Advertisement
ದಂಡಕಾರಣ್ಯವಾಸಿಗಳಾದ ಋಷಿಮುನಿಗಳು ಸೇರಿದ್ದ ಸಭೆಯಲ್ಲಿ ರಾಮ ತನ್ನ ಸ್ವಭಾವ- ಬದ್ಧತೆ- ಕಾಳಜಿಗಳಿಗೆ ಅನುಗುಣವಾಗಿ ಋಷಿಗಳಿಗೆ ರಕ್ಷಣೆಯ ವಚನವಿತ್ತ; “ಎಲ್ಲಿ ಸಜ್ಜನರಿಗೆ, ದೀನರಿಗೆ, ಮಹಿಳೆಯರಿಗೆ, ಗೋವುಗಳಿಗೆ, ಪ್ರಕೃತಿ ಸಂಪತ್ತಿಗೆ ರಕ್ಷಣೆ ಇರುವುದಿಲ್ಲವೋ, ಎಲ್ಲಿ ನ್ಯಾಯ- ನೀತಿ- ಧರ್ಮಪಾಲನೆಯಾಗುವುದಿಲ್ಲವೋ ಅದು ಜವಾಬ್ದಾರಿಯುತ ರಾಷ್ಟ್ರವಾಗುವುದಿಲ್ಲ. ನನ್ನ ಬದುಕು ಪ್ರಜಾಕ್ಷೇಮಕ್ಕೆ ಅರ್ಪಿತ’ ಎಂದು ಘೋಷಿಸಿದ.
Related Articles
Advertisement
ಪಂಚವಟಿಯಂಥ ಸ್ವರ್ಗ ಬಿಟ್ಟು ರಾಕ್ಷಸನೊಬ್ಬ ನಿರ್ಮಿಸಿದ್ದ ನರಕಕ್ಕೆ ವಿಧಿ ನನ್ನನ್ನು ಎಸೆದಿತ್ತು! ಉದ್ದೇಶಪೂರ್ವಕ ರಾಕ್ಷಸ ನಿರ್ಮಿತ ಎಂದಿದ್ದೇನೆ… ಲಂಕೆ ಪವಿತ್ರ, ಸುಂದರ, ಸುರಕ್ಷಿತ ದ್ವೀಪ. ಅದನ್ನು ಹಾಗೆ ಕುಲಗೆಡಿಸಿದ್ದು, ಅದಕ್ಕೆ ಕಪ್ಪುಚುಕ್ಕೆ ಅಂಟಿಸಿದ್ದು, ಅಲ್ಲಿ ರಕ್ತಸಿಕ್ತ ಚರಿತ್ರೆ ಬರೆದದ್ದು, ಕೊಳಕು ಮನಸ್ಸಿನ, ಕೊಳಕು ಆಲೋಚನೆಯ ಆ ಹತ್ತು ತಲೆಯ ದುರುಳ.
ರಾಜ ಯೋಗ್ಯನಾದರೆ ರಾಜ್ಯವೂ ಯೋಗ್ಯ. ರಾಜ್ಯ ಯೋಗ್ಯವಾಗಲು ಹತ್ತು ತಲೆಗಳೇನೂ ಬೇಕಿಲ್ಲ. ವಿವೇಕಿಯಾದರೆ ಒಂದೇ ತಲೆಯಿಂದ ಹತ್ತು ಮೆದುಳಿನ, ಅಷ್ಟೇ ಏಕೆ ನೂರು ಮೆದುಳಿನ ಕೆಲಸ ಮಾಡುತ್ತಾನೆ. ಇರುವ ಎರಡೇ ಕೈಗಳನ್ನು ಶುದ್ಧವಾಗಿಟ್ಟುಕೊಂಡರೆ ಸಾಕು. ಇಪ್ಪತ್ತು ತೋಳುಗಳೇಕೆ ಬೇಕು? ಕಿರೀಟ ಹೊತ್ತವರೆಲ್ಲ ರಾಜರಾಗುವುದಿಲ್ಲ.
