ಮಂಡ್ಯ: ನಾನು ಬಿಜೆಪಿ ಸೇರೋದಿಲ್ಲ. ನಾನು ಬಿಜೆಪಿ ಸೇರುತ್ತೇನೆ ಎನ್ನುವುದು ಕೇವಲ ಊಹಾಪೋಹ ಎಂದು ಮಂಡ್ಯ ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದರು. ನಗರದ ಗುತ್ತಲು ಬಡಾವಣೆಯ ಕಾಂಗ್ರೆಸ್ ಮುಖಂಡ ಮುನಾವರ್ ಖಾನ್ ನಿವಾಸದಲ್ಲಿ ನಡೆದ ಮುಸಲ್ಮಾನರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸೇರಿ ಎಂದು ಸುಮಲತಾ ಅವರನ್ನು ಒತ್ತಾಯಿಸಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಗೆದ್ದ ಮೇಳೆ ಬಿಜೆಪಿ ಸೇರೋದು ಬಿಡೋದು ಅವರ ವಿವೇಚನೆಗೆ ಬಿಟ್ಟಿದ್ದು ಅಂತಲೂ ಅವರು ಹೇಳಿದ್ದಾರೆ. ಮಂಡ್ಯದ ರಾಜಕೀಯ ಬೆಳವಣಿಗೆಗಳನ್ನು ನೋಡಿ ಬಿಜೆಪಿ ನನಗೆ ಯಾವುದೇ ಷರತ್ತಿಲ್ಲದೆ ಬೆಂಬಲ ನೀಡಿದೆ.
ಬಿಜೆಪಿಗೆ ಹೋಗಬೇಕಿದ್ದರೆ ಈಗಲೇ ಹೋಗುತ್ತಿದ್ದೆ ಎಂದು ಹೇಳಿದರು. ನನ್ನ ಮೊದಲ ಆದ್ಯತೆ ಕಾಂಗ್ರೆಸ್ ಆಗಿತ್ತು. ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ. ಅದಕ್ಕೆ ಪಕ್ಷೇತರರಾಗಿ ಸ್ಪರ್ಧಿಸುವುದು ಅನಿವಾರ್ಯವಾಯಿತು. ನನಗೆ ಅಧಿಕಾರದ ಆಸೆ ಇಲ್ಲ. ಆ ಆಸೆ ಇದ್ದಿದ್ದರೆ ಕೊಟ್ಟ ಆಫರ್‌ಗಳನ್ನೇ ಒಪ್ಪಿಕೊಳ್ಳುತ್ತಿದ್ದೆ. ಮುಂದೆ ಏನೇ ನಿರ್ಧಾರ ಮಾಡಿದರೂ ನಿಮ್ಮನ್ನು ಕೇಳಿ ಮಾಡುತ್ತೇನೆ ಎಂದು ಉರ್ದುವಿನಲ್ಲೇ ಮುಸಲ್ಮಾನರಿಗೆ ಸುಮಲತಾ ಮನವರಿಕೆ ಮಾಡಿಕೊಟ್ಟರು.
ಡ್ರಾಮಾ ಕಂಪನಿ:
ಸುಮಲತಾ
ನಮ್ಮ ಟೂರಿಂಗ್ ಟಾಕೀಸ್ ಖಾಲಿ ಆಗುತ್ತಾ ಅಥವಾ ಜೆಡಿಎಸ್‌ನ ಡ್ರಾಮಾ ಕಂಪನಿ ಖಾಲಿ ಆಗುತ್ತಾ ಎಂದು ಚುನಾವಣಾ ಫಲಿತಾಂಶದ ನಂತರ ನೋಡೋಣ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಸುಮಲತಾ ಅಂಬರೀಶ್ ನಾವೆಲ್ಲರೂ ದೇವೇಗೌಡರ ಕೃಪಾಪೋಷಿತ ನಾಟಕ ಮಂಡಳಿಯವರು ಎಂದಿದ್ದ ಸಂಸದ ಶಿವರಾಮೇಗೌಡರಿಗೆ ಟಾಂಗ್ ನೀಡಿದರು. ನಾವಿಲ್ಲಿಗೆ ಸಿನಿಮಾ ಮಾಡಲು ಬಂದಿಲ್ಲ. ಜನರ ಒತ್ತಾಸೆ ಮೇಲೆ ರಾಜಕಾರಣ ಮಾಡಲು ಬಂದಿದ್ದೇವೆ. ಒಳ್ಳೆಯ ರಾಜಕಾರಣ ಮಾಡುವುದು ನಮ್ಮ ಉದ್ದೇಶ. ಒಳ್ಳೆಯ ರಾಜಕಾರಣವನ್ನು ಜನ ಬೆಂಬಲಿಸುತ್ತಾರೆ. ಗೌರವಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.
ಅಣ್ಣ ನಮ್ಮೋನಾದರೂ ಅತ್ತಿಗೆ ನಮ್ಮೋಳ ಎಂಬ ಟ್ರೋಲ್ ವಿಚಾರವಾಗಿ ಸೋಷಿಯಲ್ ಮೀಡಿಯಾ ದಲ್ಲಿ ಬರೋದಕ್ಕೆಲ್ಲಾ ತಲೆಕೆಡಿಸಿಕೊಳ್ಳಬಾರದು ಎಂದ ಸುಮಲತಾ, ಐಟಿ ರೇಡ್‌ನ್ನು ನಾನೇ ಮಾಡಿಸಿದ್ದು ಎನ್ನುತ್ತಾರೆ. ಈಗ ಜಾಹೀರಾತು ಮುಖಾಂತರ ಮತದಾರರ ಸೆಳೆಯು ತ್ತೇನೆ ನ್ನುತ್ತಾರೆ. ನಾನು ಇನ್ನೂ ಸಂಸದೆಯೇ ಆಗಿಲ್ಲ. ಆಗಲೇ ಎಲ್ಲಿಂದ ಬಂತು ಈ ರೀತಿಯ ಪವರ್. ನನಗೆ ಈ ಪವರ್ ನೀಡಿದ ಜೆಡಿಎಸ್‌ಗೆ ಥ್ಯಾಂಕ್ಸ್ ಹೇಳುತ್ತೇನೆ ಎಂದರು.