Advertisement

ಚೊಚ್ಚಲ ಹೈದರಾಬಾದ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ ರದ್ದು

03:07 AM Jun 06, 2020 | Hari Prasad |

ಹೈದರಾಬಾದ್‌: ಭಾರೀ ನಿರೀಕ್ಷೆ ಮೂಡಿಸಿದ್ದ 90 ಸಾವಿರ ಡಾಲರ್‌ ಬಹುಮಾನ ಮೊತ್ತದ ಚೊಚ್ಚಲ ಹೈದರಾಬಾದ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ ಕೋವಿಡ್‌ಗೆ ಬಲಿಯಾಗಿದೆ.

Advertisement

ಆ. 11ರಿಂದ 16ರ ತನಕ ನಡೆಯಬೇಕಿದ್ದ ‘ಸೂಪರ್‌ 100’ ಮಾದರಿಯ ಈ ಕೂಟವನ್ನು ರದ್ದುಗೊಳಿಸಿದ್ದಾಗಿ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್‌ (ಬಿಡಬ್ಲ್ಯುಎಫ್‌) ತಿಳಿಸಿದೆ. ಭಾರತೀಯ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ನ (ಬಿಎಐ) ನಿರ್ದೇಶನದ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದೆ.

ಆರೋಗ್ಯ, ಸುರಕ್ಷತೆ ಮತ್ತು ಸಂಚಾರ ನಿರ್ಬಂಧ ದೇಶದಿಂದ ದೇಶಕ್ಕೆ ಭಿನ್ನವಾಗಿವೆ. ಕೆಲವು ದೇಶಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ ಆದರೆ ಹೈದರಾಬಾದ್‌ನಲ್ಲಿ ಈಗಲೂ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಮತ್ತು ಕ್ರೀಡಾ ಸೌಕರ್ಯಗಳ ಬಳಕೆಗೆ ಕೇಂದ್ರ ಸರಕಾರ‌ ಸಮ್ಮತಿ ನೀಡಿದರೂ, ಇದನ್ನು ಯಾವಾಗ ಆರಂಭ ಮಾಡಬೇಕು ಎಂದು ತೆಲಂಗಾಣ ಸರಕಾರ ಇನ್ನೂ ನಿರ್ಧರಿಸಿಲ್ಲ ಈ ಎಲ್ಲ ಗೊಂದಲಗಳ ನಡುವೆ ಆಗಸ್ಟ್‌ ನಲ್ಲಿ ಟೂರ್ನಿ ನಡೆಸುವ ಕುರಿತು ಖಚಿತತೆ ಕೊಡುವುದು ನಮಗೆ ತೀರಾ ಕಷ್ಟವಾಗಿತ್ತು ಎಂಬುದು ಪ್ರಧಾನ ರಾಷ್ಟ್ರೀಯ ಕೋಚ್‌ ಪುಲ್ಲೇಲ ಗೋಪಿಚಂದ್‌ ಅಭಿಪ್ರಾಯವಾಗಿದೆ.

ಇದೇ ವೇಳೆ ಆಸ್ಟ್ರೇಲಿಯನ್‌ ಓಪನ್‌ (ಜೂ. 2-7) ಮತ್ತು ಕೊರಿಯಾ ಓಪನ್‌ (ನ. 24-29) ಕೂಟಗಳನ್ನೂ ರದ್ದುಗೊಳಿಸಲಾಗಿದೆ. ಇದರೊಂದಿಗೆ ಪ್ರಸಕ್ತ ವರ್ಷದ 3 ಬ್ಯಾಡ್ಮಿಂಟನ್‌ ಪಂದ್ಯಾವಳಿಗಳನ್ನು ಕೋವಿಡ್ ಬಲಿ ಪಡೆದಂತಾಯಿತು.
ಇದರೊಂದಿಗೆ 2020ರ ಬ್ಯಾಡ್ಮಿಂಟನ್‌ ಕ್ಯಾಲೆಂಡರ್‌ನಲ್ಲಿ ಗಂಭೀರ ವ್ಯತ್ಯಯವೇನೂ ಆಗದು ಎಂಬುದಾಗಿ ಬಿಡಬ್ಲ್ಯುಎಫ್‌ ಹೇಳಿದೆ. ಆ. 25ರಿಂದ ಲಿಂಗ್‌ಶುಯಿ ಚೀನ ಮಾಸ್ಟರ್ ಕೂಟದೊಂದಿಗೆ ಬ್ಯಾಡ್ಮಿಂಟನ್‌ ಸರಣಿ ಮುಂದುವರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next