ಬೆಂಗಳೂರು: ಬಿಜೆಪಿಯ ಹಿರಿಯ ಮುಖಂಡ ವಿ.ಸೋಮಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ತಾರೆ ಎಂಬ ಮಾತುಗಳು ಮತ್ತೂಮ್ಮೆ ಕೇಳಿ ಬಂದ ಹಿನ್ನೆಲೆಯಲ್ಲಿ ಭಾನುವಾರ ತುರ್ತು ಪತ್ರಿಕಾಗೋಷ್ಠಿ ಕರೆದ ಸೋಮಣ್ಣ ಅವರು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿ.ಸೋಮಣ್ಣ ಅವರು ಬಯಸಿದ ಕ್ಷೇತ್ರದಲ್ಲಿ ಟಿಕೆಟ್ ಸಿಗುತ್ತಿಲ್ಲ.ಹೀಗಾಗಿ, ಬೇಸರಗೊಂಡಿರುವ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪರ್ಕಿಸಿದ್ದು ರಾಜಾಜಿನಗರದಲ್ಲಿ ಕಾಂಗ್ರೆಸ್ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂಬ ಸುದ್ದಿ ಕೆಲವು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ವಿಜಯನಗರ, ಗೋವಿಂದರಾಜನಗರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಆತಂಕಗೊಂಡು ಸೋಮಣ್ಣ ನಿವಾಸಕ್ಕೆ ಧಾವಿಸಿದರು.
ನಂತರ ಸೋಮಣ್ಣ ಅವರು ದಿಢೀರ್ ಸುದ್ದಿಗೋಷ್ಠಿ ಕರೆದು, ನಾನು ಬಿಜೆಪಿ ಬಿಡುವುದಿಲ್ಲ. ನಾನು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದು ನಾಲ್ಕು ದಿನಗಳಲ್ಲಿ ಬಗೆಹರಿಯಲಿದೆ. ಅನಂತಕುಮಾರ್ ಹಾಗೂ ಯಡಿಯೂರಪ್ಪ ಅವರ ಜತೆ ಮಾತನಾಡಿದ್ದೇನೆ. ಅದುವರೆಗೂ ತಾಳ್ಮೆಯಿಂದ ಇರಿ. ನಾನು ನಿಮ್ಮ ಜತೆ ಇರುತ್ತೇನೆ. ನಾನು ಸ್ಪರ್ಧೆ ಮಾಡಲಿ, ಬಿಡಲಿ ವಿಜಯನಗರ, ಗೋವಿಂದರಾಜನಗರದಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿ ಎಂದು ಹೇಳಿದರು.
ಅಲ್ಲೇ ಇದ್ದ ಅಭಿಮಾನಿಗಳು, ನೀವೇ ಇಲ್ಲಿ ನಿಲ್ಲಬೇಕು. ಇಲ್ಲದಿದ್ದರೆ ಆಗುವುದಿಲ್ಲ ಎಂದು ಪಟ್ಟು ಹಿಡಿದರು. ಅವರನ್ನು ಸಮಾಧಾನಪಡಿಸಿದ ಸೋಮಣ್ಣ, ವರಿಷ್ಠರ ತೀರ್ಮಾನದಂತೆ ಆಗಲಿದೆ ಸುಮ್ಮನಿರಿ ಎಂದರು.
ವಿ.ಸೊಮಣ್ಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪರ್ಕಿಸಿದ್ದರು. ರಾಜಾಜಿನಗರದಲ್ಲಿ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿ ಇಲ್ಲದ ಕಾರಣ ಸೋಮಣ್ಣ ಅವರನ್ನು ಸೆಳೆಯಲಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಭಾನುವಾರ ಬೆಳಗ್ಗೆಯಿಂದಲೂ ಕೇಳಿ ಬಂದಿದ್ದವು.