ಬೆಂಗಳೂರು: “ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ತರುವ ಪ್ರಸ್ತಾಪ ಈ ಹಿಂದೆ ನಾನು ಇಂಧನ ಸಚಿವನಾಗಿದ್ದಾಗಲೇ ಬಂದಿತ್ತು. ಅದನ್ನು ನಾನು ತಡೆ ಹಿಡಿದಿದ್ದೆ. ಈಗ ಅದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಬೇರೆ ಇಲಾಖೆಯ ವಿಷಯದಲ್ಲಿ ನಾನು ತಲೆ ಹಾಕುವುದಿಲ್ಲ’ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಿಂಗನಮಕ್ಕಿ ಜಲಾಶಯದಿಂದ ನೀರು ತರುವ ವಿಚಾರದ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ನೋಡಿಕೊಳ್ಳುತ್ತಾರೆ. ಇಡೀ ಪ್ರಪಂಚ ಬೆಂಗಳೂರನ್ನು ನೋಡುತ್ತಿದೆ. ದೇಶದ ಶೇ.39ರಷ್ಟು ರಫ್ತು ಬೆಂಗಳೂರಿನಿಂದ ಹೋಗುತ್ತಿದೆ. ಇಡೀ ವಿಶ್ವವೇ ಬೆಂಗಳೂರು ಮೂಲಕ ಭಾರತವನ್ನು ನೋಡುತ್ತಿದೆ. ಬೆಂಗಳೂರಿಗೆ ವಲಸೆ ಬರುವುದನ್ನು ತಡೆಗಟ್ಟಬೇಕಿದೆ. ಮೇಕೆದಾಟು ಯೋಜನೆ ಇನ್ನೂ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದರು.
ಕುಡಿಯಲು ನೀರು ಬೇಕಿದೆ: ಬೆಂಗಳೂರಿಗೆ ಕುಡಿಯುವ ನೀರಿನ ಅಗತ್ಯವಿದೆ. ಈ ವರ್ಷ ಕೆಆರ್‌ಎಸ್‌ಗೆ ಒಳಹರಿವಿನ ಪ್ರಮಾಣ ತೀರಾ ಕಡಿಮೆ ಇದೆ. ಕಳೆದ ವರ್ಷ ಕೆಆರ್‌ಎಸ್‌ನಲ್ಲಿ 30 ಟಿಎಂಸಿ ನೀರು ಸಂಗ್ರಹವಿತ್ತು. ಈ ವರ್ಷ 10.829 ನೀರಿನ ಸಂಗ್ರಹವಿದೆ. ಕಳೆದ ವರ್ಷ 7,603 ಕ್ಯೂಸೆಕ್ ಒಳ ಹರಿವಿತ್ತು. ಈ ವರ್ಷ 669 ಕ್ಯೂಸೆಕ್ ಮಾತ್ರ ಇದೆ. ಮೇಕೆದಾಟು ವಿಚಾರದಲ್ಲಿ ಕೇಂದ್ರದ ನಾಲ್ವರು ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಈ ವಿಚಾರದ ಕುರಿತು ಕೇಂದ್ರ ಸಚಿವ ಸದಾನಂದಗೌಡ ಅವರ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಅವರಿಗೆ ಸಿಕ್ಕಿರುವ ಅವಕಾಶ ಬಳಸಿಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಕೇಂದ್ರ ಸರ್ಕಾರ “ಜಲಶಕ್ತಿ’ ಅಂತ ಹೊಸ ಇಲಾಖೆ ಆರಂಭಿಸಿದ್ದಾರೆ. ಜಲಸಂಪನ್ಮೂಲ ಸಚಿವರುಗಳ ಸಭೆಯಲ್ಲಿಯೂ ಈ ವಿಷಯ ಪ್ರಸ್ತಾಪ ಮಾಡಿದ್ದೇನೆ. ಈ ವಿಚಾರದಲ್ಲಿ ತಮಿಳುನಾಡಿನೊಂದಿಗೆ ಗದ್ದಲಕ್ಕೆ ಇಳಿಯುವುದಿಲ್ಲ. ಅವರೂ ನಮ್ಮ ಸಹೋದರರು. ನಮ್ಮ ಹಣ, ನಮ್ಮ ನೆಲದಲ್ಲಿ, ನಾವು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ. ಸುಪ್ರೀಂಕೋರ್ಟ್ ಆದೇಶದಂತೆ ನಾವು ನಮ್ಮ ಕೆಲಸ ಮಾಡುತ್ತೇವೆ. ಬೆಂಗಳೂರಿಗೆ ಕುಡಿಯುವ ನೀರಿಗೆ ಹಂಚಿಕೆಯಾಗಿರುವ ನೀರು ಬಳಕೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.