Advertisement

ಕಚೇರಿ ಮುಂದೆ ಹೈಡ್ರಾಮಾ! ವಿಷದ ಬಾಟಲಿ ಹಿಡಿದು ಕಾರ್ಯಕರ್ತರ ಪ್ರತಿಭಟನೆ

01:06 AM Apr 04, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಇದುವರೆಗೆ ಶೀತಲ ಸಮರಕ್ಕೆ ಸೀಮಿತವಾಗಿದ್ದ ಟಿಕೆಟ್‌ ಫೈಟ್‌ ಈಗ ಸ್ಫೋಟಗೊಂಡಿದೆ. ವಲಸಿಗರಿಗೆ ಹಾಕುತ್ತಿರುವ ಮಣೆ ಪಕ್ಷದಲ್ಲಿನ ಮೂಲವಾಸಿಗಳನ್ನು ಕಂಗೆಡಿಸಿದ್ದು, ಸೋಮವಾರ ತೀವ್ರ ಸ್ವರೂಪ ಪಡೆದು ಕೆಪಿಸಿಸಿ ಕಚೇರಿ ಆವರಣದಲ್ಲಿ ಹೈಡ್ರಾಮಾ ನಡೆಯಿತು. ತರೀಕೆರೆ ಗೋಪಿಕೃಷ್ಣ ಬೆಂಬಲಿಗ ಕಾರ್ಯಕರ್ತರು ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದರು.

Advertisement

2 ದಿನಗಳ ಹಿಂದೆಯಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿಯ ಎನ್‌.ವೈ. ಗೋಪಾಲಕೃಷ್ಣ ಅಧಿಕೃತವಾಗಿ ಕಾಂಗ್ರೆಸ್‌ ಸೇರಲಿರುವ ಸುದ್ದಿ ತಿಳಿದು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮೊಳಕಾಲ್ಮೂರು ಕಾಂಗ್ರೆಸ್‌ ಕಾರ್ಯಕರ್ತರು ಕಚೇರಿಗೆ ಮುಗಿಬಿದ್ದರು. ವಲಸಿಗರಿಗೆ ಮಣೆ ಹಾಕಬಾರದು. ತಮ್ಮ ನಾಯಕರಿಗೇ ಟಿಕೆಟ್‌ ನೀಡಬೇಕೆಂದು ಆಗ್ರಹಿಸಿದರು.

ಇಡೀ ಆಕ್ರೋಶದ ಕೇಂದ್ರ ಬಿಂದುಗಳು ಕಾಂಗ್ರೆಸ್‌ ಸೇರಿದ ಎನ್‌.ವೈ. ಗೋಪಾಲಕೃಷ್ಣ ಹಾಗೂ ತರೀಕೆರೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಗೋಪಿಕೃಷ್ಣ. ಒಂದು ಕಡೆಯಲ್ಲಿ ಗೋಪಾಲಕೃಷ್ಣಗೆ ಟಿಕೆಟ್‌ ನೀಡ ಬಾರದು ಎಂಬುದು ಮೊಳಕಾಲ್ಮೂರು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಯಾಗಿದ್ದ ಯೋಗೀಶ್‌ ಬಾಬು ಬೆಂಬಲಿಗರ ಹೋರಾಟ. ಇನ್ನೊಂದೆಡೆ ತರೀಕೆರೆಗೆ ಗೋಪಿಕೃಷ್ಣಗೆ ಟಿಕೆಟ್‌ ನೀಡಬೇಕೆಂಬುದು ಅವರ ಬೆಂಬಲಿಗರ ಬೇಡಿಕೆ. ಎರಡೂ ತಂಡಗಳು ಏಕಕಾಲಕ್ಕೆ ಕೆಪಿಸಿಸಿ ಕಚೇರಿ ಮುಂದೆ ಸೇರಿ ದೊಡ್ಡ ಹೈಡ್ರಾಮಾವನ್ನು ಸೃಷ್ಟಿಸಿದವು. ತಮ್ಮ ತಮ್ಮ ನಾಯಕರ ಪರವಾಗಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದವು.

ಪ್ರವೇಶಕ್ಕೂ ಅಡ್ಡಿ
ಕಚೇರಿ ಮುಂದೆ ಜಮಾಯಿಸಿದ ಬೆಂಬಲಿಗರು, ಗೋಪಾಲ ಕೃಷ್ಣ ಪ್ರವೇಶಕ್ಕೆ ಅಡ್ಡಿಪಡಿಸಿದರು. ಇದೇ ವೇಳೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಮತ್ತಿತರ ನಾಯಕರು ಆಗಮಿಸಿದರು. ಆಗ ಮಧ್ಯಪ್ರವೇಶಿಸಿದ ಪೊಲೀಸರು, ಬ್ಯಾರಿಕೇಡ್‌ಗಳನ್ನು ಹಾಕಿ ಇವರ ಪ್ರವೇಶಕ್ಕೆ ದಾರಿ ಮಾಡಿಕೊಟ್ಟರು. ಅದೇ ಮಾರ್ಗದಲ್ಲಿ ಗೋಪಾಲಕೃಷ್ಣ ಕೂಡ ನುಸುಳಿದರು.

