Advertisement

ನಾನು ಹುಲಿ-ಸಿಂಹ ಅಲ್ಲವೇ ಅಲ್ಲ, ಜನರ ಸೇವಕ; ರೇಣುಕಾಚಾರ್ಯ

05:59 PM Jul 25, 2022 | Team Udayavani |

ಹೊನ್ನಾಳಿ: ನಾನು ಹುಲಿನೂ ಅಲ್ಲ, ಸಿಂಹವೂ ಅಲ್ಲ. ಅವಳಿ ತಾಲೂಕಿನ ಜನರ ಸೇವಕ. ಕೊನೆ ಉಸಿರಿರುವವರೆಗೂ ಜನಸೇವಕನಾಗಿಯೇ ಇರುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ನ್ಯಾಮತಿ ತಾಲೂಕಿನ ಕುಂಕುವ ಗ್ರಾಮದಲ್ಲಿ ನಡೆದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನ ಜನರು ಹಾಗೂ ರಾಜ್ಯದ ವಿವಿಧೆಡೆ ನನ್ನನ್ನು ಹುಲಿ, ಸಿಂಹ ಎಂದು ಸಂಬೋಧಿ ಸುತ್ತಾರೆ. ನಾನು ಹುಲಿ, ಸಿಂಹ ಯಾವುದೂ ಅಲ್ಲ. ನನ್ನ ಕ್ಷೇತ್ರದ ಜನರ ಆಶೀರ್ವಾದ ಪಡೆದಿರುವ ಒಬ್ಬ ಸಾಮಾನ್ಯ ಜನಸೇವಕ ಎಂದರು.

“ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. ಅಧಿ ಕಾರಿಗಳು ಎಸಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಬದಲು ಜನರ ಮನೆಬಾಗಿಲಿಗೆ ಬಂದು ಅವರ ಕಷ್ಟ ಆಲಿಸಿ ಕೇಳಿ ಸ್ಥಳದಲ್ಲೇ ಅವುಗಳಿಗೆ ಪರಿಹಾರ ನೀಡುವ ಮೂಲಕ ಜನರು ಸರ್ಕಾರಿ ಕಚೇರಿ ಅಲೆಯುವುದನ್ನು ತಪ್ಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸಾಮಾನ್ಯ ಶಿಕ್ಷಕನ ಮಗನನ್ನು ಅವಳಿ ತಾಲೂಕಿನ ಜನರು ಮೂರು ಬಾರಿ ಶಾಸಕನ್ನಾಗಿ ಮಾಡಿದ್ದೀರಿ. ನಾನು ಅವಳಿ ತಾಲೂಕಿನ ಅಭಿವೃದ್ಧಿಗೆ ಹಿಂದೆ ಏನು ಕೆಲಸ ಮಾಡಿದ್ದೇನೆ, ಮುಂದೆ ಏನು ಕೆಲಸ ಮಾಡಬೇಕೆಂದು ನಾನು ಗುರಿ ಹೊಂದಿದ್ದೇನೆ. ನನಗೆ ಓಟು ಹಾಕಿದ್ದು ಮನೆಯಲ್ಲಿ ಆರಾಮಾಗಿರಲು ಅಲ್ಲ. ನಾನು ಹಾಗೆ ಮಾಡಿದರೆ ಮತದಾರರಿಗೆ ದ್ರೋಹ ಮಾಡಿದಂತೆ ಎಂದರು.

ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಅವಳಿ ತಾಲೂಕಿನಾದ್ಯಂತ 4162.5 ಎಕರೆ ಬೆಳೆ ನಷ್ಟ ಉಂಟಾಗಿದ್ದು, ಸೋಮವಾರ ಅಧಿಕಾರಿಗಳ ಸಭೆ ಕರೆದಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬೆಳೆ ಕಳೆದುಕೊಂಡವರಿಗೆ, ಮನೆ ಹಾನಿಯಾದವರಿಗೆ ಸೂಕ್ತ ಪರಿಹಾರ ಕೊಡಿಸುತ್ತೇನೆ. ನ್ಯಾಮತಿ ಪಟ್ಟಣದಲ್ಲಿ ನಾಲ್ಕು ರಸ್ತೆಗಳ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಸುಂದರವಾದ ಅಲಂಕಾರಿಕ ವಿದ್ಯುತ್‌ ದೀಪ ಅಳವಡಿಸುವ ಮೂಲಕ
ನ್ಯಾಮತಿಯನ್ನು ಸುಂದರ ಪಟ್ಟಣವನ್ನಾಗಿಸುವುದು ನನ್ನ ಗುರಿ ಎಂದರು.

Advertisement

ಅದ್ಧೂರಿ ಮೆರವಣಿಗೆ: “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಆಗಮಿಸುತ್ತಿದ್ದಂತೆ ಅವರನ್ನು ಎತ್ತಿನಗಾಡಿಯಲ್ಲಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಮೆರವಣಿಗೆಯಲ್ಲಿ 200 ಜನ ಮಹಿಳೆಯರು ಪೂರ್ಣಕುಂಭದೊಂದಿಗೆ ಶಾಸಕರನ್ನು ಸ್ವಾಗತಿಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಾಂಡಾಗಳು ಗಮನ ಸೆಳೆದವು.

ಕಾರ್ಯಕ್ರಮದಲ್ಲಿ 70 ಜನ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಾಲತ್ತುಗಳನ್ನು ವಿತರಿಸಲಾಯಿತು. ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಶೀಲ್ದಾರ್‌ ರೇಣುಕಾ, ತಾಪಂ ಇಒ ರಾಮಾ ಬೋವಿ, ಪಿಎಸ್‌ಐ ರಮೇಶ್‌ ಸೇರಿದಂತೆ ವಿವಿಧ ಇಲಾಖೆ ಅಧಿ ಕಾರಿಗಳು ಇದ್ದರು.

ರೇಣುಕಾಚಾರ್ಯನಿಗೆ ಅವಳಿ ತಾಲೂಕಿನ ಜನರು ಡಬಲ್‌ ಗುಂಡಿಗೆ ಕೊಟ್ಟಿದ್ದಾರೆ. ಅವಳಿ ತಾಲೂಕಿನ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಬಳಿ, ಸಚಿವರ ಬಳಿ ಜಗಳವಾಡಿ ಅನುದಾನ ಕೇಳುವ ಶಕ್ತಿ ಕೊಟ್ಟಿದ್ದೀರಿ, ನಾನು ಮುಖ್ಯಮಂತ್ರಿಗಳ ಬಳಿ ನನಗೆ ಮಂತ್ರಿ ಸ್ಥಾನ ಬೇಡ, ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಡಿ ಕೇಳಿದ್ದೇನೆ.
ಎಂ.ಪಿ. ರೇಣುಕಾಚಾರ್ಯ
ಸಿಎಂ ರಾಜಕೀಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next