Advertisement

ಏಕದಿನ: ಜಯ ತಂದಿತ್ತ ಜಾಧವ್‌-ಧೋನಿ

12:30 AM Mar 03, 2019 | |

ಹೈದರಾಬಾದ್‌: ಟಿ20 ಸರಣಿಯಲ್ಲಿ ಆಸ್ಟ್ರೇಲಿಯ ಕೈಯಲ್ಲಿ ಭಾರೀ ಮುಖಭಂಗ ಅನುಭವಿಸಿದ್ದ ಭಾರತವೀಗ ಏಕದಿನದಲ್ಲಿ ತಿರುಗೇಟು ನೀಡಲು ಹೊರಟಿದೆ. ಶನಿವಾರ ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದು, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Advertisement

ಸಾಮಾನ್ಯ ಮೊತ್ತದ ಈ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ 7 ವಿಕೆಟಿಗೆ 236 ರನ್‌ ಗಳಿಸಿದರೆ, ಭಾರತ 48.2 ಓವರ್‌ಗಳಲ್ಲಿ 4 ವಿಕೆಟಿಗೆ 240 ರನ್‌ ಗಳಿಸಿ ಗೆಲುವಿನ ಸಂಭ್ರಮ ಆಚರಿಸಿತು. ಇದು ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ಸಾಧಿಸಿದ ಮೊದಲ ಜಯ. ಹಿಂದಿನೆರಡೂ ಪಂದ್ಯಗಳಲ್ಲಿ ಆತಿಥೇಯರಿಗೆ ಸೋಲು ಎದುರಾಗಿತ್ತು.

ಜಾಧವ್‌-ಧೋನಿ ಅಜೇಯ ಓಟ
24ನೇ ಓವರಿನಲ್ಲಿ ಭಾರತ 99 ರನ್ನಿಗೆ 4 ವಿಕೆಟ್‌ ಕಳೆದುಕೊಂಡಾಗ ಆಸ್ಟ್ರೇಲಿಯ ಮೇಲುಗೈ ಸಾಧಿಸುವ ಎಲ್ಲ ಲಕ್ಷಣ ಕಂಡುಬಂದಿತ್ತು. ಆದರೆ ಕಾಂಗರೂಗಳ ವಿಕೆಟ್‌ ಬೇಟೆ ಇಲ್ಲಿಗೇ ನಿಂತಿತು. 5ನೇ ವಿಕೆಟಿಗೆ ಜತೆಗೂಡಿದ ಮಹೇಂದ್ರ ಸಿಂಗ್‌ ಧೋನಿ ಮತ್ತು ಕೇದಾರ್‌ ಜಾಧವ್‌ ಆಸೀಸ್‌ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತ ಹೋದರು. ಭಾರತ ಗೆಲುವಿನತ್ತ ದಿಟ್ಟ ಹೆಜ್ಜೆಗಳನ್ನು ಇಡತೊಡಗಿತು.

ಧೋನಿ-ಜಾಧವ್‌ 24.5 ಓವರ್‌ಗಳ ಅಜೇಯ ಜತೆಯಾಟದಲ್ಲಿ 141 ರನ್‌ ಪೇರಿಸಿ ಭಾರತವನ್ನು ಸುರಕ್ಷಿತವಾಗಿ ದಡ ಮುಟ್ಟಿಸಿದರು. ಇಬ್ಬರೂ ಅಜೇಯ ಅರ್ಧ ಶತಕ ಬಾರಿಸಿ ಮೆರೆದರು. ಜಾಧವ್‌ ಗಳಿಕೆ 87 ಎಸೆತಗಳಿಂದ 81 ರನ್‌. ಸಿಡಿಸಿದ್ದು 9 ಫೋರ್‌, ಒಂದು ಸಿಕ್ಸರ್‌. ಇದು 55ನೇ ಪಂದ್ಯದಲ್ಲಿ ಜಾಧವ್‌ ದಾಖಲಿಸಿದ 5ನೇ ಫಿಫ್ಟಿ. ಒಂದು ವಿಕೆಟ್‌ ಕೂಡ ಉರುಳಿಸಿದ ಜಾಧವ್‌ಗೆ ಪಂದ್ಯಶ್ರೇಷ್ಠ ಗೌರವ ಒಲಿದು ಬಂತು.

