ಮುಂಬೈ: ಟೀಂ ಇಂಡಿಯಾದ ವಿಕೆಟ್ ಕೀಪರ್ ಆಗಿರುವ ಇಶಾನ್ ಕಿಶನ್ ಅವರು ಇತ್ತೀಚೆಗೆ ಮುಗಿದ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೂರು ಪಂದ್ಯಗಳಲ್ಲಿ ಮಾತ್ರ ಆಡಿದ್ದರು. ಕೊನೆಯ ಎರಡು ಪಂದ್ಯಗಳಿಗೆ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಈ ವಿಚಾರಕ್ಕೆ ಮಾಜಿ ಆಟಗಾರ ಅಜಯ್ ಜಡೇಜಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊದಲ ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕ ಸಹಿತ 110 ರನ್ ಗಳಿಸಿದ್ದರು. ರಾಯ್ಪುರ ಮತ್ತು ಬೆಂಗಳೂರಿನಲ್ಲಿ ನಡೆದ ಕೊನೆಯ ಎರಡು ಪಂದ್ಯಗಳಲ್ಲಿ ಕಿಶನ್ ಅವರನ್ನು ಹೊರಗಿಟ್ಟು ಯುವ ಕೀಪರ್ ಜಿತೇಶ್ ಶರ್ಮಾಗೆ ಅವಕಾಶ ಕಲ್ಪಿಸಲಾಗಿತ್ತು. ಏಕದಿನ ವಿಶ್ವಕಪ್ ನಲ್ಲಿಯೂ ಇಶಾನ್ ಕಿಶನ್ ಮೊದಲೆರಡು ಪಂದ್ಯಗಳಲ್ಲಿ ಮಾತ್ರ ಆಡುವ ಅವಕಾಶ ಪಡೆದಿದ್ದರು.
ಏಕದಿನ ದ್ವಿಶತಕವನ್ನು ಹೊಂದಿರುವ ಕಿಶನ್ ಸಂಪೂರ್ಣ ಆಟಗಾರನಾಗಲು ನಿಯಮಿತ ಆಟದ ಸಮಯ ಬೇಕಾಗುತ್ತದೆ ಎಂದು ಜಡೇಜಾ ಭಾವಿಸುತ್ತಾರೆ.
“ಇಶಾನ್ ಕಿಶನ್ ಆಸ್ಟ್ರೇಲಿಯಾ ವಿರುದ್ಧದ ಸಂಪೂರ್ಣ ಐದು ಪಂದ್ಯಗಳ ಟಿ20 ಸರಣಿಯನ್ನು ಸಹ ಆಡಲಿಲ್ಲ. ಮೂರು ಪಂದ್ಯಗಳ ನಂತರ ವಿಶ್ರಾಂತಿಗಾಗಿ ಅವರನ್ನು ಮನೆಗೆ ಕಳುಹಿಸಲಾಯಿತು. ಹೀಗೆ ಮುಂದುವರೆಯುತ್ತಾ ಹೋದರೆ, ಅವರು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಎಂದು ನೀವು ಹೇಗೆ ಖಚಿತಪಡಿಸಿಕೊಳ್ಳುತ್ತೀರಿ?” ಎಂದು ಜಡೇಜಾ ಪ್ರಶ್ನಿಸಿದ್ದಾರೆ.
“ಅವನು ತನ್ನ ದಿನದಂದು ಆಟದ ಪರಿಸ್ಥಿತಿ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾನೆ. ಅವನು ಯಾವಾಗ ಸಿದ್ಧನಾಗುತ್ತಾನೆ? ಕಳೆದ ಎರಡು ವರ್ಷಗಳಲ್ಲಿ ಅವನು ಎಷ್ಟು ಪಂದ್ಯಗಳನ್ನು ಆಡಿದ್ದಾನೆ? ಭಾರತೀಯ ಕ್ರಿಕೆಟ್ ನ ಈ ಸಮಸ್ಯೆ ಇಂದಿನದಲ್ಲ, ನಾವು ಆಟಗಾರರನ್ನು ಆಯ್ಕೆ ಮಾಡುವುದಿಲ್ಲ ಆದರೆ ಅವರನ್ನು ತಿರಸ್ಕರಿಸುವುದು ತುಂಬಾ ಹಳೆಯದು” ಎಂದು ಅವರು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಇಶಾನ್ ಕಿಶನ್ ಅವರು ಟಿ20 ಮತ್ತು ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಏಕದಿನ ತಂಡದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಬ್ಯಾಕಪ್ ಕೀಪರ್ ಆಗಿ ಅಯ್ಕೆ ಮಾಡಲಾಗಿದೆ.