ಬೆಳಗಾವಿ : ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿಲ್ಲ, ಬಿಜೆಪಿಯವರು ಮಾಡಿದಷ್ಟು ದ್ವೇಷದ ರಾಜಕಾರಣ ನಾವು ಯಾರೂ ಮಾಡಿಲ್ಲ. ಅವರ ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ ಎಂದು ಶುಕ್ರವಾರ(ಸೆ20) ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ‘ಬಿಜೆಪಿಯವರು ಎಷ್ಟು ಜನಕ್ಕೆ ಕಿರುಕುಳ ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ಅವರ ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ. ನಾಲ್ಕು ವರ್ಷಗಳಿಂದ ನಾನು ಊರಿಗೆ ಮತ್ತು ಕ್ಷೇತ್ರಕ್ಕೆ ಹೋಗಿಲ್ಲ. ಜನರು ಇಲ್ಲಿಗೆ ಬಂದು ನನ್ನ ಮುಂದೆ ನಿಲ್ಲುವ ಪರಿಸ್ಥಿತಿ ಬಂದಿದೆ’ ಎಂದು ಆಕ್ರೋಶ ಹೊರ ಹಾಕಿದರು.
ಶಾಸಕ ಮುನಿರತ್ನ ಬಂಧನ ವಿಚಾರಕ್ಕೆ ಸಂಬಂದಿಸಿದಂತೆ ಪ್ರತಿಕ್ರಿಯಿಸಿ ‘ಅವರು ಯಾರೇ ಇರಲಿ ಅಷ್ಟು ಕೀಳಾಗಿ ಮಾತನಾಡಬಾರದು. ಅವರು ಮಾಡಿದ್ದು ತಪ್ಪು.ಮುನಿರತ್ನ ವಿಚಾರದಲ್ಲಿ ಯಾವ ರೀತಿಯ ದ್ವೇಷದ ರಾಜಕೀಯ ಆಗಿದೆ. ಅವರೇ ಮಾತನಾಡಿ ಇದನ್ನೆಲ್ಲ ಮಾಡಿಕೊಂಡಿದ್ದಾರೆ’ ಎಂದರು.
‘ರಾಜಕೀಯ ಸಂಪೂರ್ಣ ಕಮರ್ಷಿಯಲ್ ಆಗಿದೆ. ರಾಜಕಾರಣಿಗಳ ಜತೆಗೆ ಜನರೂ ಸಹ ಕಮರ್ಷಿಯಲ್ ಆಗಿದ್ದಾರೆ. ಹೀಗಾಗಿ ಸಂಪೂರ್ಣ ವ್ಯವಸ್ಥೆ ಕೆಟ್ಟು ಹೋಗಿದೆ. ಉತ್ತರ ಕರ್ನಾಟಕದಲ್ಲಿ ಜನರು ಮಾನ ಮರ್ಯಾದೆಗೆ ಅಂಜಿ ಬದುಕುತ್ತಾರೆ.ಬೆಂಗಳೂರು ಸಿಟಿಯಂತ ವ್ಯವಸ್ಥೆಯಲ್ಲಿ ಯಾರು ಎನು ಮಾಡ್ತಿದ್ದಾರೆ ಎನ್ನುವುದು ಗೊತ್ತಾಗುವದೇ ಇಲ್ಲ. ಒಳ್ಳೆಯವರು ಯಾರು ಕೆಟ್ಟವರು ಯಾರು ಎಂದು ನೋಡಿ ಜನ ಆಯ್ಕೆ ಮಾಡಬೇಕು’ ಎಂದರು.
”ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ನಮ್ಮ ಶಾಸಕರು ಧ್ವನಿ ಎತ್ತುತ್ತಿಲ್ಲ” ಎಂಬ ಕೂಡಲಸಂಗಮ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ”ಮುಖ್ಯಮಂತ್ರಿಗಳಿಗೆ ನಾವು ನಾಲ್ಕೈದು ಬಾರಿ ಕೇಳಿಕೊಂಡಿದ್ದೆವು. ಅವರೂ ಸಹ ನಮಗೆ ಸಮಯ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಹಲವಾರು ಗದ್ದಲಗಳು ನಡೆದಿದ್ದರಿಂದ ನಮಗೆ ಸಮಯ ಸಿಕ್ಕಿಲ್ಲ. ಇನ್ನೊಂದು ವಾರ ಬಿಟ್ಟು ಸ್ವಾಮೀಜಿಯವರನ್ನು ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿಸುತ್ತೇವೆ” ಎಂದರು.