ಬೆಂಗಳೂರು: ರಾಯಚೂರು, ಕಲಬುರಗಿ ಸೇರಿದಂತೆ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಶುಕ್ರವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಕುರುಗೋಡಿನಲ್ಲಿ ರಾಜ್ಯದಲ್ಲಿಯೇ ಅಧಿಕ, 10 ಸೆಂ.ಮೀ.ಗಳಷ್ಟು ಮಳೆ ಸುರಿಯಿತು.
ರಾಯಚೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಗ್ರಾಮಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. 30ಕ್ಕೂ ಹೆಚ್ಚು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 70,000 ಕ್ಯುಸೆಕ್ ನೀರು ಬಿಡಲಾಗುತ್ತಿದ್ದು, ನದಿ ದಡದ ಗ್ರಾಮಗಳ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಮಾನ್ವಿಯಲ್ಲಿ ಮನೆ ಕುಸಿದು ಐವರು ಗಾಯಗೊಂಡಿದ್ದು, ಅವರನ್ನು ರಿಮ್ಸ್‌ಗೆ ದಾಖಲಿಸಲಾಗಿದೆ.
ಕಲಬುರಗಿ ಜಿಲ್ಲೆ ಆಳಂದ ಸಮೀಪದ ತಡಕಲ್ ಮಾರ್ಗದ ಹೆದ್ದಾರಿ ರಸ್ತೆಯ ಸೇತುವೆ ಕೊಚ್ಚಿ ಹೋಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ತೊಗರಿ, ಸೂರ್ಯಕಾಂತಿ, ಸೋಯಾಬಿನ್ ಬೆಳೆಗಳು ಹಾನಿಗೊಳಗಾಗಿವೆ. ಗಂಡೋರಿ ನಾಲಾ ಜಲಾಶಯ ಹಾಗೂ ಅಮರ್ಜಾ ಜಲಾನಯನ ಪ್ರದೇಶ ವ್ಯಾಪ್ತಿಯ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಬಳ್ಳಾರಿ ಜಿಲ್ಲೆಯಾದ್ಯಂತ ಸುರಿದ ಮಳೆಗೆ ತುಂಗಭದ್ರಾ ಜಲಾಶಯದ ಎಸ್ಕೇಪ್ ಗೇಟ್ ಒಡೆದಿದ್ದು, 2 ಸಾವಿರಕ್ಕೂ ಹೆಚ್ಚು ಎಕರೆ ಬೆಳೆ ನಷ್ಟವಾಗಿದೆ. ಈ ಭಾಗದಲ್ಲಿ ಬಿತ್ತನೆ ಮಾಡಲಾಗಿದ್ದ ಮೆಣಸಿನಕಾಯಿ, ಭತ್ತ, ತೊಗರಿ, ನವಣೆ, ಸಜ್ಜೆ ಬೆಳೆಗಳು ಸಂಪೂರ್ಣ ಹಾಳಾಗಿವೆ. 79ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ. ಬಳ್ಳಾರಿ ಮತ್ತು ಸಿರುಗುಪ್ಪ ನಗರಗಳಲ್ಲಿನ ತಗ್ಗು ಪ್ರದೇಶ ಮತ್ತು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇದೇ ವೇಳೆ, ಕರಾವಳಿ, ಮಲೆನಾಡಿನ ಹಲವೆಡೆಯೂ ಮಳೆಯಾದ ವರದಿಯಾಗಿದೆ.
ಇಂದೂ ಮಳೆ ಸಾಧ್ಯತೆ: ಭಾನುವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ಎಲ್ಲೆಡೆ, ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದೆ. ಕರಾವಳಿಯ ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.