರ್ಯ ಮಾಡಿದೆ. ನಿಮ್ಮ ಮನೆಯಲ್ಲಿ ನಮ್ಮಿಬ್ಬರ ಪ್ರೀತಿಗೆ ಸಮ್ಮತಿ ಸಿಗುವುದಿಲ್ಲ ಎಂಬ ಅರಿವಾದ ಮೇಲೂ, ನಿನ್ನ ಮೇಲಿನ ಪ್ರೀತಿ ಎಳ್ಳಷ್ಟೂ ಕಡಿಮೆಯಾಗಲಿಲ್ಲ. ನಮ್ಮ ಪ್ರೀತಿಯ ವಿಷಯ ಗೆಳೆಯನಿಗೆ ತಿಳಿದಾಗ ಆತ: “ನನಗ್ಯಾಕೋ ಇದು ಸರಿ ಅನ್ನಿಸುತ್ತಿಲ್ಲ. ಅವಳು ಶ್ರೀಮಂತರ ಮನೆಯವಳು. ಭವಿಷ್ಯದ ಬಗ್ಗೆ ಯೋಚಿಸಿದ್ದೀರಾ?’ ಎಂದು ಪದೇ ಪದೆ ಹೇಳಿದರೂ ನಾನು ಕಿವಿಗೊಡಲಿಲ್ಲ. ಮನೆಯಲ್ಲಿ ಅಪ್ಪನಿಗೆ ಗೊತ್ತಾಗಿ ದೊಣ್ಣೆ ಏಟು ಕೊಟ್ಟರೂ ಅಂಜಲಿಲ್ಲ. ಜೀವ ಹೋದರೂ ಸರಿ, ನಿನ್ನನ್ನು ಮಾತ್ರ ಬಿಟ್ಟಿರಲಾರೆ ಅಂತ ನಿರ್ಧರಿಸಿದ್ದೆ.
ಆದರೆ, ನೀನು ಏನೇನೋ ನೆಪ ಹೇಳಿ ನನ್ನಿಂದ ದೂರಾಗತೊಡಗಿದೆ. ಸಿಟ್ಟು, ಸಿಡುಕು, ಅನುಮಾನ, ಅವಮಾನಗಳ ನಂತರ ಒಂದು ದಿನ ನಮ್ಮಿಬ್ಬರ ಪ್ರೀತಿಗೆ ಸೇತುವೆಯಾಗಿದ್ದ ನಿನ್ನ ಮೊಬೈಲ್ ಕೂಡ ಮೌನ ತಾಳಿತು. “ಅವಳೆಲ್ಲೋ ನಿನಗೆ ಸಿಗುತ್ತಿದ್ದಳು? ನೀನು ಸುಮ್ಮನೆ ಕನಸು ಕಾಣುತ್ತಿದ್ದೆ ಅಷ್ಟೇ’ ಅಂತ ಗೆಳೆಯರು ಹಂಗಿಸಿದರು. ಹೌದು, ನಾನು ಸುಮ್ಮನೆ ಹುಚ್ಚು ಕನಸು ಕಾಣುತ್ತಾ, ಸಮಯ ವ್ಯರ್ಥ ಮಾಡಿದೆ. ಪ್ರೀತಿಗೆ ಅಂತಸ್ತು ಅಡ್ಡಿಯಲ್ಲ ಅನ್ನೋದೆಲ್ಲಾ ಸಿನಿಮಾದಲ್ಲಿ ಮಾತ್ರ. ಇರಲಿ, ಎಲ್ಲಿದ್ದರೂ ಖುಷಿಯಾಗಿರು ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ.
ಹಣಮಂತ ಮಾಗಿ, ಬಾಗಲಕೋಟೆ