ಬೆಂಗಳೂರು: ತಮಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ನೀಡುವ ವಿಚಾರ ನನಗೆ ಗೊತ್ತೇ ಇಲ್ಲ ಎಂದು ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನನಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ನೀಡುವ ವಿಚಾರಗೊತ್ತಿಲ್ಲ. ಆದರೆ, ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಇವತ್ತು ಇಡೀ ರಾಜ್ಯದಲ್ಲಿ ಉತ್ತಮ ರಸ್ತೆಗಳು ನಿರ್ಮಾಣ ಆಗಿದೆ ಎಂದರೆ ಅದು ನನ್ನ ಕಾಲದಲ್ಲಿ.
ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ನಾನು ಲೋಕೋಪಯೋಗಿ ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಆ ರಸ್ತೆಗಳೇ ನನ್ನ ಕೆಲಸವನ್ನು ಸಾರಿ ಹೇಳುತ್ತಿವೆ’ ಎಂದು ಮಹದೇವಪ್ಪ ಹೇಳಿದರು.
ಇದೇ ವೇಳೆ ಶಾಸಕ ಉಮೇಶ್ ಜಾಧವ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಮಹದೇವಪ್ಪ, ಜಾಧವ್ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ. ಖರ್ಗೆ ಅವರನ್ನು ಸೋಲಿಸಲು 50 ವರ್ಷದಿಂದ ಸಾಕಷ್ಟು ಜನ ಪ್ರಯತ್ನ ಮಾಡಿದ್ದಾರೆ. ಈಗಲೂ ಪ್ರಯತ್ನ ನಡೆಯುತ್ತಿದೆ.
ಖರ್ಗೆಯವರು ಉತ್ತಮ ಸಂಸದೀಯ ಪಟು. ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಕಟಿಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ. 371(ಜೆ) ಜಾರಿಗೆ ಅವರೇ ಕಾರಣ. ಈಗಲೂ ಕೇಂದ್ರ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದರು.