ಅಷ್ಟೇನೂ ಜಾಣೆಯಲ್ಲದ ನಾನು ಪದವಿ ಮುಗಿಯುವುದರೊಳಗೇ ಮದುವೆಯಾಗಿ ಒಂದು ಮಗುವಿನ ತಾಯಿಯಾಗಿದ್ದೆ. ಟೈಪಿಂಗ್, ಶಾರ್ಟ್‌ಹ್ಯಾಂಡ್, ಬ್ಯಾಂಕ್ ಟ್ರೆ„ನಿಂಗ್, ಹೊಲಿಗೆ, ಕಸೂತಿ, ಚಿತ್ರಕಲೆ, ರಂಗೋಲಿ, ಗಾಯನ, ನಾಟಕಾಭಿನಯ, ಕತೆ- ಕವಿತೆಗಳ ರಚನೆ… ಹೀಗೆ ಒಂದೇ ಎರಡೇ, ಕಂಡಕಂಡದ್ದನ್ನೆಲಾ ಕಲಿಯುವ, ತಿಳಿಯುವ ತವಕ ನನಗೆ. ಸದಾ ಏನಾದರೊಂದು ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದ ನಾನು, ಪತ್ರಿಕೆಗಳಿಗೆ ಬರೆದು, ರೇಡಿಯೋ ಕಾರ್ಯಕ್ರಮ ನೀಡಿ, ಹೊಲಿಗೆ, ಮನೆಪಾಠ… ಹೀಗೆ ಹವ್ಯಾಸಗಳೇ ನಾನು ಮಾಡುವ ಕೆಲಸಗಳಾಗಿ, ಅದರಿಂದ ಅಲ್ಪಸ್ವಲ್ಪ ಸಂಪಾದಿಸುತ್ತಿದ್ದೆ.
ಮುಂದೆ ಹೆಚ್ಚು ಸಂಪಾದಿಸುವುದು ಅನಿವಾರ್ಯವಾದಾಗ, ಕಷ್ಟಪಟ್ಟು ಎಲ್‌ಐಸಿ ಟ್ರೆ„ನಿಂಗ್ ಮಾಡಿ, ಅದರಲ್ಲಿ ಪಾಸಾಗಿ ಏಜೆನ್ಸಿ ಪಡೆದೆ. ಅಧಿಕೃತವಾಗಿ ನಾನು ಮಾಡಿದ ಮೊದಲ ಕೆಲಸ ಅದೇ. ನನ್ನಂಥ ಮೌನಿಗೆ ಆ ವೃತ್ತಿ ಸರಿಯಲ್ಲ. ಅಲ್ಲಿ ಮಾತೇ ಬಂಡವಾಳ. ಆದರೂ ದುಡಿಯಲೇಬೇಕಿತ್ತು. ಏಕೆಂದರೆ, ನನ್ನ ಪುಟ್ಟ ಗೂಡಿನಲ್ಲಿ ಎರಡು ಪುಟ್ಟಮರಿಗಳಿದ್ದವು. ಅವಕ್ಕೆ ಉಣಿಸಬೇಕು, ಉಡಿಸಬೇಕು, ತೊಡಿಸಬೇಕು, ಕೊಡಿಸಬೇಕು.
ಕಡೆಗೊಂದು ದಿನ ಗುರುಗಳೊಬ್ಬರ ನೆರವಿನಿಂದ ನಾನು ಓದಿದ ಕಾಲೇಜಿನಲ್ಲೇ, ನಾನು ಮಾಡಬಹುದಾದ ಒಂದು ಕೆಲಸ ಸಿಕ್ಕಿತು. ಎಷ್ಟೋ ದಿನಗಳು ಆತಂಕದಲ್ಲೇ ಕಳೆದೆ. ನಾನೀ ಕೆಲಸ ಮಾಡಬಲ್ಲೆನೆ ಎಂಬ ಅಳುಕು ಕಾಡುತ್ತಿತ್ತು. ಆದರೆ, ಗೂಡಿನಲ್ಲಿ ಮರಿಗಳು ಚಿಂವ್‌ಗುಟ್ಟುತ್ತಿದ್ದವಲ್ಲ. ಮೊದಲ ಸಂಬಳ, 1500 ರೂ. ಕೈಗೆ ಬಂದಾಗ, ಅದನ್ನು ಹತ್ತಿಪ್ಪತ್ತು ಸಲ ತಿರುತಿರುಗಿಸಿ ಎಣಿಸಿ ನೋಡಿದ್ದೆ. ನನ್ನದು ಪರ್ಮನೆಂಟ್ ಕೆಲಸ ಅಲ್ಲ. ಆದರೆ, ಮಾಡುವ ಕೆಲಸದಲ್ಲಿ ತೃಪ್ತಿಯಿದೆ. ಇಂದು ಯಾರಿಗೂ ಅಂಜದೆ, ಯಾವ ಅಳುಕೂ ಇಲ್ಲದೆ ದುಡಿಯುತ್ತಿದ್ದೇನೆ.
ಅಂದು ಕೆಲಸ ನೀಡಿದ ನನ್ನ ಕನ್ನಡ ಉಪನ್ಯಾಸಕಿ ಡಾ. ಸುಶೀಲ ನೆಲ್ಲಿಸರ ಅವರನ್ನು ನೆನೆಯದ ದಿನವೇ ಇಲ್ಲ.
ಎಸ್. ಗುಣ, ಶಂಕರಘಟ್ಟ