ಅಭ್ಯಾಸ ವೇಳೆ ಗಾಯ ಮಾಡಿಕೊಂಡಿದ್ದ ಧೋನಿ ಈ ಪಂದ್ಯದಲ್ಲಿ ಆಡುವ ಬಗ್ಗೆ ಅನುಮಾನವಿತ್ತು. ಆದರೆ ಚೇತರಿಸಿಕೊಂಡು ಕಣಕ್ಕಿಳಿದ ಅವರು ಭಾರತದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಅಜೇಯ 59 ರನ್‌ 72 ಎಸೆತಗಳಿಂದ ಬಂತು. ಇದರಲ್ಲಿ 6 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು. ಇದು 339ನೇ ಪಂದ್ಯದಲ್ಲಿ ಧೋನಿ ಹೊಡೆದ 71ನೇ ಅರ್ಧ ಶತಕ.

Advertisement

ಆಸ್ಟ್ರೇಲಿಯದಂತೆ ಭಾರತ ಕೂಡ ಆರಂಭಿಕನೋರ್ವನನ್ನು ಸೊನ್ನೆಗೆ ಕಳೆದುಕೊಂಡಿತು. ಅಲ್ಲಿ ಆರನ್‌ ಫಿಂಚ್‌ ಈ ಸಂಕಟಕ್ಕೆ ಸಿಲುಕಿದರೆ, ಇಲ್ಲಿ ಶಿಖರ್‌ ಧವನ್‌ ಡಕ್‌ ಔಟ್‌ ಆದರು. ಸನ್‌ರೈಸರ್ ಪರ ಆಡುತ್ತಿದ್ದ ಧವನ್‌ ಪಾಲಿಗೆ ಇದು ಐಪಿಎಲ್‌ನ ತವರು ಅಂಗಳವಾಗಿತ್ತು. ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ ಮತ್ತೂಬ್ಬ ಆಟಗಾರ ಅಂಬಾಟಿ ರಾಯುಡು (13). ರೋಹಿತ್‌ 37, ಕೊಹ್ಲಿ 44 ರನ್‌ ಹೊಡೆದು ಗಮನ ಸೆಳೆದರು.

ಸೊನ್ನೆ ಸುತ್ತಿದ ಫಿಂಚ್‌
ಆಸ್ಟ್ರೇಲಿಯದ ನಾಯಕ ಆರನ್‌ ಫಿಂಚ್‌ ಪಾಲಿಗೆ ಇದು 100ನೇ ಪಂದ್ಯವಾಗಿತ್ತು. ಆದರೆ ಅವರ ಸಂಭ್ರಮಕ್ಕೆ ಬುಮ್ರಾ ಆಸ್ಪದ ಕೊಡಲಿಲ್ಲ. ಪಂದ್ಯದ 2ನೇ ಓವರ್‌ ಎಸೆಯಲು ಬಂದ ಅವರು 3ನೇ ಎಸೆತದಲ್ಲಿ ಆಸೀಸ್‌ ಕಪ್ತಾನನ್ನು ಕ್ಲೀನ್‌ಬೌಲ್ಡ್‌ ಮಾಡಿದರು. ಆಗ ಫಿಂಚ್‌ ರನ್‌ ಖಾತೆಯನ್ನೇ ತೆರೆದಿರಲಿಲ್ಲ!

ಮೊಹಮ್ಮದ್‌ ಶಮಿ-ಜಸ್‌ಪ್ರೀತ್‌ ಬುಮ್ರಾ ಜೋಡಿಯ ಮೊದಲ ಸ್ಪೆಲ್‌ ಅತ್ಯಂತ ಬಿಗುವಿನಿಂದ ಕೂಡಿತ್ತು. ಆಸ್ಟ್ರೇಲಿಯ ರನ್ನಿಗಾಗಿ ತೀವ್ರ ಪರದಾಟ ನಡೆಸಿತು. 10 ಓವರ್‌ಗಳ ಪವರ್‌-ಪ್ಲೇ ಅವಧಿಯಲ್ಲಿ ಒಟ್ಟುಗೂಡಿದ್ದು ಬರೀ 38 ರನ್‌.