ಹತ್ತು ತಲೆಯ ಮಹಾಪಂಡಿತ, ಮಹಾ ಶಿವಭಕ್ತ ಮಾಡಿದ್ದೆಲ್ಲ ತಾನೂ ಹಾಳಾಗಿ ಮನೆಯನ್ನೂ ಹಾಳು ಮಾಡುವ ಕೆಲಸವನ್ನೇ. ಇಂಥವರ ದೈವಭಕ್ತಿ, ಪಾಂಡಿತ್ಯಕ್ಕೆ ಯಾವ ಬೆಲೆ? ಅದಕ್ಕಾಗಿಯೇ ನನ್ನವರು ಈತನನ್ನು ನೋಡಿ ಉದ್ಗರಿಸಿದ್ದು… ಇವನ ತೇಜಸ್ಸು, ಪರಾಕ್ರಮ, ಇವನಲ್ಲಿರುವ ಸಂಪತ್ತು, ಇವನ ಬುದ್ಧಿವಂತಿಕೆ ಸನ್ಮಾರ್ಗದಲ್ಲಿ ಪ್ರವಹಿಸಿದ್ದರೆ ಈತ ಲೋಕಕಂಟಕನಾಗುವುದರ ಬದಲು ಲೋಕಪೂಜ್ಯನಾಗಿರುತ್ತಿದ್ದನಲ್ಲಾ! ವಿನಾಶದಿಂದ ಪಾರಾಗುವ ಅವಕಾಶವನ್ನು ರಾಮ ಆ ಮೂರ್ಖನಿಗೆ ಅಂತಿಮ ಕ್ಷಣದಲ್ಲೂ ನೀಡಿದ್ದ! ಸೀತೆಯನ್ನು ನನಗೊಪ್ಪಿಸಿ ಶರಣಾಗು. ನೀನೂ ಬದುಕಿಕೋ, ನಿನ್ನವರನ್ನೂ ಬದುಕಿಸಿಕೋ ಎಂದಿದ್ದ. ಈ ಮಾತು ಕೇಳಿದ ಸುಗ್ರೀವಾದಿಗಳು ತಬ್ಬಿಬ್ಬು. ಆಗ ರಾಮ ಹೇಳಿದನಂತೆ- ಹೌದು, ಅವನೇ ರಾಮ!
ಆ ದುರಾತ್ಮ ಹುಟ್ಟಿದಾಕ್ಷಣ, ಬಿಟ್ಟ ಬಾಯಿಗೆ ಅವರಮ್ಮನೇ ಬೆದರಿಹೋಗಿದ್ದರಂತೆ. ಅದಕ್ಕಾಗಿ ಆ ಹೆಸರಂತೆ. ಹೆಸರಿಗೆ ತಕ್ಕ ವರ್ತನೆ. ಲೋಕವನ್ನು ಭಯಪಡಿಸಿ ತಾನು ಸುಖವಾಗಿರಬಹುದೆಂಬ ಭ್ರಮೆ. ರಾಜನಾದವನು ಲೋಕವನ್ನು ಹೆದರಿಸುವುದಲ್ಲ. ಲೋಕಕ್ಕೆ ಹೆದರಬೇಕು! ಪಾಪದ ಕೊಡ ತುಳುಕಲು ಇನ್ನೇನು ಬೇಕು? “ವಿನಾಶಕಾಲೇ ವಿಪರೀತ ಬುದ್ಧಿ. ಈ ದುರಾತ್ಮನ ಕಣ್ಣು ಧರ್ಮಾತ್ಮನಾದ ರಾಮನ ಮಡದಿಯ (ನನ್ನ) ಮೇಲೆ ಯಾವಾಗ ಬಿತ್ತೋ; ಮೊದಲೇ ಕತ್ತಲೆ ಆವರಿಸಿದ್ದ ಲಂಕೆಗೆ, ಅಲ್ಪಸ್ವಲ್ಪ ನಕ್ಷತ್ರದ ಬೆಳಕೂ ಇಲ್ಲದ ನಿತ್ಯ ಅಮಾವಾಸ್ಯೆ ಪ್ರಾರಂಭವಾಯಿತು! ರಾಮನ ಮಡದಿಯೆಂಬುದು ಇಲ್ಲಿ ಸಂಕೇತವಷ್ಟೆ. ಯಾರೇ ಒಬ್ಬ ಪರಸ್ತ್ರೀಯನ್ನು ಮೋಹಿಸಿದರೆ ಅದಕ್ಕೆ ತಕ್ಕ ಬೆಲೆ ತೆರಲೇಬೇಕು. ಒಬ್ಬ ರಾಜನಾಗಿ ಇಂಥ ಕೃತ್ಯಕ್ಕಿಳಿದರೆ?