ಆಗ ವಿಷ ಸೇವಿಸುವ ಯತ್ನವೂ ನಡೆಯಿತು. ಪೊಲೀಸರು ಧಾವಿಸಿ ವಿಷದ ಬಾಟಲಿ ಕಸಿಯಲೆತ್ನಿಸಿದರು. ಇದರಿಂದ ಪರಿಸ್ಥಿತಿ ಗೊಂದಲದ ಗೂಡಾ ಯಿತು. ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದರು. ಎರಡೂ ಕ್ಷೇತ್ರಗಳ ಬೆಂಬಲಿಗರು ತಮ್ಮ ನಾಯಕರ ಪರ ಘೋಷಣೆ ಕೂಗಿದರು. ಹಲವು ವರ್ಷಗಳಿಂದ ಕಾಂಗ್ರೆಸ್‌ಗಾಗಿ ನಾಯಕರು ಶ್ರಮಿಸಿದ್ದಾರೆ. ಪಕ್ಷದಿಂದ ಹೊರಗೆ ಹೋಗಿ ವಾಪಸ್‌ ಬಂದವರಿಗೆ ಈಗ ಟಿಕೆಟ್‌ ನೀಡಲು ಮುಂದಾಗಿರುವುದು ಸರಿ ಅಲ್ಲ. ನಮ್ಮ ನಾಯಕರಿಗೇ ಟಿಕೆಟ್‌ ನೀಡಬೇಕು. ಇಲ್ಲದಿದ್ದರೆ ವಿಷ ಸೇವನೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ವಲಸಿಗರಿಗೆ ಮಣೆ ಹಾಕಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ಗದ್ದಲದ ನಡುವೆಯೇ ಎನ್‌.ವೈ. ಗೋಪಾಲಕೃಷ್ಣ ಅವರಿಗೆ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ಕಾರ್ಯಕ್ರಮದ ಅನಂತರ ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ಕಾರಿಗೂ ಮುತ್ತಿಗೆ ಹಾಕಲು ಬೆಂಬಲಿಗರು ಯತ್ನಿಸಿದರು.

ಭರವಸೆ ನೀಡಿಲ್ಲ; ಡಿಕೆಶಿ ಸ್ಪಷ್ಟನೆ
ಇದಕ್ಕೂ ಮುನ್ನ ಮಾತನಾಡಿದ ಡಿ.ಕೆ. ಶಿವಕುಮಾರ್‌, ನಾವು ಯಾರಿಗೂ ಯಾವುದೇ ರೀತಿಯ ಭರವಸೆ ನೀಡಿಲ್ಲ. ಆದರೂ ಪಕ್ಷ ಸೇರಲು ಅಪಾರ ಬೇಡಿಕೆ ಇದೆ. ನಾವು ಎಲ್ಲರ ಹೆಸರು ಪರಿಶೀಲಿಸಿ, ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಿದ್ದರೆ ಸೇರಿಸಿಕೊಳ್ಳುತ್ತೇವೆ. ಗೋಪಾಲಕೃಷ್ಣ ಅವರಂತಹ ನಾಯಕರು ಕಾರ್ಯಕರ್ತರಾಗಿ ದುಡಿಯಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಅವರು ಟಿಕೆಟ್‌ಗೆ ಅರ್ಜಿ ಹಾಕಿದರೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಾವು ಯಾರಿಗೂ ಯಾವುದೇ ರೀತಿಯ ಭರ ವಸೆ ನೀಡಿಲ್ಲ. ಆದರೂ ನಮ್ಮ ಪಕ್ಷ ಸೇರಲು ಅಪಾರ ಬೇಡಿಕೆ ಇದೆ. ಅವರು ಟಿಕೆಟ್‌ಗೆ ಅರ್ಜಿ ಹಾಕಿ ದರೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗು ವುದು.
– ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಇಲ್ಲಿ (ಕೆಪಿಸಿಸಿ ಕಚೇರಿ)ಗೆ ಬಂದು ನನ್ನನ್ನು ವಿರೋಧಿಸುತ್ತಿರುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಆದರೆ ಕ್ಷೇತ್ರದಲ್ಲಿ ಲಕ್ಷಾಂತರ ಜನ ನನ್ನನ್ನು ಬೆಂಬಲಿಸುವುದರ ಜತೆಗೆ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದಾರೆ.
– ಎನ್‌.ವೈ. ಗೋಪಾಲಕೃಷ್ಣ , ಮಾಜಿ ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next