ಕೋಲ್ಕತಾ: ಜಾಸ್ ಬಟ್ಲರ್ ಆರೇಂಜ್ ಕ್ಯಾಪ್ ಉಳಿಸಿಕೊಳ್ಳಲಿ, ಆದರೆ ನಮ್ಮ ವಿರುದ್ಧ ಸಿಡಿಯದೇ ಇರಲಿ… ಹೀಗೊಂದು ಜಾಣ ಹಾರೈಕೆ ಮಾಡಿದವರು ರಾಹುಲ್ ತೆವಾಟಿಯ.
ಇವರಿಬ್ಬರೂ ರಾಜಸ್ಥಾನ್ ರಾಯಲ್ಸ್ ತಂಡದ ಟೀಮ್‌ಮೇಟ್ ಆಗಿದ್ದವರು. ಈಗ ತೆವಾಟಿಯ ನೂತನ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ.
ಮಂಗಳವಾರದ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ಒಂದು ವೀಡಿಯೋವನ್ನು ಬಿಡುಗಡೆ ಮಾಡಿದೆ. ಈಗ ಗುಜರಾತ್ ತಂಡವನ್ನು ಪ್ರತಿನಿಧಿಸುತ್ತಿರುವ, ರಾಜಸ್ಥಾನ್ ರಾಯಲ್ಸ್ ತಂಡದ ಮೂವರು ಮಾಜಿ ಕ್ರಿಕೆಟಿಗರಾದ ರಾಹುಲ್ ತೆವಾಟಿಯ, ಡೇವಿಡ್ ಮಿಲ್ಲರ್ ಮತ್ತು ವರುಣ್ ಆರೋನ್ ಅವರ ಅನುಭವಗಳನ್ನು ಇದು ಒಳಗೊಂಡಿದೆ.
ಈ ಸಂದರ್ಭದಲ್ಲಿ ರಾಹುಲ್ ತೆವಾಟಿಯ ಮಾಜಿ ಸಹ ಆಟಗಾರ ಜಾಸ್ ಬಟ್ಲರ್ ಕುರಿತು ಮಾತಾಡಿದ್ದಾರೆ.
Related Articles
“ಜಾಸ್ ಬಟ್ಲರ್ ಈ ಕೂಟದ ಸರ್ವಾಧಿಕ ರನ್ ಸಾಧಕನಾಗಿ ಮೂಡಿಬರಲಿ, ಆರೇಂಜ್ ಕ್ಯಾಪ್ ಉಳಿಸಿಕೊಳ್ಳಲಿ. ಆದರೆ ಯಾವ ಕಾರಣಕ್ಕೂ ನಮ್ಮ ವಿರುದ್ಧ ದೊಡ್ಡ ಸ್ಕೋರ್ ದಾಖಲಿಸದಿರಲಿ…’ ಎಂದು ನಗುತ್ತ ಹೇಳಿದ್ದಾರೆ.
ಡೇವಿಡ್ ಮಿಲ್ಲರ್ ಕೂಡ ಜಾಸ್ ಬಟ್ಲರ್ ಕುರಿತೇ ಮಾತಾಡಿದ್ದಾರೆ. “ಬಟ್ಲರ್ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಈ ಸೀಸನ್‌ನಲ್ಲಿ ಅವರ ಬ್ಯಾಟಿಂಗ್ ಅಮೋಘ ಮಟ್ಟದಲ್ಲಿದೆ’ ಎಂದಿದ್ದಾರೆ.
“ರಾಜಸ್ಥಾನ್ ರಾಯಲ್ಸ್ ತಂಡದ ಕೆಲವು ಮಹಾನ್ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅದೃಷ್ಟ ನನ್ನದಾಗಿತ್ತು’ ಎಂದವರು ವರುಣ್ ಆರೋನ್. ಈ ಮೂವರೂ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಕುರಿತು ಹೆಮ್ಮೆ, ಅಭಿಮಾನ ವ್ಯಕ್ತಪಡಿಸಿದರು.
ಉತ್ತಮ ಬಾಂಧವ್ಯ
“ರಾಜಸ್ಥಾನ್ ರಾಯಲ್ಸ್ ನನಗೆ ದೊಡ್ಡದೊಂದು ಬ್ರೇಕ್ ಒದಗಿಸಿದ ತಂಡ. ಸಂಜು ಸ್ಯಾಮ್ಸನ್ ಓರ್ವ ಗ್ರೇಟ್ ಕ್ಯಾಪ್ಟನ್. ಅತ್ಯುತ್ತಮ ಕ್ರಿಕೆಟರ್. ನಮ್ಮ ನಡುವೆ ಉತ್ತಮ ಬಾಂಧವ್ಯವಿತ್ತು. ಪ್ಲೇ ಆಫ್ನಲ್ಲಿ ಅವರನ್ನು ಎದುರಿಸುವುದೊಂದು ರೋಚಕ ಅನುಭವ’ ಎಂದು ರಾಹುಲ್ ತೆವಾಟಿಯ ಹೇಳಿದರು.