ನನ್ನ ದುರದೃಷ್ಟಕ್ಕೆ ಯಾರನ್ನು ಹೊಣೆ ಮಾಡಲಿ? ದೈವವೇ, ಅವಿವೇಕವೇ, ಭ್ರಮೆಯೇ? ದುರಾಸೆಯೇ? ಮಾಯಾಮೃಗದ ಪ್ರಕರಣ ನಡೆಯದಂತೆ ತಡೆಯಲು ಎಷ್ಟೊಂದು ಅವಕಾಶಗಳಿದ್ದವು. ಅವುಗಳನ್ನೆಲ್ಲ ಮೀರಿ ಮಾಯೆ ಗೆದ್ದು ಬಿಟ್ಟಿತು. ಚಿನ್ನದ ಜಿಂಕೆ (ಸಹಜವೋ? ಲೇಪವೋ?) ಇರಲು ಸಾಧ್ಯವೇ? ಸಹಜ- ಅಸಹಜಗಳ ನಡುವೆ ಸಣ್ಣ ಗೆರೆಯಾದರೂ ನನ್ನ ಬುದ್ಧಿಗೆ ಹೊಳೆಯಬಾರದಿತ್ತೆ? ನಾನೆಂಥ ಮಂಕುದಿಣ್ಣೆಯಾದೆ. ರಾಮ -ಲಕ್ಷ್ಮಣರ ಹಿತಮಾತುಗಳಿಗೂ ಕಿವಿ ಮುಚ್ಚಿಬಿಟ್ಟೆನಲ್ಲ.
ಹತ್ತು ತಲೆಯ ಅವಿವೇಕಿಗೆ ಶೂರ್ಪನಖೀ ಎಂಬ ಹೀನ ಹೆಂಗಸು ಮಾಯೆಯಾಗಿ ಕಾಡಿದಳು. ಆತ ಮಾರೀಚನಿಗೆ ಮಾಯೆಯಾದ. ಮಾರೀಚ ಮೃಗವಾಗಿ ನನ್ನನ್ನು ಕಾಡಿದ. ನಾನು ಮೃಗಕ್ಕಾಗಿ ರಾಮನನ್ನು ಕಾಡಿದೆ. ಕೊನೆಗೆ ಮಾತಿನ ಮೊನೆಯಲ್ಲಿ ಲಕ್ಷ್ಮಣನನ್ನೂ ಕಾಡಿದೆ. ಈ ಕಾಡುವ ಆಟ ಮುಗಿಯುವ ಹೊತ್ತಿಗೆ ನಾನು ರಾಕ್ಷಸರಾಜನ ನರಕದಲ್ಲಿ ಬಿದ್ದಿದ್ದೆ. ಯಾರೂ ನಿರೀಕ್ಷಿಸದ ದುರ್ಘಟನೆ ನಡೆದುಹೋಯಿತು. ರಾಮನಿಂದ ಪೆಟ್ಟುತಿಂದ ಮೇಲೆ ಮಾರೀಚ ಬದಲಾಗಿದ್ದ. ಎಲ್ಲೆಲ್ಲೂ ರಾಮನನ್ನೇ ಕಾಣುತ್ತಿದ್ದನಂತೆ. ಭಕ್ತನೂ ಭಗವಂತನನ್ನು ವಂಚಿಸಿಬಿಡುವುದಿದೆಯಾ? ಆತ ರಾವಣನ ಖಡ್ಗಕ್ಕೆ ತುತ್ತಾಗಿದ್ದರೆ ನನ್ನ ದುರಂತ ತಪ್ಪುತ್ತಿತ್ತೇನೋ? ನಾನು ನಿಜಕ್ಕೂ ಅಷ್ಟು ಸುಂದರಿನಾ? ನನಗಂತೂ ಹಾಗನ್ನಿಸಿದ್ದಿಲ್ಲ.
ಈಗ ಎಷ್ಟು ಅಳೆದು ಸುರಿದರೇನು? ಪಂಚವಟಿಯ ಪರ್ಣಕುಟಿಯಲ್ಲಿದ್ದಾಗಲೇ, ವಿಧಿ ನನಗೆ ಮೋಸಮಾಡಲು ಹೆಣ್ಣಿನ ರೂಪದಲ್ಲಿ ಮುನ್ನುಡಿ ಬರೆದಿತ್ತು! ಹೆಣ್ಣೇ ಹೆಣ್ಣಿಗೆ ಶತ್ರುವಾದಳಾ? ಹಾಗೂ ಹೇಳಲಾಗದೇನೋ! ಶತ್ರುವಿನ ರಾಜ್ಯದಲ್ಲಿ ಮೂವರು ಹೆಂಗಸರೇ ನನಗೆ ಧೈರ್ಯ ಕೊಟ್ಟವರಲ್ಲವೇ? ವಿಷದ ನಾಡಿನಲ್ಲೂ ಅಮೃತವಿದೆಯಲ್ಲಾ!
ಮುಂದಿನ ವಾರ ಕೊನೆಯ ಕಂತು
ಸಿ.ಎ. ಭಾಸ್ಕರ ಭಟ್ಟ,