ಉಸ್ಮಾನ್‌ ಖ್ವಾಜಾ-ಮಾರ್ಕಸ್‌ ಸ್ಟೋಯಿನಿಸ್‌ ದ್ವಿತೀಯ ವಿಕೆಟಿಗೆ 87 ರನ್‌ ಪೇರಿಸಿ ಕುಸಿತವನ್ನು ತಡೆದರೂ ರನ್‌ಗತಿಯಲ್ಲಿ ಕಾಂಗರೂ ಕುಂಟುತ್ತ ಹೋಯಿತು. ಸ್ಪಿನ್ನರ್‌ಗಳಾದ ಕುಲದೀಪ್‌ ಯಾದವ್‌-ರವೀಂದ್ರ ಜಡೇಜ ಕೂಡ ಆಸೀಸ್‌ಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಜಡೇಜ ವಿಕೆಟ್‌ ಕೀಳದೇ ಹೋದರೂ 10 ಓವರ್‌ಗಳಲ್ಲಿ ನೀಡಿದ್ದು 33 ರನ್‌ ಮಾತ್ರ. ಕುಲದೀಪ್‌, ಶಮಿ ಮತ್ತು ಬುಮ್ರಾ ತಲಾ 2 ವಿಕೆಟ್‌ ಉರುಳಿಸಿದರು. ಕೇದಾರ್‌ ಜಾಧವ್‌ಗೆ ಒಂದು ವಿಕೆಟ್‌ ಲಭಿಸಿತು. ಆದರೆ ದುಬಾರಿಯಾದದ್ದು ವಿಜಯ್‌ ಶಂಕರ್‌ ಮಾತ್ರ. ಇವರೆಲ್ಲ ಸೇರಿ 169 ಡಾಟ್‌ ಬಾಲ್‌ ಎಸೆದರು.

ಖ್ವಾಜಾ-ಮ್ಯಾಕ್ಸ್‌ವೆಲ್‌ ಹೋರಾಟ
ಆಸೀಸ್‌ ಸರದಿಯ ಏಕೈಕ ಅರ್ಧ ಶತಕ ಉಸ್ಮಾನ್‌ ಖ್ವಾಜಾ ಅವರಿಂದ ದಾಖಲಾಯಿತು. ಅವರು 76 ಎಸೆತಗಳಿಂದ ಭರ್ತಿ 50 ರನ್‌ ಹೊಡೆದರು (5 ಬೌಂಡರಿ, 1 ಸಿಕ್ಸರ್‌). ಇದು ಅವರ 6ನೇ ಫಿಫ್ಟಿ. ಬೆಂಗಳೂರು ಟಿ20 ಪಂದ್ಯದಲ್ಲಿ ಭಾರತದ ಬೌಲಿಂಗ್‌ ಮೇಲೆ ಸವಾರಿ ಮಾಡಿ ಶತಕ ಸಿಡಿಸಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಇಲ್ಲಿ 40 ರನ್‌ ಕೊಡುಗೆ ಸಲ್ಲಿಸಿದರು. 51 ಎಸೆತಗಳ ಈ ಆಟದಲ್ಲಿ 5 ಬೌಂಡರಿ ಸೇರಿತ್ತು.

ಕೆಳ ಕ್ರಮಾಂಕದ ಆಟಗಾರರಾದ ಕೀಪರ್‌ ಅಲೆಕ್ಸ್‌ ಕ್ಯಾರಿ 36 ರನ್‌ (37 ಎಸೆತ, 5 ಬೌಂಡರಿ), ನಥನ್‌ ಕೋಲ್ಟರ್‌ ನೈಲ್‌ 28 ರನ್‌ (27 ಎಸೆತ, 3 ಬೌಂಡರಿ) ಹೊಡೆದು ತಂಡದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿದರು. ಮೊದಲ ಏಕದಿನ ಪಂದ್ಯವಾಡಿದ ಆ್ಯಶrನ್‌ ಟರ್ನರ್‌ ಗಳಿಕೆ 21 ರನ್‌.

ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ

ಉಸ್ಮಾನ್‌ ಖ್ವಾಜಾ    ಸಿ ಶಂಕರ್‌ ಬಿ ಕುಲದೀಪ್‌    50
ಆರನ್‌ ಫಿಂಚ್‌    ಸಿ ಧೋನಿ ಬಿ ಬುಮ್ರಾ    0
ಮಾರ್ಕಸ್‌ ಸ್ಟೋಯಿನಿಸ್‌    ಸಿ ಕೊಹ್ಲಿ ಬಿ ಜಾಧವ್‌    37
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಸ್ಟಂಪ್ಡ್ ಧೋನಿ ಬಿ ಕುಲದೀಪ್‌    19
ಗ್ಲೆನ್‌ ಮ್ಯಾಕ್ಸ್‌ವೆಲ್‌    ಬಿ ಶಮಿ    40
ಆ್ಯಶrನ್‌ ಟರ್ನರ್‌    ಬಿ ಶಮಿ    21
ಅಲೆಕ್ಸ್‌ ಕ್ಯಾರಿ    ಔಟಾಗದೆ    36
ಕೋಲ್ಟರ್‌ ನೈಲ್‌    ಸಿ ಕೊಹ್ಲಿ ಬಿ ಬುಮ್ರಾ    28
ಪ್ಯಾಟ್‌ ಕಮಿನ್ಸ್‌    ಔಟಾಗದೆ    0
ಇತರ        5
ಒಟ್ಟು  (50 ಓವರ್‌ಗಳಲ್ಲಿ 7 ವಿಕೆಟಿಗೆ)        236
ವಿಕೆಟ್‌ ಪತನ: 1-0, 2-87, 3-97, 4-133, 5-169, 6-173, 7-235.
ಬೌಲಿಂಗ್‌:
ಮೊಹಮ್ಮದ್‌ ಶಮಿ        10-2-44-2
ಜಸ್‌ಪ್ರೀತ್‌ ಬುಮ್ರಾ        10-0-60-2
ವಿಜಯ್‌ ಶಂಕರ್‌        3-0-22-0
ಕುಲದೀಪ್‌ ಯಾದವ್‌        10-0-46-2
ರವೀಂದ್ರ ಜಡೇಜ        10-0-33-0
ಕೇದಾರ್‌ ಜಾಧವ್‌        7-0-31-1

ಭಾರತ
ರೋಹಿತ್‌ ಶರ್ಮ    ಸಿ ಫಿಂಚ್‌ ಬಿ ನೈಲ್‌    37
ಶಿಖರ್‌ ಧವನ್‌    ಸಿ ಮ್ಯಾಕ್ಸ್‌ವೆಲ್‌ ಬಿ ನೈಲ್‌    0
ವಿರಾಟ್‌ ಕೊಹ್ಲಿ    ಎಲ್‌ಬಿಡಬ್ಲ್ಯು ಝಂಪ    44
ಅಂಬಾಟಿ ರಾಯುಡು    ಸಿ ಕ್ಯಾರಿ ಬಿ ಝಂಪ    13
ಎಂ.ಎಸ್‌. ಧೋನಿ    ಔಟಾಗದೆ    59
ಕೇದಾರ್‌ ಜಾಧವ್‌    ಔಟಾಗದೆ    81
ಇತರ        6
ಒಟ್ಟು  (48.2 ಓವರ್‌ಗಳಲ್ಲಿ 4 ವಿಕೆಟಿಗೆ)        240
ವಿಕೆಟ್‌ ಪತನ: 1-4, 2-80, 3-95, 4-99.
ಬೌಲಿಂಗ್‌:
ಜಾಸನ್‌ ಬೆಹೆÅಂಡಾಫ್ì        10-0-46-0
ನಥನ್‌ ಕೋಲ್ಟರ್‌ ನೈಲ್‌        9-2-46-2
ಪ್ಯಾಟ್‌ ಕಮಿನ್ಸ್‌        10-0-46-0
ಆ್ಯಡಂ ಝಂಪ        10-0-49-2
ಮಾರ್ಕಸ್‌ ಸ್ಟೋಯಿನಿಸ್‌        9.2-0-52-0
ಪಂದ್ಯಶ್ರೇಷ್ಠ: ಕೇದಾರ್‌ ಜಾಧವ್‌
2ನೇ ಪಂದ್ಯ: ನಾಗ್ಪುರ (ಮಂಗಳವಾರ)

Advertisement

Udayavani is now on Telegram. Click here to join our channel and stay updated with the latest news.

Next