ವಿಧಾನಪರಿಷತ್ತು: ಹೈದರಾಬಾದ್ ಕರ್ನಾಟಕ ಭಾಗದಲ್ಲಿ 371 ಜೆ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಚಿವ ಸಂಪುಟದ ಉಪಸಮಿತಿಯ ಶಿಫಾರಸ್ಸಿನಂತೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.
ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಅವರು ಗಮನಸೆಳೆಯುವ ಸೂಚನೆಯಡಿ ಪ್ರಸ್ತಾಪಿಸಿದ ವಿಷಯಕ್ಕೆ ಮುಖ್ಯಮಂತ್ರಿಯವರ ಪರವಾಗಿ ಉತ್ತರಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಖಾಲಿ ಹುದ್ದೆಗಳಲ್ಲಿ 2 ತಿಂಗಳಲ್ಲಿ ನೇರ ನೇಮಕಾತಿ ಹಾಗೂ 1 ತಿಂಗಳಲ್ಲಿ ಬಡ್ತಿ ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಸಂಪುಟದ ಉಪಸಮಿತಿ ಶಿಫಾರಸು ಮಾಡಿದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೈದರಾಬಾದ್ ಕರ್ನಾಟಕದ ಭಾಗದಲ್ಲಿ 371 ಜೆ ಅಡಿಯಲ್ಲಿನ ಹುದ್ದೆಗಳಲ್ಲಿ ಗ್ರೂಪ್ ಎ ಮತ್ತು ಬಿ ಹುದ್ದೆಗಳಲ್ಲಿ ಶೇ.75, ಸಿ ಗ್ರೂಪ್‌ಗೆ ಶೇ.80 ಹಾಗೂ ಡಿ ಗ್ರೂಪ್ ಹುದ್ದೆಗಳಲ್ಲಿ ಶೇ.85ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು. ಅದೇ ರೀತಿ ಹೈದರಾಬಾದ್ ಕರ್ನಾಟಕದ ಹೊರಗಿನ ಭಾಗದ ಹುದ್ದೆಗಳಲ್ಲಿ ಶೇ.8ರಷ್ಟು ಮೀಸಲಾತಿ ನೀಡಬೇಕು ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಅನುಮೋದನೆ ಬೇಕಿಲ್ಲ. ಆದರೆ, ಕೊರೊನಾ ಕಾರಣಕ್ಕೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹಿಂಜರಿತವಾಗಿರುವಾಗ ಆರ್ಥಿಕ ಇಲಾಖೆಯ ಅನುಮೋದನೆ ಅಥವಾ ಸಹಮತ ಪಡೆದುಕೊಂಡೇ ಮುಂದಕ್ಕೆ ಹೋಗಬೇಕಾಗುತ್ತದೆ. ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ:ಖಾತೆಯಲ್ಲಿ ಹೆಸರು ಸೇರ್ಪಡೆಗೆ ಲಂಚ : ಎಸಿಬಿ ಬಲೆಗೆ ಬಿದ್ದ ಸಿಟಿ ಸರ್ವೇಯರ್
13 ಸಾವಿರ ಹುದ್ದೆಗಳು ಖಾಲಿ: ಹೈದರಬಾದ ಕರ್ನಾಟಕ ಭಾಗದಲ್ಲಿ ಒಟ್ಟು 13 ಸಾವಿರ ಹುದ್ದೆಗಳು ಖಾಲಿ ಇದ್ದಾವೆ. 371 ಜೆ ಜಾರಿಗೆ ಬಂದು 10 ವರ್ಷಗಳಾದರೂ ಪರಿಸ್ಥಿತಿ ಹೀಗೆಯೇ ಇದ್ದರೆ, ತಿಳಿದೋ ತಿಳಿದೋ ಆ ಭಾಗಕ್ಕೆ ಅನ್ಯಾಯ ಮಾಡಿದಂತೆ. ಅಭಿವೃದ್ಧಿಗೆ ಮುಖ್ಯವಾಗಿ ಬೇಕಿರುವುದು ಹುದ್ದೆಗಳು.
ಹುದ್ದೆಗಳೇ ಖಾಲಿ ಇರುವಾಗ 371ಜೆ ಬಂದೂ ಇಲ್ಲದಂತಾಗಿದೆ. ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದರೆ ಆ ಭಾಗದ ಜನರ ಕಲ್ಯಾಣ ಆಗಲ್ಲ. ಸರ್ಕಾರ ಹುದ್ದೆಗಳನ್ನು ಭರ್ತಿ ಮಾಡಬೇಕು ಮತ್ತು ಅನುದಾನ ನೀಡಬೇಕು ಎಂದು ಯು.ಬಿ. ವೆಂಕಟೇಶ್ ಆಗ್ರಹಿಸಿದರು.